ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಮತ್ತು ಸೇವಾ ಪ್ರತಿಷ್ಠಾನ ಆಯೋಜಿಸಿದ್ದ ‘ಸಂಸ್ಕೃತಿ ಸಿರಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ನಕಾರಾತ್ಮವಾಗಿ ಬದಲಾವಣೆ ಆಗುವತ್ತ ವೇಗವಾಗಿ ಹೆಜ್ಜೆ ಹಾಕುತ್ತಿದೆ. ಹಿಂದೆ ಒಳ್ಳೆಯ ಕೆಲಸ ಮಾಡಿದವರನ್ನು ಸಮಾಜ ಗುರುತಿಸುತ್ತಿತ್ತು. ತಪ್ಪು ಮಾಡಿದವರಿಗೆ ಕಾನೂನಿನಡಿ ಶಿಕ್ಷೆ ನೀಡುವುದರ ಜತೆಗೆ, ಸಮಾಜವು ಬಹಿಷ್ಕಾರದಂತಹ ಶಿಕ್ಷೆ ವಿಧಿಸುತ್ತಿತ್ತು. ಶ್ರೀಮಂತಿಕೆ, ಅಧಿಕಾರದ ಮೇಲೆ ನಿಂತಿರುವ ಈಗಿನ ಸಮಾಜದಲ್ಲಿ, ಪ್ರಾಮಾಣಿಕತೆ ಬಗ್ಗೆ ಮಾತನಾಡುವುದೇ ಅಪರಾಧವೆಂಬ ವಾತಾವರಣ ನಿರ್ಮಾಣವಾಗಿದೆ ಎಂದರು.
ದೇಶದಲ್ಲಿ ವಿವಿಧ ಹಗರಣಗಳಲ್ಲಿ ಸಾವಿರಾರು ಕೋಟಿ ರುಪಾಯಿ ಕೊಳ್ಳೆ ಹೊಡೆಯಲಾಗುತ್ತಿದೆ. ಇದು ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಭ್ರಷ್ಟರಿಗೆ ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕು. ಆದರೆ, ಅಧಿಕಾರದಲ್ಲಿರುವವರ ಸ್ವಾರ್ಥ ಮತ್ತು ದುರಾಸೆಯು ಭ್ರಷ್ಟಾಚಾರವನ್ನು ಪೋಷಿಸುತ್ತಿದೆ ಎಂದು ತಿಳಿಸಿದರು.ಪ್ರಶಸ್ತಿ ಪ್ರದಾನ:
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್, ರಂಗ ನಿರ್ದೇಶಕ ಟಿ.ಎಸ್. ನಾಗಾಭರಣ ಹಾಗೂ ಜಾನಪದ ವಿದ್ವಾಂಸರಾದ ಕೆ.ಆರ್. ಸಂಧ್ಯಾರೆಡ್ಡಿ, ಸುಗಮ ಸಂಗೀತ ಕಲಾವಿದ ಗರ್ತಿಕೆರೆ ರಾಘಣ್ಣ, ಕ್ಲಾರಿಯೋನೇಟ್ ಕಲಾವಿದ ನರಸಿಂಹಲು ವಡವಾಟಿ ಅವರಿಗೆ 2025ನೇ ಸಾಲಿನ ‘ಸಂಸ್ಕೃತಿ ಸಿರಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.ರಮಣಶ್ರೀ ಗ್ರೂಪ್‌ನ ಅಧ್ಯಕ್ಷ ಎಸ್.ಷಡಕ್ಷರಿ, ಪ್ರತಿಷ್ಠಾನದ ಅಧ್ಯಕ್ಷ ವೇಮಗಲ್ ನಾರಾಯಣಸ್ವಾಮಿ, ಗೌರವ ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ ಇದ್ದರು.