ಕನ್ನಡಪ್ರಭ ವಾರ್ತೆ ಕೊಲ್ಹಾರ
ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಹಮ್ಮಿಕೊಂಡಿರುವ ಈ ಪಾದಯಾತ್ರೆಯು ವಿಜಯಪುರದಿಂದ ಹುಬ್ಬಳ್ಳಿಯ ಹೆಸ್ಕಾಂ ನಿಗಮದವರೆಗೆ ಮುಂದುವರೆಯುವುದು. ರೈತಾಪಿ ವರ್ಗದ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಹೇಳಿದರು.ರೈತ ಭಾರತ ಪಕ್ಷದ ವತಿಯಿಂದ ಹಮ್ಮಿಕೊಂಡ ಭ್ರಷ್ಟಾಚಾರ ಹಠಾವೋ ಹೆಸ್ಕಾಂ ಬಚಾವೋ ಪಾದಯಾತ್ರೆಯು ಗುರುವಾರ ಪಟ್ಟಣಕ್ಕೆ ಆಗಮಿಸಿದ್ದು, ಹೆಸ್ಕಾಂ ಕಚೇರಿ ಎದುರುಗಡೆ ರೈತ ಬಾಂಧವರ ಸಮ್ಮುಖದಲ್ಲಿ ಪಾದಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ಪ್ರಮುಖವಾಗಿ 22 ನವೆಂಬರ್ 2023ರ ಸಚಿವ ಸಂಪುಟ ಸಭೆಯಲ್ಲಿ ರೈತ ವಿರೋಧಿ ನಿರ್ಣಯ ಹಿಂಪಡೆಯಬೇಕು. ರೈತರಿಗೆ ಶೀಘ್ರವೇ ಕೃಷಿ ಸಂಪರ್ಕ ಯೋಜನೆ ಜಾರಿ ಮಾಡುವುದು, ಕೋಲ್ದಾರಕ್ಕೆ ಹೆಸ್ಕಾಂ ಉಪವಿಭಾಗಿ ಹಾಗೂ ಮುಳವಾಡಕ್ಕೆ ಹೆಸ್ಕಾಂ ಶಾಖಾ ಕಚೇರಿ ಮಂಜೂರು ಮಾಡುವುದು, 2015ರಲ್ಲಿ ತುಂಬಿದ ಫಲಾನುಭವಿಗಳಿಗೆ ಆರ್.ಆರ್.ಸಂಖ್ಯೆ ಹಾಗೂ ಮೂಲಭೂತ ಸೌಕರ್ಯ ನೀಡುವುದು, ರೈತರಿಗೆ 12 ಗಂಟೆ 3 ಫೇಸ್ ವಿದ್ಯುತ್ ಪೂರೈಸಬೇಕು, ಸುಟ್ಟ ಟಿಸಿಗಳನ್ನು 48 ಗಂಟೆಗಳಲ್ಲಿ ಕೂಡಿಸುವ ವ್ಯವಸ್ಥೆ ಕಲ್ಪಿಸಬೇಕು, ರೈತರ ತೋಟದ ಮನೆಗಳಿಗೆ ರಾತ್ರಿ ಹೊತ್ತಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಂಗಲ್ ಫೇಸ್ ವಿದ್ಯುತ್ ಸಂಪರ್ಕ ನೀಡುವುದು, ಹೆಸ್ಕಾಂ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಬೇಕು, ಅವೈಜ್ಞಾನಿಕ ಕಾಮಗಾರಿಗಳ ತನಿಖೆಯಾಗಬೇಕು, ಮಾಹಿತಿ ತಂತ್ರಜ್ಞಾನದ ನುರಿತ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ 3564 ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನು