ಮನುಷ್ಯರಲ್ಲಿನ ಅತಿಯಾಸೆಯಿಂದ ಭ್ರಷ್ಟಾಚಾರ ಹುಟ್ಟಿಕೊಂಡಿದೆ: ರಾಮನಗರ ಲೋಕಾಯುಕ್ತ ಎಸ್ಪಿ ಪಿ.ವಿ.ಸ್ನೇಹ

KannadaprabhaNewsNetwork | Published : Apr 22, 2025 1:47 AM

ಸಾರಾಂಶ

ವಿದ್ಯಾರ್ಥಿನಿಯರು ಭ್ರಷ್ಟಾಚಾರ ತಡೆಯಲು ಅರಿವು ಹೆಚ್ಚಿಸಿಕೊಳ್ಳಬೇಕು. ಲಂಚ- ಭ್ರಷ್ಟಾಚಾರ ಎಂದರೆ ವೈಯಕ್ತಿಕವಾಗಿ ಒಬ್ಬ ಸರ್ಕಾರಿ ನೌಕರ ತನ್ನ ಸ್ವಂತಕ್ಕಾಗಿ ಅಥವಾ ತನ್ನ ಕುಟುಂಬಕ್ಕಾಗಿ ಹೆಚ್ಚಿನ ಲಾಭ ಪಡೆಯಲಿಕ್ಕೋಸ್ಕರ ಸಂಬಳ ಪಡೆಯುತ್ತಿದ್ದರೂ ಹಣ ಪಡೆದರೆ ಅದು ಭ್ರಷ್ಟಾಚಾರ- ಲಂಚವಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಮಾಜದಲ್ಲಿ ನೈತಿಕ ಮೌಲ್ಯ ಕುಸಿಯುತ್ತಿದೆ. ಮನುಷ್ಯರಲ್ಲಿನ ಅತಿಯಾಸೆಯಿಂದಾಗಿ ಭ್ರಷ್ಟಾಚಾರ ಹುಟ್ಟಿಕೊಂಡಿದ್ದು, ಇದರಲ್ಲಿ ಮಹಿಳೆ- ಪುರುಷರು ಸಮಾನರಿದ್ದಾರೆ ಎಂದು ರಾಮನಗರ ಲೋಕಾಯುಕ್ತ ಎಸ್ಪಿ ಪಿ.ವಿ.ಸ್ನೇಹ ಬೇಸರ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಹಳೇ ವಿದ್ಯಾರ್ಥಿಗಳ ಬಳಗದಿಂದ ನಡೆದ ಒಂದು ದಿನದ ಹಳೆಯ ವಿದ್ಯಾರ್ಥಿಗಳ ಸಭೆ- ಮರು ಸಂಪರ್ಕಿಸಿ- ಪ್ರತಿಫಲಿಸಿ- ಮರುಜ್ಜೀವನಗೊಳಿಸಿ ವಿಶೇಷ ಉಪನ್ಯಾಸ- ಭ್ರಷ್ಟಾಚಾರ ತಡೆಗಟ್ಟುವಲ್ಲಿ ಮಹಿಳೆಯರ ಪಾತ್ರ- ಸ್ಪರ್ಧಾತ್ಮಕ ಜಗತ್ತಿನಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹೇಗೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಭ್ರಷ್ಟಾಚಾರದ ವಿರುದ್ಧ ಲೋಕಾಯಕ್ತ ಸಂಸ್ಥೆ ಕಾರ್ಯಾಚರಣೆ ಮಾಡಿದಾಗ ಹಲವೆಡೆ ಲಂಚ ತೆಗೆದುಕೊಳ್ಳುವುದರಲ್ಲಿ ಹೆಂಗಸು ಹೆಚ್ಚು, ಗಂಡಸು ಹೆಚ್ಚು ಎನ್ನುವ ಹಾಗಿಲ್ಲ. ಇಬ್ಬರೂ ಭ್ರಷ್ಟಾಚಾರದಲ್ಲಿ ಎಲ್ಲರೂ ಸಮಾನರಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಯರು ಭ್ರಷ್ಟಾಚಾರ ತಡೆಯಲು ಅರಿವು ಹೆಚ್ಚಿಸಿಕೊಳ್ಳಬೇಕು. ಲಂಚ- ಭ್ರಷ್ಟಾಚಾರ ಎಂದರೆ ವೈಯಕ್ತಿಕವಾಗಿ ಒಬ್ಬ ಸರ್ಕಾರಿ ನೌಕರ ತನ್ನ ಸ್ವಂತಕ್ಕಾಗಿ ಅಥವಾ ತನ್ನ ಕುಟುಂಬಕ್ಕಾಗಿ ಹೆಚ್ಚಿನ ಲಾಭ ಪಡೆಯಲಿಕ್ಕೋಸ್ಕರ ಸಂಬಳ ಪಡೆಯುತ್ತಿದ್ದರೂ ಹಣ ಪಡೆದರೆ ಅದು ಭ್ರಷ್ಟಾಚಾರ- ಲಂಚವಾಗುತ್ತದೆ ಎಂದು ವಿವರಿಸಿದರು.

ಹೆಣ್ಣು ಮಕ್ಕಳಲ್ಲಿ ಶಿಸ್ತು ಅವಶ್ಯಕ:

ಹೆಣ್ಣು ಮಕ್ಕಳು ಆರ್ಥಿಕ ಶಿಸ್ತು ಕಲಿತುಕೊಳ್ಳುವುದು ಅತ್ಯವಶ್ಯಕ. ಆರ್ಥಿಕ ಶಿಸ್ತು ಇಲ್ಲದಿದ್ದರೆ ಹಣ ಉಳಿತಾಯ ಮಾಡಲಾಗದು. ನಮ್ಮ ಪೋಷಕರು ಎಷ್ಟು ಸಂಪಾದನೆ ಮಾಡುತ್ತಿದ್ದರು. ಎಷ್ಟು ಖರ್ಚು ಮಾಡಿ ಅದರಲ್ಲಿ ಎಷ್ಟು ಹಣ ಉಳಿಸುತ್ತಿದ್ದರು. ಇದರೊಂದಿಗೆ ಬದುಕನ್ನೂ ಕಟ್ಟಿಕೊಂಡು ಮಕ್ಕಳಿಗೂ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ಆದರೆ, ಈಗ ಅತಿ ಆಸೆಗೆ ಬಿದ್ದು, ಏನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನೂ ಅರಿತುಕೊಳ್ಳಬೇಕು ಕಿವಿಮಾತು ಹೇಳಿದರು.

ಸರ್ಕಾರಿ ನೌಕರ ಅಥವಾ ಅಧಿಕಾರಿಯಾಗಿರಬಹುದು. ನಮಗೆ ಬರುವ ಸಂಬಳದಲ್ಲೇ ಜೀವನ ಕಟ್ಟಿಕೊಳ್ಳಬೇಕು. ಅದು ಬಿಟ್ಟು ಹೆಚ್ಚಿನ ಆಸೆಗೆ ಬಿದ್ದರೆ ಬೇರೆ ಮೂಲಕ್ಕೇ ಕೈ ಹಾಕಬೇಕಾಗುತ್ತದೆ. ದುಡ್ಡು ಸಮುದ್ರದ ನೀರಿದ್ದಂತೆ. ಕುಡಿದಷ್ಟೂ ದಾಹ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ ಎಂದು ಎಚ್ಚರಿಸಿದರು.

ನಾವೆಲ್ಲಾ ವ್ಯಾಸಂಗ ಮಾಡುತ್ತಿದ್ದಾಗ ಪುಸ್ತಕಗಳನ್ನು ಓದುತ್ತಿದ್ದವು. ಈಗ ಮೊಬೈಲ್‌ ಬಳಕೆ ಹೆಚ್ಚಾಗಿದೆ. ಇದರಿಂದ ಒಳ್ಳೆಯದ್ದನ್ನೂ ಕಲಿಯಬಹುದು. ಜೊತೆಗೆ ಕೆಟ್ಟದ್ದನ್ನೂ ಪಡೆದುಕೊಳ್ಳಬಹುದು. ಆದರೆ, ಆಯ್ಕೆ ನಮ್ಮದಾಗಿದೆ ಎಂದರು.

ಹಳ್ಳಿಯಾಗಲೀ, ನಗರವಾಸಿಯಾಗಿರಲೀ ನಮ್ಮ ಸುತ್ತಮುತ್ತಲ ಏನೆಲ್ಲಾ ನಡೆಯುತ್ತಿದೆ. ಸರ್ಕಾರಿ ನೌಕರ, ಅಧಿಕಾರಿಗಳಿದ್ದರೆ ಅವರ ಕರ್ತವ್ಯಗಳೇನು ಎಂಬುದನ್ನು ಅರಿಯಬೇಕು. ಲಂಚ ಕೊಟ್ಟು ಕೆಲಸ ಮಾಡಿಸುವ ಸ್ಥಿತಿಗೆ ಇಳಿಯಬಾರದು. ಲಂಚ ಕೇಳಿದರೆ ಲೋಕಾಯುಕ್ತ ಅಥವಾ ಬೇರೆ ಬೇರೆ ಸಂಸ್ಥೆಗಳಿಗೆ ದೂರು ಕೊಡಬಹುದು ಎಂದರು.

ಕೆಲವು ಸರ್ಕಾರಿ ಕಚೇರಿಯಲ್ಲಿ ಪ್ರಮಾಣ ಪತ್ರ ಪಡೆಲು ಭೇಟಿ ನೀಡಿದಾಗ ನಿಮ್ಮಿಂದ ಕೆಲವುರು ನಿರೀಕ್ಷೆ ಮಾಡುತ್ತಾರೆ. ನಿಮಗೆ ತಾಳ್ಮೆಇಲ್ಲದೆ ಸಾಲಿನಲ್ಲಿ ನಿಂತು ಪಡೆಯದಿದ್ದಾಗ ಭ್ರಷ್ಟರು ಈ ಸನ್ನಿವೇಷಗಳನ್ನೇ ದುರಪಯೋಗ ಪಡಿಸಿಕೊಳ್ಳುತ್ತಾರೆ ಎಂದು ಎಚ್ಚರಿಸಿದರು.

ವಿದ್ಯಾರ್ಥಿ ಜೀವನ ಸುಂದರವಾದದ್ದು. ಅದನ್ನು ಸರಿಯಾದ ನಿಟ್ಟಿನಲ್ಲಿ ಉಪಯೋಗಿಸಿಕೊಳ್ಳಬಹುದು. ಇಂದು ಮೊಬೈಲ್‌ನಲ್ಲಿ ಎಲ್ಲವನ್ನೂ ಕಲಿಯಬಹುದು. ಆದರೆ, ಇಂದಿನ ಯುವಜನತೆ ರೀಲ್ಸ್‌ಗೆ ಮರಳುತ್ತಾರೆ. ರೀಲ್ಸ್ ಮಾಡುವುದು, ನೋಡುವುದರಿಂದ ಸಮಯ ವ್ಯರ್ಥವಾಗುತ್ತದೆಯೇ ಹೊರತು ಅದರಿಂದ ಜ್ಞಾನ ಬೆಳೆಯುವುದಿಲ್ಲ ಎಂದರು.

ಮೊದಲು ನಾವು ನಿಯಮಗಳನ್ನು ಪಾಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಾವೇ ನಿಯಮಗಳನ್ನು ಪಾಲಿಸದಿದ್ದರೆ ಬೇರೆಯವರಿಗೆ ಏನೆಂದು ಹೇಳಲು ಸಾಧ್ಯ. ಪ್ರತಿಯೊಬ್ಬರೂ ನಿಯಮ ಪಾಲಿಸುವ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಂಡು ಬೇರೆಯವರಿಗಿಂತ ಭಿನ್ನವಾಗಿ ಸಂವಹನವನ್ನೂ ಕಲಿಯಬೇಕು. ಆಗ ಎಲ್ಲವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ನಾವು ಕೂಡ ಇದೇ ಕಾಲೇಜಿನಲ್ಲಿ ಓದಿದ್ದು. ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಉಪನ್ಯಾಸಕರು ಅತ್ಯುತ್ತಮ ಬೋಧಕರಾಗಿದ್ದಾರೆ. ಅವರಿಂದ ವಿದ್ಯಾರ್ಥಿನಿಯರು ಶ್ರದ್ಧೆಯಿಂದ ಕಲಿಯಬೇಕು. ಅವರ ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ಅವರು - ಸ್ಪರ್ಧಾತ್ಮಕ ಜಗತ್ತಿನಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು ವಿಷಯ ಕುರಿತು ಉಪನ್ಯಾಸ ನೀಡಿದರು. ಬಳಿಕ ಗಣ್ಯರನ್ನು ಅಭಿನಂದಿಸಲಾಯಿತು.

ಸಮಾರಂಭದಲ್ಲಿ ರುಸಾ ಸಂಯೋಜಕಿ ಡಾ.ಕೆ.ಎಂ.ಮಂಗಳಮ್ಮ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಾಗರೇವಕ್ಕ, ಕೆವಿಎಸ್ ಬಿಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ವಿ.ಡಿ.ಸುವರ್ಣ, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಗುರುರಾಜಪ್ರಭು, ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಬಿ.ಪ್ರಮೀಳಾ, ಡಾ.ಬಿ.ಕೋಮಲ, ಡಾ. ವೈ.ಕೆ.ಭಾಗ್ಯ, ಸಹಪ್ರಾಧ್ಯಾಪಕಿ ಡಾ. ಎಸ್.ಬಿ.ಜ್ಯೋತಿ, ಸಹಾಯಕ ಪ್ರಾಧ್ಯಾಪಕಿ ಎಲ್. ಪೂರ್ಣಿಮಾ, ಕೆ.ಪಿ.ರವಿಕಿರಣ್, ಎಸ್.ಪಿ.ಹೇಮಲತಾ ಇತರರು ಇದ್ದರು.

Share this article