ಪರಿಷತ್‌ ಫಲಿತಾಂಶ ರಾಜ್ಯ ರಾಜಕಾರಣದ ದಿಕ್ಸೂಚಿ: ಸಚಿವ ಜೋಶಿ

KannadaprabhaNewsNetwork |  
Published : Oct 17, 2026, 02:00 AM IST
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದರು.  | Kannada Prabha

ಸಾರಾಂಶ

ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಭಾರೀ ಅಸಮಾಧಾನ ಮತ್ತು ಗೊಂದಲ ಮನೆ ಮಾಡಿದೆ. ನಮ್ಮಲ್ಲಿ ಎಲ್ಲ ಹಿರಿಯ ನಾಯಕರು ಒಗ್ಗಟ್ಟಾಗಿ ಶ್ರಮಿಸುತ್ತಿದ್ದು, ಜಗದೀಶ್ ಶೆಟ್ಟರ್ ಸೇರಿದಂತೆ ಯಾರೂ ಅಂತರ ಕಾಯ್ದುಕೊಂಡಿಲ್ಲ.

ಗದಗ: ಪಶ್ಚಿಮ ಪದವೀಧರ ಕ್ಷೇತ್ರ ಸೇರಿದಂತೆ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ದಾಖಲಿಸಲಿದ್ದು, ಈ ಫಲಿತಾಂಶ ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿಯಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

​ಪಶ್ಚಿಮ ಪದವೀಧರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಸ್.ವಿ. ಸಂಕನೂರ ಅವರ ಚುನಾವಣಾ ಪ್ರಚಾರಾರ್ಥವಾಗಿ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಎಲ್ಲೆಡೆ ಸಂಚರಿಸಿ ಪ್ರಚಾರ ನಡೆಸಿದ್ದೇನೆ. ಪದವೀಧರರು ಹಾಗೂ ಪ್ರಜ್ಞಾವಂತ ಮತದಾರರಲ್ಲಿ ಎನ್‌ಡಿಎ ಪರ ಅಗಾಧ ಉತ್ಸಾಹವಿದೆ ಎಂದರು.

ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಭಾರೀ ಅಸಮಾಧಾನ ಮತ್ತು ಗೊಂದಲ ಮನೆ ಮಾಡಿದೆ. ನಮ್ಮಲ್ಲಿ ಎಲ್ಲ ಹಿರಿಯ ನಾಯಕರು ಒಗ್ಗಟ್ಟಾಗಿ ಶ್ರಮಿಸುತ್ತಿದ್ದು, ಜಗದೀಶ್ ಶೆಟ್ಟರ್ ಸೇರಿದಂತೆ ಯಾರೂ ಅಂತರ ಕಾಯ್ದುಕೊಂಡಿಲ್ಲ. ಎಸ್.ವಿ. ಸಂಕನೂರ ಅವರು ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳ ಅಂತರದಿಂದ ಅತ್ಯಂತ ಸಲೀಸಾಗಿ ಗೆಲ್ಲಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

​ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಒಂದು ಕೈಯಲ್ಲಿ ತಿಂಗಳಿಗೆ ₹ 2 ಸಾವಿರ ಗ್ಯಾರಂಟಿ ಕೊಟ್ಟು, ಇನ್ನೊಂದು ಕೈಯಲ್ಲಿ ಹಾಲು, ಪೆಟ್ರೋಲ್, ಡೀಸೆಲ್, ಮದ್ಯ ಹಾಗೂ ಜನನ-ಮರಣ ಪ್ರಮಾಣಪತ್ರಗಳ ದರ ಏರಿಸಿ ಪ್ರತಿ ವ್ಯಕ್ತಿಯಿಂದ ತಿಂಗಳಿಗೆ ಕನಿಷ್ಠ ₹ 5 ಸಾವಿರ ವಸೂಲಿ ಮಾಡುತ್ತಿದ್ದಾರೆ. ದೇಶದಲ್ಲಿ ವಿದ್ಯುತ್ ಕೊರತೆ ಇಲ್ಲದಿದ್ದರೂ, ಅದನ್ನು ಖರೀದಿಸಿ ಜನರಿಗೆ ನೀಡಲಾಗದ ಅಯೋಗ್ಯ ಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ. ಹಳ್ಳಿಗಳಲ್ಲಿ ನಿರಂತರ ವಿದ್ಯುತ್ ಕಡಿತದಿಂದ ಜನ ಹೈರಾಣಾಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದ ವೇಳೆ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗೆ ಒಣ ಬೇಸಾಯದ ಪ್ರತಿ ಎಕರೆಗೆ ₹ 13 ಸಾವಿರ, ನೀರಾವರಿಗೆ ₹ 25 ಸಾವಿರ ಪರಿಹಾರ ಕೊಟ್ಟಿದ್ದೇವೆ. ಇಂದಿನ ಸರ್ಕಾರ ಪ್ರತಿ ಕುಟುಂಬಕ್ಕೆ ಕೇವಲ ₹ 2500 ನೀಡಿ ಕೈತೊಳೆದುಕೊಳ್ಳಲು ಮುಂದಾಗಿದೆ ಎಂದು ದೂರಿದ ಅವರು, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ನಷ್ಟದ ಕೂಪದಲ್ಲಿದ್ದು, ಬಸ್‌ಗಳಿಗೆ ಸ್ಟೆಪ್ನಿ, ಟೈಯರ್, ಬ್ಯಾಟರಿ ಇಲ್ಲ. ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲುವಂತಾಗಿದೆ. ಮೊಬೈಲ್ ಬೆಳಕಿನಲ್ಲಿ ಬಸ್ ಓಡಿಸುವಂತಹ ದಯನೀಯ ದುಸ್ಥಿತಿಗೆ ತಂದಿಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಸಿ.ಸಿ. ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ಎಂ.ಎಸ್. ಕರಿಗೌಡ್ರ, ಉಷಾ ದಾಸರ, ಲಿಂಗರಾಜ ಪಾಟೀಲ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೃತ ಸಿಐಎಸ್‌ಎಫ್ ಸಿಬ್ಬಂದಿ ಕುಟುಂಬಕ್ಕೆ ₹1 ಕೋಟಿ ವಿಮೆ
ಆತ್ಮನಿರ್ಭರ ಭಾರತದ ನೌಕಾ ಶಕ್ತಿಗೆ ಐಎನ್‌ಎಸ್ ಸಮರ್ಥಕ್ ಬಲ