ಕನ್ನಡಪ್ರಭ ವಾರ್ತೆ ಮಂಡ್ಯಕಳೆದ 2024ರ ಡಿಸೆಂಬರ್ ತಿಂಗಳಿನಲ್ಲಿ ಮಂಡ್ಯದಲ್ಲಿ ಆಯೋಜನೆಗೊಂಡಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಸುಮಾರು 15 ಕೋಟಿ ರು.ವರೆಗೆ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಮಾಜಿ ಶಾಸಕ ಕೆ.ಅನ್ನದಾನಿ ಆಗ್ರಹಿಸಿದರು.ಸಮ್ಮೇಳನ ನಡೆದ ಕೆಲ ದಿನಗಳಲ್ಲೇ ನಾನು ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿದ್ದೆ. ಸರ್ಕಾರ ನನ್ನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಸಮ್ಮೇಳನದ ಹೆಸರಿನಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರವೆಸಗಿ ಸ್ವೇಚ್ಛಾಚಾರ ನಡೆಸಿರುವುದು ಕೆಲ ದಾಖಲೆಗಳಿಂದ ಸಾಬೀತಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸುಮಾರು 500 ರು. ಬೆಲೆ ಬಾಳುವ ಹಣ್ಣಿನ ಬುಟ್ಟಿಗೆ 2,500 ರು., 900 ರು. ಬೆಲೆ ಬಾಳುವ ರೇಷ್ಮೆ ಶಾಲಿಗೆ 1680 ರು., ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ನೀಡಿರುವ ನೆನಪಿನ ಕಾಣಿಕೆಗೆ 31,500 ರು. ಭರಿಸಿರುವುದು ಭ್ರಷ್ಟಾಚಾರವಲ್ಲವೇ ಎಂದು ಪ್ರಶ್ನಿಸಿದರು.ಸಮ್ಮೇಳನಕ್ಕೆ 30 ಕೋಟಿ ರು. ಹಣ ವ್ಯಯಿಸಿರುವುದಾಗಿ ಜಿಲ್ಲಾಡಳಿತ ಲೆಕ್ಕಪತ್ರ ನೀಡಿದೆ. 10 ರು.ಗಳಲ್ಲಿ ಆಗಬೇಕಾದ ಕೆಲಸಗಳಿಗೆ ದುಪ್ಪಟ್ಟು 100 ರು. ಸೇರಿಸಿ ಸುಳ್ಳು ಲೆಕ್ಕ ನೀಡಲಾಗಿದೆ. ಸುಮಾರು 15 ಕೋಟಿ ರು.ಗೂ ಹೆಚ್ಚು ಭ್ರಷ್ಟಾಚಾರ ನಡೆದಿದ್ದು, ಸಾಹಿತ್ಯದ ಹೆಸರಿನಲ್ಲಿ ಮಂಡ್ಯ ಜಿಲ್ಲೆಗೆ ಕಳಂಕ ತರುವ ಪ್ರಯತ್ನದಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಿ ಜಿಲ್ಲೆಯ ಮಾನ-ಮರ್ಯಾದೆಯನ್ನು ಹರಾಜು ಹಾಕಿದ್ದಾರೆ ಎಂದು ಕಿಡಿಕಾರಿದರು.ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜಾ.ದಳದ ಎಲ್ಲ ಮಾಜಿ ಶಾಸಕರು ಸಮ್ಮೇಳನ ಯಶಸ್ಸಿಗೆ ಸಹಕಾರ ನೀಡಿದ್ದೇವೆ. ಆದರೆ, ಸಮ್ಮೇಳನದ ಹೆಸರಿನಲ್ಲಿ 28 ಉಪ ಸಮಿತಿಗಳನ್ನು ರಚಿಸಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವುದು ಕಂಡುಬಂದಿದ್ದು, ಉನ್ನತ ಮಟ್ಟದ ತನಿಖೆಯಾಗಬೇಕೆಂದು ಒತ್ತಾಯಿಸಿದರು.