ದೊಡ್ಡಬಳ್ಳಾಪುರ: ಕಾಮಗಾರಿ ಪೂರ್ಣಗೊಂಡಿರುವ ಇಎಸ್ಐ ಆಸ್ಫತ್ರೆಯನ್ನು ಎರಡು ತಿಂಗಳಲ್ಲಿ ಉದ್ಘಾಟನೆ ಮಾಡದೆ ಹೋದರೆ ತೀವ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಕಾರ್ಮಿಕ ಮುಖಂಡ ಪಿಎ.ವೆಂಕಟೇಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇಲ್ಲಿನ ತಾಲೂಕು ಕಚೇರಿ ವೃತ್ತದಲ್ಲಿ ಸಿಪಿಎಂ ಆಯೋಜಿಸಿದ್ದ 9ನೇ ತಾಲೂಕು ಸಮ್ಮೇಳನ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ನೇಯ್ಗೆ ಉದ್ಯಮದಲ್ಲಿ ರಾಜ್ಯದಲ್ಲಿ ಹೆಸರು ಮಾಡಿದೆ. ಸುಮಾರು 35 ಸಾವಿರ ವಿದ್ಯುತ್ ಮಗ್ಗಗಳಿವೆ. ಬಾಶೆಟ್ಟಿಹಳ್ಳಿ ಕಾರ್ಖಾನೆ ವಲಯದಲ್ಲಿ ಸಹಸ್ರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಯಾವ ವಿಚಾರಗಳನ್ನು ಮುಂದೆ ಮಾಡುತ್ತಾರೆ ಎಂಬುದು ಮುಖ್ಯವಾಗಬೇಕು. ರಾಜಕಾರಣಿಗಳಿಗೆ ಕೇವಲ ನಮ್ಮ ಮತ ಮಾತ್ರ ಬೇಕು, ಸಮಸ್ಯೆಗಳು ಬೇಕಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಎಲ್ಲೆಲ್ಲೂ ಲಂಚ:ತಾಲೂಕಿನಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಲಂಚವಿಲ್ಲದೆ ತಾಲೂಕು ಕಚೇರಿ, ಕಂದಾಯ ಇಲಾಖೆ, ಪಂಚಾಯತಿಗಳಲ್ಲಿ ಕಾಸಿಲ್ಲದೆ ಕೆಲಸವಾಗಲ್ಲ. ಇ ಖಾತೆ ಮಾಡಿಸಲು ಗ್ರಾಮ ಪಂಚಾಯಿತಿಗಾದರೆ ₹20 ಸಾವಿರ, ನಗರಸಭೆಯಾದರೆ ₹40 ಸಾವಿರ ಕೊಡಬೇಕಾದ ಪರಿಸ್ಥಿತಿ ಇದೆ. ನಗರದ ರಸ್ತೆಗಳು ಗುಂಡಿ ಬಿದ್ದಿವೆ. ರೇಷನ್ ಕಾರ್ಡ್ ರದ್ದಾಗಿವೆ. ಈ ಸಮಸ್ಯೆಗಳು ಜನಪ್ರತಿನಿಧಿಗಳಿಗೆ ಬೇಕಿಲ್ಲವೇ ಎಂದು ಪ್ರಶ್ನಿಸಿದರು.
ಆತ್ಮಹತ್ಯೆ ಹಾದಿಯಲ್ಲಿ ನೇಕಾರರು:ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ರೈತರು ಮತ್ತು ನೇಕಾರರ ಬಾಯಿಗೆ ತುಪ್ಪ ಸವರುತ್ತಾರೆ. ರಾಜ್ಯದಲ್ಲಿ 51 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೊಡ್ಡಬಳ್ಳಾಪುರದಲ್ಲೂ ಒಬ್ಬರು ನೇಣು ಬಿಗಿದುಕೊಂಡರು. ಟೆಕ್ಸ್‌ಟೈಲ್ ನೀತಿ ಬಂಡವಾಳಶಾಹಿಗಳ ಪರ ತರುತ್ತಾರೆ. ನೇಕಾರ ವಿರೋಧಿ ನೀತಿಗಳಿಂದ ಸಾಲ ತೀರಿಸಲಾಗದೆ ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ನೇಕಾರರು ತಾಲೂಕಿನಲ್ಲಿದ್ದಾರೆ. ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ 19 ಸೌಲಭ್ಯಗಳನ್ನು ನೇಕಾರರಿಗೂ ಕೊಡಬೇಕು ಎಂದು ಕೋವಿಡ್ ಸಂದರ್ಭದಲ್ಲಿ ಮಾಡಿದ ಹೋರಾಟದ ಫಲವಾಗಿ ಸರ್ಕಾರ ನೇಕಾರರಿಗೆ 5 ಸಾವಿರ ರು.ಕೊಡುತ್ತಿದೆ ಎಂದರು.
