ರಾಮನಗರ: ವಿದ್ಯೆ ಜ್ಞಾನದ ಸಂಪತ್ತಾಗಿದ್ದು, ವಿದ್ಯಾರ್ಥಿಗಳು ಸಿಇಟಿ, ನೀಟ್, ಜೆಇಇ ತರಬೇತಿ ಪಡೆದು ಉನ್ನತ ಸ್ಥಾನ ಅಲಂಕರಿಸಲು ನಿರಂತರ ಪರಿಶ್ರಮ ಹಾಕಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಕಿವಿಮಾತು ಹೇಳಿದರು.
ವಿದ್ಯಾರ್ಥಿ ಜೀವನದ ಅಮೃತ ಘಳಿಗೆಯಲ್ಲಿ ಸತತ ಪ್ರಯತ್ನ, ನಿರಂತರ ಓದಿನ ಅಭ್ಯಾಸ, ತರಬೇತಿಗಳನ್ನು ಪಡೆದುಕೊಂಡು ಉನ್ನತ ಪರೀಕ್ಷೆಗಳನ್ನು ಎದುರಿಸು ವಂತಾಗಿ ತಮ್ಮ ಗುರಿ ಸಾಧಿಸುವ ಕೆಲಸವನ್ನು ಇಚ್ಚಾಶಕ್ತಿಯಿಂದ ಮಾಡಿ ಯಶಸ್ಸು ಗಳಿಸಿ ಎಂದು ಕಿವಿ ಮಾತು ಹೇಳಿದರು.
ಸ್ಪರ್ಧಾತ್ಮಕ ಯುಗದಲ್ಲಿ ಪ್ರವೇಶ ಪರೀಕ್ಷೆಗಳನ್ನು ಎದುರಿಸುವ ಸವಾಲುಗಳು ನಿಮ್ಮ ಮುಂದಿದೆ. ದ್ವಿತೀಯ ಪಿಯುಸಿ ನಿಮ್ಮ ಭವಿಷ್ಯ ರೂಪಿಸುವ ಮುಖ್ಯ ಘಟ್ಟ. ಇಲ್ಲಿಂದ ನಿಮ್ಮ ಓದಿನ ದಾರಿಯನ್ನು ಆಯ್ಕೆ ಮಾಡಿಕೊಂಡು ಆ ದಾರಿಯಲ್ಲಿ ಸಾಗುವ ಅವಕಾಶವಿದೆ. ತಾವುಗಳು ನಗರಸಭೆಯಿಂದ ನೀಡುತ್ತಿರುವ ಉಚಿತ ತರಬೇತಿಯ ಪ್ರಯೋಜನ ಪಡೆದುಕೊಂಡು ಪೋಷಕರಿಗೆ ಹೆಸರು ತರುವ ಕೆಲಸ ಮಾಡಿ ಎಂದು ಇಕ್ಬಾಲ್ ಹುಸೇನ್ ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ನಗರಸಭೆ ಬಜೆಟ್‌ನಲ್ಲಿ ಹೊಸ ಚಿಂತನೆ ಮಾಡಿ ತರಬೇತಿ ಆಯೋಜಿಸಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನೀರೆರೆಯುವ ಕೆಲಸ ಮಾಡುತ್ತಿದ್ದೇವೆ. ವೇದಿಕೆಯ ಅತಿಥಿಗಳೆಲ್ಲರೂ ಉನ್ನತ ವಿದ್ಯಾಭ್ಯಾಸ ಮಾಡಿದವರು. ಇವರು ವಿದ್ಯಾರ್ಥಿಗಳಿಗೆ ಅವರ ಅನುಭವ ಹಂಚಿಕೊಂಡು ತಮಗೆ ಪ್ರೇರಣೆಯಾಗುವ ಉದ್ದೇಶದಲ್ಲಿ ಸಾಧನೆ ಮಾಡಿದವರನ್ನು ಅತಿಥಿಗಳಾಗಿ ಆಹ್ವಾನಿಸಿದ್ದೇವೆ ಎಂದರು.
ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮಾತನಾಡಿ, ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಅಕ್ಕಾ ಅಕಾಡೆಮಿ ಉಪಯುಕ್ತ ಮಾಹಿತಿ ನೀಡಲಿದೆ. ತಮ್ಮ ಬುದ್ದಿಶಕ್ತಿಯನ್ನು ಬಳಸಿ ತರಬೇತಿಯನ್ನು ಸದ್ಭಳಕೆ ಮಾಡಿಕೊಂಡರೆ ತಾವು ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದರು.
ನಗರಸಭೆ ಪೌರಾಯುಕ್ತ ಡಾ.ಜಯಣ್ಣ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ಉಜ್ವಲ ಶಿಕ್ಷಣಕ್ಕೆ ಪೂರಕವಾಗಿ ವಿಜ್ಞಾನ ವಿದ್ಯಾರ್ಥಿಗಳಿಗೆ ವೃತ್ತಿಪರ ಪ್ರವೇಶ ಪರೀಕ್ಷೆಗಳ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಇಂದು ಚಾಲನೆ ಸಿಕ್ಕಿದೆ. 8 ತಿಂಗಳ ಅವಧಿಯ ತರಬೇತಿಗೆ ಅಕ್ಕಾ ಅಕಾಡೆಮಿ ಮತ್ತು ನಗರಸಭೆ ಒಪ್ಪಂದ ಮಾಡಿಕೊಂಡಿದೆ. ರಾಮನಗರದ ವಿದ್ಯಾರ್ಥಿ ಗಳು ಉತ್ತಮ ಸಾಧನೆ ಮಾಡಿದರೆ ಈ ಕಾರ್ಯಕ್ರಮದ ಉದ್ದೇಶ ಸಾರ್ಥಕವಾಗಲಿದೆ ಎಂದರು
ಅಕ್ಕಾ ಐಎಎಸ್ ಅಕಾಡೆಮಿಯ ಡಾ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ನಗರಸಭೆ ವತಿಯಿಂದ ಮಾಡುತ್ತಿರುವ ಹೊಸ ಪ್ರಯೋಗವಾಗಿದೆ. ಎಲ್ಲ ವಿಷಯಗಳ ಪ್ರವೇಶ ಪರೀಕ್ಷೆಗಳಿವೆ. ಸೆ.14 ರಿಂದ ತರಬೇತಿ ಆರಂಭವಾಗಲಿದ್ದು, ಸರ್ಕಾರಿ ಶಾಲೆಯಲ್ಲಿ ಓದುವ ಬಡ ವಿಜ್ಞಾನ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಪಡೆಯಲು ಖರ್ಚು ಹೆಚ್ಚಾಗಲಿದ್ದು, ಅದನ್ನು ಗಮನಿಸಿ ನಗರಸಭೆ ವತಿಯಿಂದ ಉಚಿತ ತರಬೇತಿ ನೀಡುವ ಕಾರ್ಯಕ್ರಮವನ್ನು ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ಅಣಿಗೊಳಿಸುವು ದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ಯೋಜನಾ ನಿರ್ದೇಶಕ ಜಿ.ಡಿ.ಶೇಖರ್ ಮಾತನಾಡಿದರು. ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ.ಶಿವಣ್ಣ, ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಬಿ.ಸಿ.ಪಾರ್ವತಮ್ಮ, ಅಜ್ಮತ್ , ಸೋಮಶೇಖರ್, ಆರೀಫ್ , ಪವಿತ್ರ, ಮಂಜುನಾಥ್, ಗಿರಿಜಮ್ಮ, ರಮೇಶ್, ಜಯಲಕ್ಷ್ಮಮ್ಮ, ಪದ್ಮಾ, ಮಹಾಲಕ್ಷ್ಮಿ, ವಿಜಯಕುಮಾರಿ, ಮಂಜುಳಾ, ಖುರೇಷಿ, ಗಿರಿಜಮ್ಮ, ನಿಜಾಂ ಷರೀಫ್ , ಬೈರೇಗೌಡ, ಆಯಿಷಾ ಖಾನಂ, ಸಮದ್, ಅಣ್ಣು, ನಾಗಮ್ಮ ಮತ್ತಿತರರು ಉಪಸ್ಥಿತರಿದ್ದರು.
ರಾಮನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವೃತ್ತಿಪರ ಪ್ರವೇಶ ಪರೀಕ್ಷೆಗಳ ತರಬೇತಿ ಕಾರ್ಯಕ್ರಮವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು.