ಭ್ರಷ್ಟಾಚಾರ: ತೆಂಡೇಕೆರೆ ಪಿಡಿಒ ಅಮಾನತಿಗೆ ಗ್ರಾಪಂ ಸದಸ್ಯರ ಆಗ್ರಹ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ಪಿಡಿಒ ವಿರುದ್ಧ ನೀಡಿದ ದೂರಿನ ಮೇರೆಗೆ ತಾಪಂ ಇಒ ಸಮಗ್ರ ತನಿಖೆ ನಡೆಸಿ 63 ಪುಟಗಳ ತನಿಖಾ ವರದಿಯನ್ನು ಜಿಪಂ ಸಿಇಒಗೆ ಸಲ್ಲಿಸಿದ್ದಾರೆ. ತಾಪಂ ಇಒ ವರದಿ ಆಧರಿಸಿ ಜಿಪಂ ಮುಖ್ಯ ಕಾರ್ಯದರ್ಶಿಗಳು ಸದರಿ ಪಿಡಿಒ ಅವರನ್ನು ಅಮಾನತುಗೊಳಿಸುವಂತೆ ಮೂರು ಬಾರಿ ಸೂಚಿಸಿದ್ದರು. ಆದರೆ, ಜಿಪಂ 1ನೇ ಉಪ ಕಾರ್ಯದರ್ಶಿ ಅವರು ಪಿಡಿಒ ರಕ್ಷಣೆಗೆ ನಿಂತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಗ್ರಾಪಂನಲ್ಲಿ ಲಕ್ಷಾಂತರ ರು. ಹಣ ದುರಪಯೋಗ ಪಡಿಸಿಕೊಂಡಿರುವ ತೆಂಡೇಕೆರೆ ಗ್ರಾಪಂ ಪಿಡಿಒ ಕೆ.ಎನ್.ಜಯಕುಮಾರ್ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಕೆಲ ಸದಸ್ಯರು, ಮುಖಂಡರು ಆಗ್ರಹಿಸಿದರು.

ಗ್ರಾಪಂ ಆವರಣದಲ್ಲಿ ಸದಸ್ಯ ಎ.ಎನ್ .ಶಿವಲಿಂಗ ನೇತೃತ್ವದಲ್ಲಿ ಸದಸ್ಯರು, ಮುಖಂಡರು ಪಿಡಿಒ ಭ್ರಷ್ಟಾಚಾರ ಕುರಿತು ದಾಖಲೆ ಬಿಡುಗಡೆ ಮಾಡಿ ಕೂಡಲೇ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಗ್ರಾಪಂ ಭ್ರಷ್ಟಾಚಾರದ ಬೀಡಾಗಿದೆ. ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಿ ಪಂಚಾಯ್ತಿ ಸಭೆಯಲ್ಲಿ ಅನುಮೋದನೆ ಪಡೆಯುತ್ತಿಲ್ಲ. ಪಿಡಿಒ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಮನೆ ಮತ್ತಿತರ ಸರ್ಕಾರದ ವಿವಿಧ ಯೋಜನೆಗಳ ಜಿಪಿಎಸ್ ಮಾಡಲು ಗ್ರಾಮೀಣ ಫಲಾನುಭವಿಗಳು ಸಾವಿರಾರು ರುಪಾಯಿ ಹಣಕೊಡಬೇಕಾಗಿದೆ ಎಂದು ದೂರಿದರು.

ಆಸ್ತಿಗಳ ಇ-ಸ್ವತ್ತು ಮಾಡಲು ಸಾರ್ವಜನಿಕರು 50ರಿಂದ 60 ಸಾವಿರ ರು. ನೀಡಬೇಕಾಗಿದೆ. ಜಲ ಜೀವನ್ ಮಿಷನ್ ಯೋಜನೆ ಉದ್ಘಾಟನೆಗೆ ಇತ್ತೀಚೆಗೆ ಸಂಸದೆ ಸುಮಲತಾ ತೆಂಡೇಕೆರೆ ಗ್ರಾಪಂಗೆ ಕೇವಲ 10 ನಿಮಿಷಗಳ ಭೇಟಿ ನೀಡಿದ್ದರು. ಸಂಸದರಿಗೆ ಹಾರ ತುರಾಯಿ, ಡ್ರೈಫ್ರೋಟ್ಸ್ ಸೇರಿ 14,300 ರು. ಬಿಲ್ ಬರೆದುಕೊಂಡು ಪಂಚಾಯ್ತಿಯನ್ನು ವಂಚಿಸಿದ್ದಾರೆ ಎಂದು ಆರೋಪಿಸಿದರು.

ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕೇವಲ 2 ಗಂಟೆಗಳ ಕಾಲ ಜೆಸಿಬಿ ಕೆಲಸ ಮಾಡಿಸಿ 1,57,000 ಬಿಲ್ ಬರೆದುಕೊಂಡಿದ್ದಾರೆ. ಗ್ರಾಪಂನಲ್ಲಿ ಯಾವುದೇ ಕ್ರಿಯಾ ಯೋಜನೆಗಳಿಗೆ ಅನುಮತಿ ಪಡೆಯದೆ ಹಂಗಾಮಿ ನೌಕರ ರಂಗಸ್ವಾಮಿ ಹೆಸರಿಗೆ 1,94,777 ರು.ಗಳನ್ನು ಜಮೆ ಮಾಡಿ ದುರ್ಬಳಕೆ ಮಾಡಿದ್ದಾರೆ ಎಂದು ದೂರಿದರು.

ಸ್ವಚ್ಛತೆ ಹೆಸರಿನಲ್ಲಿ ಪಂಚಾಯ್ತಿ ವ್ಯಾಪ್ತಿಯ ಎಂ.ಹೊಸೂರು, ರಂಗೇಗೌಡನ ಕೊಪ್ಪಲು, ಅಂಚನಹಳ್ಳಿ, ಚಟ್ಟಂಗೆರೆ ಎಂದು ದಾಖಲಿಸಿ 53,150 ರು, ಮತ್ತೆ ತೆಂಡೇಕೆರೆ, ಅಂಚೆಮುದ್ದನಹಳ್ಳಿ, ಬಳ್ಳೇಕೆರೆ ಗ್ರಾಮ ಸ್ವಚ್ಛತೆಗೆ 45 ಸಾವಿರ ರು. ಡಿಸಿ ಬಿಲ್ ಮಾಡಿ ವಂಚಿಸಿದ್ದಾರೆ ಎಂದರು.

ಸಿಬ್ಬಂದಿ ಸಮವಸ್ತ್ರದ ಹೆಸರಿನಲ್ಲಿ 57,520 ಪು, ವೆಚ್ಚ ತೋರಿಸಿ ಹಣ ದುರುಪಯೋಗ ಮಾಡಿದ್ದಾರೆ. ಸ್ವಚ್ಛತಾ ಕೆಲಸ ಮಾಡುವ ಕಾರ್ಮಿಕರಿಗೆ ಸಕಾಲಕ್ಕೆ ಹಣ ಪಾವತಿಸದೆ ವಂಚಿಸುತ್ತಿದ್ದಾರೆ ಎಂದು ಸುಮಾರು 23 ಪ್ರಕರಣಗಳ ಕುರಿತು ಗಂಭೀರ ಆರೋಪ ಮಾಡಿದರು.

ಪಿಡಿಒ ವಿರುದ್ಧ ನಾವು ನೀಡಿದ ದೂರಿನ ಮೇರೆಗೆ ತಾಪಂ ಇಒ ಸಮಗ್ರ ತನಿಖೆ ನಡೆಸಿ 63 ಪುಟಗಳ ತನಿಖಾ ವರದಿಯನ್ನು ಜಿಪಂ ಸಿಇಒಗೆ ಸಲ್ಲಿಸಿದ್ದಾರೆ. ತಾಪಂ ಇಒ ವರದಿ ಆಧರಿಸಿ ಜಿಪಂ ಮುಖ್ಯ ಕಾರ್ಯದರ್ಶಿಗಳು ಸದರಿ ಪಿಡಿಒ ಅವರನ್ನು ಅಮಾನತ್ತುಗೊಳಿಸುವಂತೆ ಮೂರು ಬಾರಿ ಸೂಚಿಸಿದ್ದರು ಜಿಪಂ 1ನೇ ಉಪ ಕಾರ್ಯದರ್ಶಿ( ಡಿ.ಎಸ್.01) ಬಾಬು ಅವರು ಪಿಡಿಒ ರಕ್ಷಣೆಗೆ ನಿಂತಿದ್ದಾರೆ ಎಂದರು.