ಕೇಂದ್ರ ಸರ್ಕಾರ ಕಾರ್ಮಿಕರ ಪರವಾಗಿದ್ದ 29 ಕಾಯ್ದೆಗಳನ್ನು ರೂಪಾಂತರಗೊಳಿಸಿ ಮಾಲೀಕರ ಪರವಾದ ಕೋಡ್ ಆಗಿ ಬದಲಾಯಿಸಿದ್ದಾರೆ. ಕಾರ್ಮಿಕರನ್ನು ಯಾವುದೇ ಸಂದರ್ಭದಲ್ಲಿ ಮಾಲೀಕ ಬಳಸಿ ಬಿಸಾಡಬಹುದು. 12 ಗಂಟೆ ಕೆಲಸ, ಫಿಎಫ್, ಇಎಸ್ಐ ಬಗ್ಗೆ ಕಾರ್ಮಿಕನ ಮೇಲೆ ನಡೆಯುವ ಶೋಷಣೆ ದಬ್ಬಾಳಿಕೆ ಬಗ್ಗೆ ಪ್ರಶ್ನೆ ಮಾಡಿದರೆ ನೋಟಿಸ್ ನೀಡದೆ ಕೆಲಸದಿಂದ ತೆಗೆಯಬಹುದಾಗಿದೆ. ಇದು ಕಾರ್ಮಿಕ ವಿರೋಧಿ ಸರ್ಕಾರದ ಜನಪರ ಕೆಲಸ ಎಂದು ವ್ಯಂಗ್ಯವಾಡಿದರು.ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಗೆ 3 ಲಕ್ಷ ಕೋಟಿ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ. ನಮ್ಮ ಬೇಡಿಕೆಗಳು ಈಡೇರಬೇಕಾದರೆ ಹತ್ತಾರು ವರ್ಷಗಳು ಹೋರಾಟ ಮಾಡಬೇಕು, ಹೋರಾಟ ಮಾಡದೆ ಯಾವುದೇ ಹಕ್ಕುಗಳನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಬಾಶೆಟ್ಟಿಹಳ್ಳಿಯ 3ನೇ ಹಂತದ ಕೈಗಾರಿಕಾ ಪ್ರದೇಶವಾದ ಅರೆಹಳ್ಳಿ-ಗುಡ್ಡದಹಳ್ಳಿಯಲ್ಲಿ ಹತ್ತು ವರ್ಷಗಳ ಹಿಂದೆ ಹತ್ತಾರು ತಿಂಗಳು ಹೋರಾಟ ಮಾಡಿದ ಫಲವಾಗಿ ಇಎಸ್ಐ ಆಸ್ಪತ್ರೆ ಮಂಜೂರು ಆಯ್ತು 85 ಕೋಟಿ ಬಿಡುಗಡೆ ಆಯ್ತು. ಅದು ಸರ್ಕಾರದ ಹಣವಲ್ಲ, ಅದು ನಮ್ಮ ಕಾರ್ಮಿಕರ ಹಣ ಎಂದು ಹೇಳಿದರು.ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಗೋಪಾಲ ಕೃಷ್ಣ, ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ತಾಲೂಕು ಪ್ರಧಾನ ಕಾರ್ಯದರ್ಶಿ ರುದ್ರಾರಾಧ್ಯ, ಮುಖಂಡರಾದ ರೇಣುಕಾರಾಧ್ಯ, ರಘುಕುಮಾರ್, ಚೌಡಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
22ಕೆಡಿಬಿಪಿ2-ದೊಡ್ಡಬಳ್ಳಾಪುರದಲ್ಲಿ ಸಿಪಿಎಂ 9ನೇ ತಾಲೂಕು ಸಮ್ಮೇಳನದಲ್ಲಿ ಕಾರ್ಮಿಕ ಮುಖಂಡ ಪಿ.ಎ.ವೆಂಕಟೇಶ್ ಮಾತನಾಡಿದರು.