ಕಾಯಂ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.2000 ದಿಂದ 2012ರವರೆಗೆ ಅಕ್ರಮ-ಸಕ್ರಮ ಯೋಜನೆಯ ಅಡಿಯಲ್ಲಿ ಹಣವನ್ನು ತುಂಬಿದ ರೈತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು, ಹೆಸ್ಕಾಂ ಇಲಾಖೆಯ ಶೇ.75 ಅಧಿಕಾರಿಗಳು ಸ್ವತಃ ತಾವೇ ಕಾಮಗಾರಿಗಳನ್ನು ಗುತ್ತಿಗೆ ಹಿಡಿದು ಇಲಾಖೆಯ ಸಾಮಗ್ರಿಗಳನ್ನು ಬಳಸಿ ಕೆಲಸಗಳನ್ನು ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು, ಸುಮಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡುವುದು, ಸರ್ಕಾರ ನೀಡುತ್ತಿರುವ 200 ಯೂನಿಟ್ ಉಚಿತ ವಿದ್ಯುತ್ ವಿಷಯವಾಗಿ ಹೆಸ್ಕಾಂ ಕಂಪನಿಗಳು ಸಮರ್ಪಕವಾಗಿ ನೀಡದೆ ಗ್ರಾಹಕರಿಗೆ ವಂಚಿಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಹೆಸ್ಕಾಂ ಇಲಾಖೆಗಳ ಅಧಿಕಾರಿಗಳ ಡಿಜಿಟಲ್ ಸಿಗ್ನೆಚರ್ ಅಳವಡಿಸುವುದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿರಲು ಸೂಚನೆ ನೀಡುವುದು, ವಿಂಡ್ ಪವರ್ ಮೀಟರುಗಳು ಬದಲಾವಣೆಯಿಂದ ನಷ್ಟ ಉಂಟು ಮಾಡಿದರ ಬಗ್ಗೆ ಸಮಗ್ರ ತನಿಖೆಯಾಗಬೇಕು, ಅಧಿಕಾರಿಗಳಿಗೆ ನೀಡಿದಂತ ವಾಹನಗಳು ದುರುಪಯೋಗವಾಗುತ್ತಿದ್ದು ಇದರ ಬಗ್ಗೆ ತನಿಖೆಯಾಗಬೇಕು. ಎಂ.ಟಿ ಉಪವಿಭಾಗ ಹಾಗೂ ಹೆಸ್ಕಾಂ ಜಾಗೃತದಳದವರು ವಿನಾಕಾರಣ ಗ್ರಾಹಕರಿಗೆ ಕಿರಿಕಿರಿ ಮಾಡುತ್ತಿದ್ದು, ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು, ಪಟ್ಟಣದ ಮುಖಂಡರಾದ ಶೇಖರಯ್ಯ ಗಣಕುಮಾರ, ರೈತ ಮುಖಂಡ ಸಿದ್ದಪ್ಪ ಬಾಲಗೊಂಡ, ಕೊಲ್ಹಾರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಈರಣ್ಣಗೌಡ ಕೋಮಾರ ಪಾದಯಾತ್ರೆ ಉದ್ದೇಶಿಸಿ ಮಾತನಾಡಿ, ರೈತ ಭಾರತ ಪಕ್ಷದಿಂದ ಹೆಸ್ಕಾಂ ಸ್ವಚ್ಛತೆ ಅಭಿಯಾನ ಪಾದಯಾತ್ರೆ ಹಮ್ಮಿಕೊಂಡ ಮಲ್ಲಿಕಾರ್ಜುನ ಕೆಂಗನಾಳರವರ ಕಾರ್ಯ ಬಹಳ ಶ್ಲಾಘನೀಯವಾದದ್ದು. ಅವರಿಗೆ ಕೊಲ್ಹಾರ ತಾಲೂಕಿನ ಸಮಸ್ತ ರೈತ ಬಾಂಧವರು ಬೆಂಬಲ ನೀಡುತ್ತೇವೆ. ರೈತ ಈ ದೇಶದ ಬೆನ್ನಲುಬು ಎಂದು ಎಲ್ಲ ಪಕ್ಷಗಳು ಅಧಿಕಾರಕ್ಕೆ ಬಂದು ರೈತರ ಬೆನ್ನೆಲುಬನ್ನು ಮುರಿದಿವೆ. ಬಂಡವಾಳಶಾಹಿಗಳ ಕೈಗಾರಿಕೆಗಳಿಗೆ ಬೆಂಬಲಿಸುವುದನ್ನು ಕಂಡಿದ್ದೇವೆ. ಕುಡಿಯುವ ನೀರು, ಬಿಸ್ಕಿಟ್ ಸೇರಿದಂತೆ ಅನೇಕ ವಸ್ತುಗಳ ಮೇಲೆ ಎಂ.ಆರ್.ಪಿ ಇದೆ. ಆದರೆ, ರೈತ ಬೆಳೆದ ಬೆಳೆಗಳಿಗೆ ಯಾವುದೇ ಎಂಆರ್‌ಪಿ ಇಲ್ಲ ಇದು ದುರದೃಷ್ಟಕರ ಎಂದರು. ಪಕ್ಕದಲ್ಲಿ ಕೃಷ್ಣಾ ನದಿ ಹರಿಯುತ್ತಿದ್ದರು ಆ ನೀರನ್ನು ಎತ್ತಲಿಕ್ಕೆ ಸರಿಯಾಗಿ ಕರೆಂಟ್ ವ್ಯವಸ್ಥೆಯಲ್ಲಿ. ಈ ಭಾಗದ ರೈತರ ಅನಕೂಲಕ್ಕಾಗಿ ಕೂಡಲೇ ಸರ್ಕಾರ ಹಾಗೂ ಈ ಭಾಗದ ಸಚಿವರು ಕೊಲ್ಹಾರದಲ್ಲಿ ಹೆಸ್ಕಾಂ ಉಪ ವಿಭಾಗ ಕಚೇರಿಯನ್ನು ಹಾಗೂ ಮುಳವಾಡಕ್ಕೆ ಹೆಸ್ಕಾಂ ಶಾಖಾ ಕಚೇರಿಯನ್ನು ಮಂಜೂರು ಮಾಡಬೇಕು. ರೈತರ ಬೇಡಿಕೆಗಳನ್ನು ಈಡೇರಿಸಿ ಅವರಿಗೆ ನ್ಯಾಯವನ್ನು ಕೊಡುವ ಕೆಲಸ ಆಗಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.ಕೊಲ್ಹಾರಕ್ಕೆ ಆಗಮಿಸಿದ ಪಾದಯಾತ್ರೆಯು ಇಲ್ಲಿನ ಹೆಸ್ಕಾಂ ಕಚೇರಿಯಿಂದ ಪ್ರಾರಂಭಗೊಂಡು ದಿಗಂಬರೇಶ್ವರ ಮಠಕ್ಕೆ ತೆರಳಿ ದಿಗಂಬರೇಶ್ವರ ಮಠದ ಕಲ್ಲಪ್ಪಯ್ಯ ಅಜ್ಜನವರ ದರ್ಶನ ಪಡೆದು ಕಲ್ಲಿನಾಥ ಶ್ರೀಗಳ ಆಶೀರ್ವಾದ ಪಡೆದುಕೊಂಡು ಬೀಳಗಿ ಕಡೆ ತೆರಳಿತು.
ಈ ಸಂದರ್ಭದಲ್ಲಿ ಭೀಮಸಿ ಜಲಗೇರಿ, ಮುದಿಯಪ್ಪ ಚೌದ್ರಿ, ಶ್ರೀಶೈಲ ಕಂಬಿ,ರಾಮಣ್ಣ ಉಪ್ಪಲದಿನ್ನಿ,ಬಾಗಿ ಸೆಟ್ಟರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರೈತ ಮುಖಂಡರು ಹಾಗೂ ಪಾದಯಾತ್ರೆ ಪದಾಧಿಕಾರಿಗಳು ಇದ್ದರು.