ಭದ್ರಾವತಿ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ

KannadaprabhaNewsNetwork |  
Published : Nov 13, 2024, 12:03 AM IST
ಭದ್ರಾವತಿಯಲ್ಲಿ ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ  ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಮಿತಿ ಸಭೆ ನಡೆಯಿತು. ಶಾಸಕರಾದ ಬಿ.ಕೆ ಸಂಗಮೇಶ್ವರ್, ಶಾರದಪೂರ್‍ಯಾ ನಾಯ್ಕ, ಬಲ್ಕೀಶ್ ಬಾನು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ತಾಲೂಕಿನ ಭದ್ರಾವತಿ ವಿಧಾನಸಭಾ ಕ್ಷೇತ್ರ ಹಾಗು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಸಹ ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ. ಅಲ್ಲದೆ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಎಂದು ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳು ಗಂಭೀರವಾಗಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ತಾಲೂಕಿನ ಭದ್ರಾವತಿ ವಿಧಾನಸಭಾ ಕ್ಷೇತ್ರ ಹಾಗು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಸಹ ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ. ಅಲ್ಲದೆ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಎಂದು ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳು ಗಂಭೀರವಾಗಿ ಆರೋಪಿಸಿದರು.

ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಗರ ಹಾಗು ಗ್ರಾಮಾಂತರ ಭಾಗದಲ್ಲಿ ಫಾರಂ 94 ಸಿ.ಸಿ ಹಾಗು ಫಾರಂ 50, 53 ಮತ್ತು 57 ಸೇರಿ ಸರ್ಕಾರದ ವಿವಿಧ ಯೋಜನೆಯಡಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್, ಸರ್ಕಾರದ ಮಾರ್ಗಸೂಚಿಯಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಯಾವುದೇ ರೀತಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಬಾರದು. ಸರ್ಕಾರಿ ಕೆಲಸ ದೇವರ ಕೆಲಸ ಎನ್ನುತ್ತಾರೆ. ಒಂದು ಕಡೆ ಎಲ್ಲಾ ಕೆಲಸ ಮಾಡಿದ್ದೇವೆ ಎನ್ನುತ್ತೀರ. ಮತ್ತೊಂದು ಕಡೆ ಯಾವುದೇ ಕೆಲಸವಾಗಿಲ್ಲ. ಸರ್ಕಾರದ ಆದೇಶದಂತೆ ನಿಗದಿತ ಅವಧಿಯಲ್ಲಿ ಸಂಬಂಧಿಸಿದ ಅರ್ಜಿಗಳ ಇತ್ಯರ್ಥವಾಗಬೇಕು. ಆದರೆ ಹಕ್ಕು ಪತ್ರಕ್ಕಾಗಿ ಸಲ್ಲಿಸಿರುವ ಅರ್ಜಿಗಳ ಇತ್ಯರ್ಥವಾಗಿಲ್ಲ. ಮುಂದಿನ 15 ದಿನಗಳ ಕಾಲಾವಾವಧಿಯಲ್ಲಿ ಉಳಿದಿರುವ ಎಲ್ಲಾ ಅರ್ಜಿಗಳ ಇತ್ಯರ್ಥವಾಗಬೇಕು. ಇಲ್ಲವಾದಲ್ಲಿ ತಹಸೀಲ್ದಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯನಾಯ್ಕ ಮಾತನಾಡಿ, ಕಂದಾಯ ಇಲಾಖೆ ಅಧಿಕಾರಿಗಳು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಯಾವುದೇ ನೋಟಿಸ್ ನೀಡದೆ ಏಕಾಏಕಿ ಸರ್ವೇ ಕಾರ್ಯ ಕೈಗೊಂಡು ಅಲ್ಲಿನ ಗ್ರಾಮಗಳಲ್ಲಿ ಘರ್ಷಣೆ ಉಂಟುಮಾಡುವ ಮೂಲಕ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಸರ್ವೇ ಕಾರ್ಯ ನಡೆಸುವ ಮೊದಲು ನೋಟಿಸ್ ನೀಡುವಂತೆ ಎಚ್ಚರಿಸಿದರು.

ಈ ನಡುವೆ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಕಂದಾಯ ಇಲಾಖೆಯೊಂದಿಗೆ ಅರಣ್ಯ ಇಲಾಖೆ, ಏಜೆಂಟ್ ರೀತಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಸಹ ವಿನಾಕಾರಣ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಒಂದು ಕಡೆ ಕಂದಾಯ ಇಲಾಖೆ ಭೂಮಿ ನಮಗೆ ಸೇರಿದೆ ಎಂದರೆ, ಮತ್ತೊಂದು ಕಡೆ ಅರಣ್ಯ ಇಲಾಖೆ ನಮಗೆ ಸೇರಿದೆ ಎನ್ನುತ್ತಿದೆ. ಈ ಎರಡು ಇಲಾಖೆಯಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದರು.

ಆಹಾರ ಇಲಾಖೆ ಕಾರ್ಯ ವೈಖರಿ ಕುರಿತು ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು, ಆಹಾರ ಇಲಾಖೆ ಅಧಿಕಾರಿಗಳು ಸರ್ಕಾರದ ಆದೇಶ ನೆಪಮಾಡಿಕೊಂಡು ಯಾವುದೇ ಪರಿಶೀಲನೆ ನಡೆಸದೆ ಪಡಿತರ ಚೀಟಿಗಳನ್ನು ರದ್ದುಗೊಳಿಸುತ್ತಿದೆ. ಇದರಿಂದಾಗಿ ಅರ್ಹ ಬಡಕುಟುಂಬಗಳು ಬಿಪಿಎಲ್ ಪಡಿತರ ಚೀಟಿಯಿಂದ ವಂಚಿತವಾಗುತ್ತಿವೆ. ಆದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಬಡ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಮತ್ತೊಂದು ಕಡೆ ಎಪಿಎಲ್ ಕಾರ್ಡ್‌ಗಳಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಲಾಯಿತು. ಸಭೆಯಲ್ಲಿ ಪ್ರಮುಖರಾದ ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಕೆಡಿಪಿ ಸದಸ್ಯರಾದ ಜೆಬಿಟಿ ಬಾಬು, ರಾಜೇಂದ್ರ, ಬಿ.ಕೆ ರಮೇಶ್, ಜಯಲಕ್ಷ್ಮಿ, ಮಂಜುನಾಥ್, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಅವಿನ್, ತಹಸೀಲ್ದಾರ್ ಕೆ.ಆರ್ ನಾಗರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ : ತೇಜಸ್ವಿ ಸೂರ್ಯ
ಜಿಬಿಎ ಪಾಲಿಕೆಗಳ ಚುನಾವಣೆಯಲ್ಲಿ ಬ್ಯಾಲೆಟ್‌ ಮತದಾನಕ್ಕೆ ತೊಂದರೆ ಆಗದಂತೆ ಕ್ರಮ: ಸುನೀಲ್ ಕುಮಾರ್‌