ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮತದಾನಕ್ಕೆ ಕೌಂಟ್ ಡೌನ್ ಆರಂಭಗೊಂಡಿದ್ದು ಮಸ್ಟರಿಂಗ್ ಕಾರ್ಯ ಮುಗಿಸಿ ಚುನಾವಣಾ ಸಿಬ್ಬಂದಿ ಮತಗಟ್ಟೆಗಳತ್ತ ತೆರಳಿದ್ದಾರೆ. ಚಾಮರಾಜನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದ್ದು ಇವಿಎಂ ಹಿಡಿದು ನಿಗದಿಪಡಿಸಿದ ಮತಗಟ್ಟೆಗಳತ್ತ ಚುನಾವಣಾ ಸಿಬ್ಬಂದಿ ಬಸ್‌ನಲ್ಲಿ ತೆರಳಿದರು.ಜಿಲ್ಲೆಯ ಹನೂರಿನ ಕ್ರೈಸ್ತರಾಜ ಎಜುಕೇಷನ್ ಟ್ರಸ್ಟ್, ಕೊಳ್ಳೇಗಾಲದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು, ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಂಡ್ಲುಪೇಟೆಯ ಸೇಂಟ್ ಜಾನ್ಸ್ ಇಂಗ್ಲೀಷ್ ಮೀಡಿಯಂ ಶಾಲೆಗಳಲ್ಲಿ ತೆರೆಯಲಾಗಿದ್ದ ಮಸ್ಟರಿಂಗ್ ಕೇಂದ್ರಗಳಿಗೆ ಬೆಳಗ್ಗೆಯೇ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಇವಿಎಂ, ವಿವಿ ಪ್ಯಾಟ್ ಸೇರಿದಂತೆ ಇತರೆ ಸಲಕರಣೆಗಳನ್ನು ಪಡೆದುಕೊಂಡರು.ಮಸ್ಟರಿಂಗ್ ಕೇಂದ್ರಗಳಲ್ಲಿಯೇ ಅಧಿಕಾರಿಗಳ ಸೂಚನೆ ಪಡೆದು ಕೆಎಸ್‌ಆರ್‌ಟಿಸಿ ಬಸ್ ಮತ್ತು ಇತರ ವಾಹನಗಳ ಮೂಲಕ ಮತಗಟ್ಟೆಗಳಿಗೆ ತೆರಳಿದರು.
ಚಾಮರಾಜನಗರ ಜಿಲ್ಲೆಯಲ್ಲಿ 1196 ಪಿಆರ್‌ಓ, 1196 ಎಪಿಆರ್‌ಓ, 2392 ಪಿಓ ಸೇರಿದಂತೆ 4784 ಸಿಬ್ಬಂದಿಯು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 2000 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. 2000 ಬ್ಯಾಲೆಟ್ ಯೂನಿಟ್ ಹಾಗೂ 559 ಕಾಯ್ದಿರಿಸಿಸುವದನ್ನು ಸೇರಿಸಿದರೆ ಒಟ್ಟು 2559 ಬ್ಯಾಲೆಟ್ ಯೂನಿಟ್ ಬಳಸಲಾಗುತ್ತಿದ್ದೆ. 2618 ಕಂಟ್ರೋಲ್ ಯೂನಿಟ್, 2792 ವಿವಿ ಪ್ಯಾಟ್ ಗಳು ಬಳಸಲಾಗುತ್ತಿದೆ. ಜಿಲ್ಲೆಯ 197 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.ಶಾಂತಿಯುತ ಮತದಾನ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 4 ಡಿವೈಎಸ್ಪಿ, 13 ಪಿಐ, 41 ಪಿಎಸ್ಐ, 67 ಎಎಸ್ಐ, 936 ಕಾನ್ಸ್‌ಟೇಬಲ್, 600 ಹೋಂ ಗಾರ್ಡ್ ಸೇರಿದಂತೆ 1667 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇನ್ನು, ಮತಗಟ್ಟೆಗಳತ್ತ ಮತಗಟ್ಟೆ ಆದಿಕಾರಿಗಳನ್ನು ಕರೆದೊಯ್ಯಲು 163 ಕೆಎಸ್ಆರ್ಟಿಸಿ ಬಸ್ ಬಳಕೆ ಮಾಡಲಾಗುತ್ತಿದೆ. ಶುಕ್ರವಾರ ಬೆಳಗ್ಗೆ 7 ರಿಂದ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭಗೊಳ್ಳಲಿದ್ದು ಮತದಾನ ಪ್ರಕ್ರಿಯೆಗೆ ಲೋಕ ಅಖಾಡ ಸಜ್ಜಾಗಿದೆ.
ಸಕಲ ವ್ಯವಸ್ಥೆ: ಸಿಬ್ಬಂದಿಯಿಂದ ಮತದಾನಚುನಾವಣಾ ಸಿಬ್ಬಂದಿ ಮಸ್ಟರಿಂಗ್ ಕೇಂದ್ರದಲ್ಲಿ ಅಂಚೆ ಮತದಾನ ಮಾಡಿ ಮತಗಟ್ಟೆಗಳತ್ತ, ಹಲವರು ಇಡಿಎಸ್ ಸರ್ಟಿಫಿಕೇಟ್‌ನ್ನು ಪಡೆದುಕೊಂಡು ಮತಗಟ್ಟೆಗಳತ್ತ ಹೊರಟರು. ಇಡಿಎಸ್ ಪಡೆದವರು ಮತಗಟ್ಟೆಗಳಲ್ಲೇ ತಮ್ಮ ಹಕ್ಕನ್ನು ಚಲಾಯಿಸಬಹುದಾಗಿದೆ. ಚಾಮರಾಜನಗರ ಡಿಸಿ ಶಿಲ್ಪಾನಾಗ್, ಎಸ್ಪಿ ಪದ್ಮಿನಿ ಸಾಹು, ಜಿಪಂ ಸಿಇಒ ಆನಂದಪ್ರಕಾಶ್ ಮೀನಾ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯಾವುದೇ ಗೊಂದಲಕ್ಕೆ ಒಳಗಾಗಬೇಡಿ, ಸಂದೇಹಗಳಿದ್ದರೆ ಕೇಳಿ ಪರಿಹರಿಸಿಕೊಳ್ಳಿ. ಧೈರ್ಯವಾಗಿ ಕರ್ತವ್ಯ ನಿರ್ವಹಿಸಿ, ಸಮಸ್ಯೆ- ಸಂದೇಹ ಏರ್ಪಟ್ಟರೇ ಸಹಾಯವಾಣಿಗೆ ಕರೆಮಾಡಿ ಎಂದು ಡಿಸಿ ಚುನಾವಣಾ ಸಿಬ್ಬಂದಿಗೆ ಧೈರ್ಯ ತುಂಬಿದರು.17.78 ಲಕ್ಷ ಮತದಾರರುಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ೧೭,೭೮೩೧೦ ಮತದಾರರಿದ್ದು ೨ ಸಾವಿರ ಮತಗಟ್ಟೆಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಸಖಿ ಸೌರಭ, ಸಾಂಪ್ರಾದಾಯಿಕ ಬುಡಕಟ್ಟು, ವಿಶೇಷಚೇತನರ, ಯುವ ಸೌರಭ, ಎತ್ನಿಕಲ್, ಅನ್ನದಾತ, ಹಸಿರು ಮತಗಟ್ಟೆಗಳನ್ನು ತೆರೆಯಲಾಗಿದೆ.