ಗ್ರಾಪಂ ಸದಸ್ಯರು ಡಿಎಸ್ 1 ಅವರನ್ನು ಖುದ್ದು ಭೇಟಿ ಮಾಡಿದಾಗ ಮತ್ತೊಮ್ಮೆ ತನಿಖೆ ಮಾಡಿಸುವುದಾಗಿ ಹೇಳಿ ಆರೋಪಿಯ ರಕ್ಷಣೆಗೆ ನಿಂತರು. ಈಗಾಗಲೇ ತನಿಖೆ ಮುಗಿದಿರುವುದರಿಂದ ಮತ್ತೊಮ್ಮೆ ತನಿಖೆ ಅಗತ್ಯವೇನು ಎಂದು ನಾವು ಪ್ರಶ್ನಿಸಿದಾಗ ಆರೋಪಿಯನ್ನು ಅಮಾನತುಗೊಳಿಸುವುದಾಗಿ ತಿಳಿಸಿದ ಡಿ.ಎಸ್.1 ಬಾಬು ಇದುವರೆಗೂ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬದಲಾಗಿ ಸ್ಥಳೀಯ ತಾಪಂ ಇಒ ಅವರ ಮೇಲೆ ಒತ್ತಡ ಹಾಕಿ ಪಿಡಿಒ ಸಮಸ್ಯೆಯನ್ನು ಸ್ಥಳೀಯವಾಗಿಯೇ ಬಗೆಹರಿಸಿ ಎನ್ನುತ್ತಿದ್ದಾರೆ. ಡಿಎಸ್ 1 ಸರ್ಕಾರದ ಕೆಲಸ ಮಾಡದೆ ಮಧ್ಯವರ್ತಿ ರೀತಿ ಕೆಲಸ ಮಾಡಿ ಭ್ರಷ್ಟ ಪಿಡಿಒ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿದರು.

ತಕ್ಷಣವೇ ಪಿಡಿಒ ಅವರನ್ನು ಅಮಾನತುಗೊಳಿಸಿ ಪಂಚಾಯ್ತಿ ಅಭಿವೃದ್ಧಿ ಕಾರ್ಯಕ್ಕೆ ಸುಗಮ ಮಾರ್ಗ ತೋರಿಸಬೇಕು. ಇಲ್ಲದಿದ್ದರೆ ಪಿಡಿಒ ವಿರುದ್ಧ ಕ್ರಮ ಜರುಗಿಸುವವರೆಗೂ ತಾಪಂ ಕಚೇರಿ ಎದುರು ಹಮ್ಮಿಕೊಳ್ಳುವುದಾಗಿ ಮುಖಂಡರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಉಪಾಧ್ಯಕ್ಷೆ ನಾಗರತ್ನ ಗಂಗಾಧರ್, ಸದಸ್ಯರಾದ ಎ.ಎನ್.ಶಿವಲಿಂಗ, ರವಿಕುಮಾರ್, ಹೇಮಂತ್, ಸವಿತಾ ಗೋವಿಂದಶೆಟ್ಟಿ, ಅಂಚನಹಳ್ಳಿ ರಾಜು, ಮುಖಂಡರಾದ ಎ.ಎನ್. ಬಸವರಾಜೇಗೌಡ, ಬಸವರಾಜು, ಮಲ್ಕೋನಹಳ್ಳಿ ಎಂ.ಜಿ.ಸ್ವಾಮಿ, ಶ್ರೀಕಂಠು, ಅಂಚೇಮುದ್ದನಹಳ್ಳಿ ಮಂಜೇಗೌಡ, ಕುಂಟಾಚಾರಿ, ರಾಮೇಗೌಡ ಸೇರಿದಂತೆ ಹಲವರು ಇದ್ದರು.

Share this article