ದೇಶದಲ್ಲಿ ವಿಕೃತರೂಪ ಪಡೆದ ಲಂಚತನ : ನ್ಯಾ.ಸಂತೋಷ ಹೆಗ್ಡೆ

KannadaprabhaNewsNetwork |  
Published : Jun 01, 2025, 03:34 AM ISTUpdated : Jun 01, 2025, 01:09 PM IST
31ಕೆಡಿವಿಜಿ7, 8-ದಾವಣಗೆರೆಯಲ್ಲಿ ಶನಿವಾರ ರೈತ ಮುಖಂಡ ತೇಜಸ್ವಿ ವಿ.ಪಟೇಲ್‌ರ 25 ವರ್ಷಗಳ ಸಾರ್ವಜನಿಕ ಬದುಕಿನ ಕುರಿತ ಪಾಪು ಗುರು ಸಂಪಾದಿಸಿದ ಹಸಿರು ಹಾದಿಯ ಹೆಜ್ಜೆಗಳು ಪುಸ್ತಕ ಲೋಕಾರ್ಪಣೆ ಮಾಡಿದ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ, ಮಾಜಿ ಶಾಸಕ ಮಹಿಮ ಜೆ.ಪಟೇಲ್ ಇತರರು. | Kannada Prabha

ಸಾರಾಂಶ

ಹಿಂದೆಲ್ಲಾ ತಪ್ಪು ಮಾಡಿದವರಿಗೆ ಬಹಿಷ್ಕರಿಸುವ ಸಾಮಾಜಿಕ ವ್ಯವಸ್ಥೆ ಇದ್ದುದರಿಂದ ಜನರು ಕೆಟ್ಟ ಕೆಲಸ ಮಾಡಲು ಹಿಂಜರಿಯುತ್ತಿದ್ದರು. ಈಗ ಲಂಚ ವಿಕೃತ ರೂಪ ತಳೆದಿದ್ದು, ತಪ್ಪು ಮಾಡಿದವರಿಗೆ ಯಾವುದೇ ಭಯವೂ ಇಲ್ಲದಂತಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ವಿಷಾದಿಸಿದರು.

  ದಾವಣಗೆರೆ : ಹಿಂದೆಲ್ಲಾ ತಪ್ಪು ಮಾಡಿದವರಿಗೆ ಬಹಿಷ್ಕರಿಸುವ ಸಾಮಾಜಿಕ ವ್ಯವಸ್ಥೆ ಇದ್ದುದರಿಂದ ಜನರು ಕೆಟ್ಟ ಕೆಲಸ ಮಾಡಲು ಹಿಂಜರಿಯುತ್ತಿದ್ದರು. ಈಗ ಲಂಚ ವಿಕೃತ ರೂಪ ತಳೆದಿದ್ದು, ತಪ್ಪು ಮಾಡಿದವರಿಗೆ ಯಾವುದೇ ಭಯವೂ ಇಲ್ಲದಂತಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ವಿಷಾದಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ನಿಟುವಳ್ಳಿ ಕೆಂಗಣ್ಣ, ವಾಸನದ ಓಂಕಾರಪ್ಪ ವೇದಿಕೆಯಿಂದ ಆಯೋಜಿಸಿದ್ದ ರೈತ ಮುಖಂಡ ತೇಜಸ್ವಿ ವಿ.ಪಟೇಲ್‌ರ 25 ವರ್ಷಗಳ ಸಾರ್ವಜನಿಕ ಬದುಕಿನ ಕುರಿತು ಪಾಪು ಗುರು ಸಂಪಾದಿಸಿದ ‘ಹಸಿರು ಹಾದಿಯ ಹೆಜ್ಜೆಗಳು’ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿ, ದುರಾಸೆಯ ರೋಗಕ್ಕೆ ಮದ್ದು ಇಲ್ಲದಂತಾಗಿದ್ದು, ತಪ್ಪು ಮಾಡಿದವರಿಗೆ ಭಯವೂ ಇಲ್ಲದಂತಾಗಿದೆ ಎಂದರು.

ಲೋಕಾಯುಕ್ತ ನ್ಯಾಯಮೂರ್ತಿಯಾದ ನಂತರ ಭ್ರಷ್ಟಾಚಾರದ ವಿವಿಧ ಮಜಲುಗಳನ್ನು ಕಂಡಿದ್ದೇನೆ. ಶ್ರೀಮಂತಿಕೆಗಾಗಿ ತೀವ್ರ ಪೈಪೋಟಿ ಬೆಳೆದಿದೆ. ಶ್ರೀಮಂತರಾಗುವ ಅಪೇಕ್ಷೆಯು ಕೆಟ್ಟದ್ದಲ್ಲ. ಆದರೆ, ಯಾವ ಮಾರ್ಗವನ್ನು ಅನುಸರಿಸುತ್ತಿದ್ದೀರಿ ಎಂಬುದೂ ಮುಖ್ಯವಾಗುತ್ತದೆ. ಸರ್ಕಾರ ಬಿಡುಗಡೆ ಮಾಡುವ 1 ರು. ಅನುದಾನದಲ್ಲಿ ಫಲಾನುಭವಿಗೆ 15 ಪೈಸೆ ಮಾತ್ರ ತಲುಪುತ್ತಿದೆಯೆಂದು 1985ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಕೊರಗಿದ್ದರು. 2025ರಲ್ಲೂ ಅಂತಹ ಪರಿಸ್ಥಿತಿಯಲ್ಲೇನೂ ಬದಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುಖಿ ಜೀವನಕ್ಕೆ ತೃಪ್ತಿ ಹಾಗೂ ಮಾನವೀಯತೆ ಅತೀ ಮುಖ್ಯ. ತೃಪ್ತಿಯಿಂದ ಬದುಕುವ ಬಗೆಯನ್ನು ಮಕ್ಕಳಿಗೆ ಕಲಿಸಿಕೊಡುವ ಅವಶ್ಯಕತೆ ಇದೆ. ಸಮಾಜದ ಶಾಂತಿ, ಸೌಹಾರ್ದತೆಗೂ ಇದು ಅನಿವಾರ್ಯವಾಗಿದೆ. ಬದಲಾವಣೆಯು ಮನೆಯಿಂದಲೇ ಆರಂಭ‍ವಾಗಬೇಕು. ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ವಿಚಾರಗಳನ್ನು ತಿಳಿಸುವ ಕೆಲಸವು ಪಾಲಕರಿಂದ ಆಗಬೇಕು ಎಂದು ತಿಳಿಸಿದರು.

ಕೃತಿಯ ಬಗ್ಗೆ ಮಾತನಾಡಿದ ವಿಶ್ರಾಂತ ಕೆ.ಎಂ.ಮೈತ್ರಿ, ಪಟೇಲರ ಕುಟುಂಬ ಅಪಾರ ದೇಶಾಭಿಮಾನ ಹೊಂದಿದ್ದು, ಸ್ವಾತಂತ್ರ್ಯ ಚಳವಳಿಯಲ್ಲೂ ಪಟೇಲರ ಕುಟುಂಬ ಪಾಲ್ಗೊಂಡಿತ್ತು. ಜೆ.ಎಚ್.ಪಟೇಲರು ಸಮಾಜವಾದಿ ತತ್ವಗಳು ಕುಟುಂಬವನ್ನು ಪ್ರಭಾವಿಸಿದೆ. ಚನ್ನಗಿರಿ ತಾಲೂಕಿನಲ್ಲಿರುವ ಸುಳೈಕೆರೆ. ಇದು ಜನ ಮಾನಸದಲ್ಲಿ ಸೂಳೆಕರೆಯಾಗಿ ಬದಲಾಗಿದೆ. ಸುಳೈ ಅಂದರೆ ಪವಿತ್ರ ನೀರು ಎಂದರ್ಥ. ಕುಡಿಯಲು ಯೋಗ್ಯವಾದ ನೀರಿಗೂ ಈ ಪದ ಬಳಕೆ ಮಾಡಲಾಗುತ್ತಿತ್ತು. ಇಂತಹ ಪವಿತ್ರ ನೀರು ಹೊಂದಿದ ಸುಳೈಕೆರೆ ಕಾಲಾಂತರದಲ್ಲಿ ಸೂಳೆಕೆರೆ ಆಗಿದೆ ಎಂದರು.

ಸಂಕಷ್ಟಕ್ಕೆ ಸಿಲುಕಿದ ಕೃಷಿ ಕ್ಷೇತ್ರಕ್ಕೆ ಸಹಕಾರ ತತ್ವವು ಸಹಾಯ ಮಾಡಬಲ್ಲದೆ, ಮತ್ತಷ್ಟು ಶಕ್ತಿ ತುಂಬಬಲ್ಲದು. ತುಂಡು ಭೂಮಿ ಹೊಂದಿರುವ ರೈತರು ಸಹಕಾರ ತತ್ವದಡಿ ಒಗ್ಗೂಡಿ ಕೃಷಿ ಮಾಡಬೇಕಿದೆ. ಇದಕ್ಕೆ ಪ್ರಾಮಾಣಿಕರು ಚುನಾವಣಾ ರಾಜಕಾರಣಕ್ಕೆ ಬರುವ ಅಗತ್ಯವಿದೆ. ಇಂತಹವರಿಗೆ ಜನರು ಸಹಕಾರ ನೀಡಬೇಕು. ಬದಲಾವಣೆಯೆಂಬುದು ಯಾರಿಂದಲೋ ಅಲ್ಲ ನಮ್ಮಿಂದಲೇ ಆರಂಭವಾಗಬೇಕು ಎಂದು ಹೇಳಿದರು.

ಚನ್ನಗಿರಿ ಮಾಜಿ ಶಾಸಕ ಮಹಿಮಾ ಜೆ.ಪಟೇಲ್, ಮಾಜಿ ಸಚಿವ ಕೆ.ಶಿವಮೂರ್ತಿ ನಾಯ್ಕ, ರೈತ ಮುಖಂಡ ತೇಜಸ್ವಿ ಪಟೇಲ್, ಕೃತಿಯ ಸಂಪಾದಕ ಪಾಪುಗುರು, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭಾಗ್ಯರಾಜ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲತಾ ತೇಜಸ್ವಿ ಪಟೇಲ್, ನಿಟುವಳ್ಳಿ ಪೂಜಾರ ಅಂಜಿನಪ್ಪ ಇತರರು ಇದ್ದರು.

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