ಸಾರಿಗೆ, ವಸತಿ, ವೇದಿಕೆ ಮತ್ತು ಆಹಾರ ಸಮಿತಿಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದ್ದು, ವೇದಿಕೆ ಸಮಿತಿಗೆ 8.70 ಕೋಟಿ ರು. ಪಾವತಿಸಲಾಗಿದೆ. ಈ ಹಣದಲ್ಲಿ ದುಪ್ಪಟ್ಟು ವಸ್ತುಗಳ ಖರೀದಿ ನಡೆಸಬಹುದಿತ್ತು. ಈ ಹಿನ್ನೆಲೆಯಲ್ಲಿ ಹಾಲಿ ಅಥವಾ ಮಾಜಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ, ಸಿಓಡಿ, ಇಡಿ ಅಥವಾ ಸಿಬಿಐ ತನಿಖೆಯಾಗಲಿ ಎಂದು ಒತ್ತಾಯಿಸಿದರು.ಜರ್ಮನ್ ಟೆಂಟ್ ನಿರ್ಮಾಣಕ್ಕೆ ವಾಸ್ತವವಾಗಿ ಚದರ ಅಡಿಗೆ 15 ರಿಂದ 18 ರು. ಬಾಡಿಗೆ ಇದೆ, 68 ರು. ವ್ಯಯಿಸಿರುವ ಹೊಣೆಗಾರಿಕೆಯನ್ನು ಮಳವಳ್ಳಿ ಶಾಸಕರು ಹೊರಬೇಕು ಎಂದು ಒತ್ತಾಯಿಸಿದ ಅವರು, ಒಟ್ಟಾರೆ ಸಮ್ಮೇಳನದ ಹೆಸರಿನಲ್ಲಿ ಸುಮಾರು 15 ಕೋಟಿ ರು. ಭ್ರಷ್ಟಾಚಾರ ನಡೆಸಲಾಗಿದೆ ಎಂದು ದೂರಿದರು.ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆದು, ಭ್ರಷ್ಟಾಚಾರ ನಡೆಸಿರುವ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬಹಳ ಎಚ್ಚರಿಕೆಯಿಂದ ಇದನ್ನು ನಿಭಾಯಿಸಬೇಕು. ಇದಕ್ಕೆಲ್ಲ ಸಮ್ಮೇಳನದ ಕೋಶಾಧ್ಯಕ್ಷರಾಗಿದ್ದ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಕುಮ್ಮಕ್ಕು ನೀಡಿರಬಹುದು ಎಂಬ ಅನುಮಾನ ಮೂಡಿದೆ ಎಂದರು.ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಅವರು ಸಮ್ಮೇಳನದ ಖರ್ಚಿನ ಬಗ್ಗೆ ಲೆಕ್ಕ ನೀಡದಿರುವುದು ಖಂಡನಾರ್ಹ ಎಂದ ಅವರು, ಈ ಸಂಬಂಧ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರಕ್ಕೆ ದೂರು ನೀಡುವ ಇಂಗಿತ ವ್ಯಕ್ತಪಡಿಸಿದರು.ಲೂಟಿ ಹೊಡೆಯಲು ಕಾವೇರಿ ಆರತಿ ಬೇಕೇ?ಕಾವೇರಿ ನದಿ ಪಾತ್ರದ ಕನ್ನಂಬಾಡಿ ಅಣೆಕಟ್ಟೆ ಬಳಿ 92 ಕೋಟಿ ರು. ವೆಚ್ಚದಲ್ಲಿ ಕಾವೇರಿ ಆರತಿ ಮಾಡಲು ಸರ್ಕಾರ ಹೊರಟಿರುವುದು ಹಣ ಲೂಟಿ ಮಾಡುವುದಕ್ಕೇ ವಿನಃ ಬೇರೇನೂ ಅಲ್ಲ ಎಂದು ಆರೋಪಿಸಿದ ಅನ್ನದಾನಿ ಅವರು, ಕಾವೇರಿ ಆರತಿ ಬದಲು ನಾಲೆಯ ಆಧುನೀಕರಣಕ್ಕೆ ಒತ್ತು ನೀಡಲಿ ಎಂದರು.ಜಾ.ದಳ ಮುಖಂಡರಾದ ಸದಾನಂದ, ಸಾತನೂರು ಜಯರಾಂ, ಶ್ರೀಧರ್, ಹನುಮಂತು, ಪುಟ್ಟಬುದ್ದಿ, ಸಿದ್ದಾಚಾರಿ, ದೊರೆಸ್ವಾಮಿ ಇತರರು ಗೋಷ್ಠಿಯಲ್ಲಿದ್ದರು.
೧೪ಕೆಎಂಎನ್‌ಡಿ-೧೨ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿದರು.