ಹರಪನಹಳ್ಳಿ: ತಾಲೂಕಿನ ಹೊಸಕೋಟೆ ಗ್ರಾಮದ ಸಹಕಾರ ಸಂಘದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿ ಅಖಿಲ ಭಾರತ ಕಿಸಾನ್ ಸಭಾದ ಕಾರ್ಯಕರ್ತರು ಸೋಮವಾರ ಸಹಕಾರ ಸಂಘದ ಕಚೇರಿ ಎದುರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರ ನೀಡಿದರೂ ಕಾರ್ಯದರ್ಶಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರ ಹಣ ಹಿಂದಿರುಗಿಸಿಲ್ಲ. ಈ ಹಣವನ್ನು ಹಿಂದಿರುಗಿಸುವವರೆಗೂ ನಿರಂತರ ಧರಣಿ ಮಾಡಲಾಗುವುದು ಎಂದು ತಿಳಿಸಿದರು.
ರೈತ ಮುಖಂಡ ಬೊಮ್ಮಲಿಂಗಪ್ಪ ಮಾತನಾಡಿ, ರೈತರ ಹಣವನ್ನು ದುರುಪಯೋಗ ಮಾಡಿಕೊಂಡು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಾಕಷ್ಟು ಆಸ್ತಿಗಳನ್ನು ಮಾಡಿದ್ದಾನೆ. ರೈತರು ಹಣ ಕೇಳಿದರೆ ನಾನು ಯಾವುದೇ ಹಣವನ್ನು ದುರುಪಯೋಗ ಪಡಿಸಿಕೊಂಡಿಲ್ಲ; ಸಂಘದಲ್ಲಿ ಇದೆ ಎಂದು ವಾದಿಸುತ್ತಾರೆ ಎಂದು ಹೇಳಿದರು.ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಅಧಿಕಾರಕ್ಕೆ ಬಂದು ಒಂಬತ್ತು ತಿಂಗಳವಾಗಿದೆ. ಈ ಹಿಂದಿನ ಆಡಳಿತ ಮಂಡಳಿಯವರ ಕಾಲಘಟ್ಟದಲ್ಲಿ ಅವ್ಯವಹಾರವಾಗಿದೆ. ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅವ್ಯವಹಾರ ನಡೆದಿಲ್ಲ. ನೀವು ಕೊಟ್ಟಿರುವ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು
ಈ ಸಂದರ್ಭದಲ್ಲಿ ರೈತ ಮುಖಂಡರಾದ ಅವರಗೆರೆಮನಿ ರುದ್ರಮುನಿ, ಬೂದಿಹಾಳ ಸಿದ್ದೇಶ, ಕಲ್ಲಳ್ಳಿ ಮಹೇಶ್, ಅಂಜನಪ್ಪ ಕೆ.ಎಂ., ಸಂತೋಷ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಜಾತಪ್ಪ, ಬಸವರಾಜ ಹೊಸ್ಮನೆ, ನಾಗರಾಜಪ್ಪ, ಹುಣಸಿಕಟ್ಟೆ ಮರುಳು ಸಿದ್ದಪ್ಪ ಪಾಲ್ಗೊಂಡಿದ್ದರು.