ಪಟ್ಟಣದ ಯಾವ ಭಾಗದಲ್ಲಿ ನೋಡಿದರೂ, ಜಾತ್ರೆಯದ್ದೇ ಸದ್ದು । ೪ರಂದು ರಥೋತ್ಸವ
ನೂರಾರು ವರ್ಷ ಇತಿಹಾಸ ಹೊಂದಿರುವ ಮುಂಡಗೋಡ ಗ್ರಾಮದೇವಿ ಶ್ರೀ ಮಾರಿಕಾಂಬಾ ದೇವಿಯ ೭ನೇ ಜಾತ್ರಾ ಮಹೋತ್ಸವದ ಸಕಲ ಸಿದ್ಧತೆ ನಡೆದಿದ್ದು, ಕ್ಷಣಗಣನೆ ಆರಂಭವಾಗಿದೆ. ಈಗ ಪಟ್ಟಣದ ಯಾವ ಭಾಗದಲ್ಲಿ ನೋಡಿದರೂ, ಜಾತ್ರೆಯ ಸಡಗರ ಕಂಡುಬರುತ್ತದೆ. ಇಡೀ ಮುಂಡಗೋಡದ ಪರಿಸರದಲ್ಲಿ ಜಾತ್ರಾ ಚಟುವಟಿಕೆ ಹೊಸ ವಾತಾವರಣ ಮನೆಮಾಡಿದೆ.ಮೂರು ವರ್ಷಕ್ಕೊಂದು ಬಾರಿ ನಡೆಯುವ ಮುಂಡಗೋಡ ಮಾರಿಕಾಂಬಾ (ದ್ಯಾಮವ್ವ) ದೇವಿಯ ಜಾತ್ರೆ ಫೆ. ೩ರಿಂದ ೧೧ರ ವರೆಗೆ ನಡೆಯಲಿದೆ. ಶ್ರೀದೇವಿ ರಥೋತ್ಸವ ೪ರಂದು ನಡೆಯಲಿದ್ದು, ಇದನ್ನು ಕಣ್ಣು ತುಂಬಿಸಿಕೊಳ್ಳಲು ಜನರು ತುದಿಗಾಲಲ್ಲಿ ನಿಂತಿದ್ದಾರೆ.ಜಾತ್ರಾ ಪೂರ್ವದ ೫ ಹೊರಬೀಡು ಒಳಗೊಂಡು ಎಲ್ಲ ಜಾತ್ರಾ ವಿಧಿಗಳು ಯಶಸ್ವಿಯಾಗಿ ನಡೆದಿದ್ದು, ಜಾತ್ರಾ ಸಿದ್ಧತೆಯ ಅಂತಿಮ ಹಂತ ತಲುಪಿದೆ. ಸುಮಾರು ೫೦ ಅಡಿ ಎತ್ತರದ ಶ್ರೀ ದೇವಿಯ ರಥ ಜೋಡಣೆಯು ಪೂರ್ತಿಗೊಂಡಿದ್ದು, ಅಲಂಕಾರ ಬಾಕಿ ಉಳಿದಿದೆ. ಶ್ರೀ ದೇವಿರಥ ಸಾಗಿ ಆಸೀನಳಾಗುವ ಜಾತ್ರಾ ಚೌತಮನೆ (ಗದ್ದುಗೆ) ಕಾರ್ಯ ಸಂಪೂರ್ಣಗೊಂಡಿದೆ. ಈ ಭಾಗದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, ವಿದ್ಯುತ್ ದೀಪಗಳ ಅಲಂಕಾರ ನಡೆಯುತ್ತಿದೆ. ಜಾತ್ರಾ ಸಿದ್ಧತೆಯ ಅಂಗವಾಗಿ ಜಾತ್ರಾ ಗದ್ದುಗೆಗೆ ತಾಗಿಕೊಂಡೆ ಇರುವ ದೇವಸ್ಥಾನಕ್ಕೆ ಸೇರಿದ ವಿಶಾಲವಾದ ಜಮೀನಿನಲ್ಲಿ ಜಾತ್ರಾ ಅಂಗಡಿ ಹಾಗೂ ಮನರಂಜನೆ ವೇದಿಕೆಗೆ ವ್ಯವಸ್ಥೆ ಮಾಡಲಾಗಿದೆ.ಐತಿಹಾಸಿಕ ಜಾತ್ರೆ:
ಮುಂಡಗೋಡ ಗ್ರಾಮದೇವಿ ಮಾರಿಕಾಂಬಾ (ದ್ಯಾಮವ್ವ) ದೇವಿ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ೮೦ ವರ್ಷಗಳ ಹಿಂದೆ ಕಾರಣಾಂತರಗಳಿಂದ ಜಾತ್ರೆ ಸ್ಥಗಿತಗೊಂಡಿತ್ತು. ೨೦೦೭ರಲ್ಲಿ ಮತ್ತೆ ದೇವಾಲಯ ಕಮಿಟಿ ರಚಿಸಿ ೩ ವರ್ಷಕ್ಕೊಮ್ಮೆ ಜಾತ್ರೆ ನಡೆಸುವ ಬಗ್ಗೆ ತೀರ್ಮಾನಿಸಿ ಜಾತ್ರೆಯನ್ನು ಪುನಃ ಪ್ರಾರಂಭಿಸಲಾಯಿತು. ಈಗಾಗಲೇ ೬ ಜಾತ್ರೆ ಸಕಲ ಸಂಪ್ರದಾಯದಂತೆ ಅದ್ಧೂರಿಯಾಗಿ ನಡೆದಿದ್ದು, ಇದು ೭ನೇ ಜಾತ್ರೆಯಾಗಿದೆ.ಜಾತ್ರಾ ವಿಧಿ ವಿಧಾನ:ಫೆ. ೩ರಂದು ಬೆಳಗ್ಗೆ ೧೧.೩೦ಕ್ಕೆ ಶ್ರೀದೇವಿಯ ಮಂಗಲ ಕಾರ್ಯ ನಡೆದು ನಂತರ ದೇವಸ್ಥಾನದ ಆವರಣದಲ್ಲಿ ಗಣಹವನ, ನವಚಂಡಿ ಹವನ ಇತ್ಯಾದಿ ನಡೆಯುವುದು. ಮಧ್ಯಾಹ್ನ ೧೨.೩೦ಕ್ಕೆ ಪೂರ್ಣಹುತಿ ನಂತರ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಶ್ರೀದೇವಿಯ ತವರು ಮನೆ ನ್ಯಾಸರ್ಗಿ ಗ್ರಾಮದವರಿಂದ ಉಡಿ ತುಂಬುವ ಕಾರ್ಯಕ್ರಮ ಜರುಗುವುದು. ೪ರಂದು ಬೆಳಗ್ಗೆ ೮.೫೧ಕ್ಕೆ ಶ್ರೀ ದೇವಿಯ ರಥೋತ್ಸವ ಆರಂಭಗೊಳ್ಳುವುದು. ಶಾಸಕ ಶಿವರಾಮ ಹೆಬ್ಬಾರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಗಡಿ ಏರಿ ಶ್ರೀ ವರದ ಆಂಜನೇಯ ಸ್ವಾಮಿ ಸನ್ನಿಧಾನದ ಅವದೂತ ರಾಜೇಂದ್ರ ಭಟ್ಟ ಅವರು ರಥೋತ್ಸವ ಉದ್ಘಾಟಿಸಲಿದ್ದು, ರಥವು ದೇವಿಯ ದೇವಾಲಯದಿಂದ ಹೊರಟು ಮಧ್ಯಾಹ್ನ ೧.೪೫ಕ್ಕೆ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಝಾಂಜ್ ಮೇಳಗಳಲ್ಲದೆ, ಚಿಲಿಪಿಲಿ ನೃತ್ಯ, ಚಂಡೆ ವಾದ್ಯ, ಗೊಂಬೆ ಕುಣಿತ, ಹುಲಿ ವೇಷ ನೃತ್ಯ ಮುಂತಾದ ಸಾಂಸ್ಕೃತಿಕ ವೈಭವ ತಂಡಗಳು ಪಾಲ್ಗೊಳ್ಳಲಿವೆ.ಹಣ್ಣು ಕಾಯಿ ಸೇವೆ:
ಫೆ. ೫ರಂದು ಬೆಳಗ್ಗೆ ೭ ಗಂಟೆಯಿಂದ ಫೆ. ೧೦ರ ವರೆಗೆ ರಾತ್ರಿ ೧೦ ಗಂಟೆ ವರೆಗೆ ಹಾಗೂ ಫೆ. ೧೧ರಂದು ಮಧ್ಯಾಹ್ನ ೨ ಗಂಟೆ ವರೆಗೆ ಶ್ರೀ ದೇವಿಗೆ ಹಣ್ಣುಕಾಯಿ ಸೇವೆ ಸಮರ್ಪಿಸಲು ಭಕ್ತಾದಿಗಳಿಗೆ ಅವಕಾಶವಿದೆ. ಶ್ರೀದೇವಿ ವಿಸರ್ಜನಾ ಮೆರವಣಿಗೆ ೧೧ರಂದು ಸಂಜೆ ೪ ಗಂಟೆಯಿಂದ ಆರಂಭಗೊಳ್ಳುವುದು, ಶ್ರೀ ದೇವಿಯ ಪುನರ್ ಪ್ರತಿಷ್ಠಾಪನೆಯ ಮೂಲ ದೇವಸ್ಥಾನದಲ್ಲಿ ಯುಗಾದಿ ದಿನವಾದ ಮಾ. ೧೯ರಂದು ನಡೆಯಲಿದೆ. ತವರು ಮನೆಯಲ್ಲಿ ಭಕ್ತಿ ಸಂಭ್ರಮ:ಮುಂಡಗೋಡ ಗ್ರಾಮದೇವಿ ಶ್ರೀ ಮಾರಿಕಾಂಬಾದೇವಿಯ ತವರುಮನೆ ಮುಂಡಗೋಡದಿಂದ ಸುಮಾರು ಎರಡೂವರೆ ಕಿಮೀ ದೂರದಲ್ಲಿರುವ ನ್ಯಾಸರ್ಗಿ ಗ್ರಾಮವಾಗಿದ್ದು, ಗ್ರಾಮದೇವಿಯ ಯಾವುದೇ ವಿಶೇಷ ಧಾರ್ಮಿಕ ಕಾರ್ಯ ನಡೆಯುವಾಗ ಸಂಪ್ರದಾಯಿಕವಾಗಿ ಪ್ರಥಮ ಪೂಜೆ ನ್ಯಾಸರ್ಗಿ ಗ್ರಾಮದವರಿಂದಲೇ ನಡೆಯಬೇಕು. ಅವರಿಗೆ ಪ್ರಥಮ ಆದ್ಯತೆ ನಂತರವೇ ಎಲ್ಲ ವಿಧಿಗಳು ದೇವಸ್ಥಾನ ಟ್ರಸ್ಟ್‌ನಿಂದ ನಡೆಯುವುದು ವಿಶೇಷ.