129 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ಮುಕ್ತಾಯ

KannadaprabhaNewsNetwork | Published : Jun 5, 2024 12:31 AM

ಸಾರಾಂಶ

ಏಪ್ರಿಲ್ 26 ರಂದು ನಡೆದ ಲೋಕಸಭಾ ಚುನಾವಣೆಯ ಬಳಿಕ ಬಿಗಿ ಭದ್ರತೆಯಲ್ಲಿ ಇಟ್ಟಿದ್ದ ಸ್ಟ್ರಾಂಗ್ ರೂಂ ಅನ್ನು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತೆಗೆಯುವ ಮೂಲಕ ಮತ ಎಣಿಕೆಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಏಪ್ರಿಲ್ 26 ರಂದು ನಡೆದ ಲೋಕಸಭಾ ಚುನಾವಣೆಯ ಬಳಿಕ ಬಿಗಿ ಭದ್ರತೆಯಲ್ಲಿ ಇಟ್ಟಿದ್ದ ಸ್ಟ್ರಾಂಗ್ ರೂಂ ಅನ್ನು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತೆಗೆಯುವ ಮೂಲಕ ಮತ ಎಣಿಕೆಗೆ ಚಾಲನೆ ನೀಡಿದರು.ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಹಾಗೂ ಎಸ್ಪಿ ಅಶೋಕ್ ಕೆ.ವಿ ನೇತೃತ್ವದಲ್ಲಿ ಸ್ರ್ಟಾಂದಗ್ ರೂಂ ತೆರೆಯಲಾಯಿತು. ತುಮಕೂರಿನ ವಿ.ವಿ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಮೊದಲು ಅಂಚೆ ಮತದಾನ ಎಣಿಕೆ ಆರಂಭವಾಯಿತು.ಬಳಿಕ ಮತಯಂತ್ರಗಳನ್ನು ತೆಗೆದು ಮತ ಎಣಿಕೆ ಮಾಡಲಾಯಿತು. ತುಮಕೂರು ವಿ.ವಿ ವಿಜ್ಞಾನ ಕಾಲೇಜಿನಲ್ಲಿ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಮಧುಗಿರಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆದರೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಿತು.ತುಮಕೂರು ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ - 16,61,309 ಇದ್ದು, ಪುರುಷ ಮತದಾರ -81,9,065, ಮಹಿಳಾ ಮತದಾರರ- 84,2,170,ಇತರೆ ಮತದಾರ - 74 ಇತ್ತು. ಏಪ್ರಿಲ್ 26 ರಂದು ನಡೆದ ಚುನಾವಣೆಯಲ್ಲಿ 12,96720 ಮಂದಿ ಮತದಾನ ಮಾಡಿದರು. ಈ ಪೈಕಿ ಪುರುಷ ಮತದಾರರು - 6,49,934 ಹಾಗೂ ಮಹಿಳಾ ಮತದಾರರು- 6,46,767 ಮತ್ತು 17 ಮಂದಿ ಇತರೆಯವರು ಮತದಾನ ಮಾಡಿದ್ದರು.

ಒಟ್ಟು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಶೇ.78.5 ಮತದಾನ ಆಗಿತ್ತು. ಮತ ಎಣಿಕೆ ವೇಳೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 14 ‌ಮತ ಎಣಿಕೆ ಟೇಬಲ್‌ ಗಳನ್ನು ಮೀಸಲಾಗಿ ಇಡಲಾಗಿತ್ತು. ಒಟ್ಟು 112 ಟೇಬಲ್ ನಲ್ಲಿ ಮತ ಎಣಿಕೆ ನಡೆಯಿತು. ಒಟ್ಟು 129 ಸುತ್ತುಗಳಲ್ಲಿ ಮತ ಎಣಿಕೆ ನಡೆಯಿತು. ಮತ ಎಣಿಕೆ ಕಾರ್ಯಕ್ಕೆ 448 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರತ್ಯೇಕ 18 ಟೇಬಲ್ ಗಳಲ್ಲಿ ಅಂಚೆ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿತ್ತು. ಪ್ರತ್ಯೇಕ 18 ಟೇಬಲ್ ಗಳಲ್ಲಿ ಅಂಚೆ ಮತ ಎಣಿಕೆ ನಡೆಯಿತು. ಮತ ಎಣಿಕೆಗೆ ಆಗಮಿಸುವ ಏಜೆಂಟರ್‌ಗೆ ಪಾಸು ವಿತರಿಸಲಾಗಿತ್ತು. ಮೂರು ಸುತ್ತಿನ ಕೋಟೆಯಂತಾದ ಮತ ಎಣಿಕೆ ಕೇಂದ್ರ‌: ಮತ ಎಣಿಕೆ ಹಿನ್ನೆಲೆಯಲ್ಲಿ ತುಮಕೂರು ಅಕ್ಷರಶಃ ಮೂರು ಸುತ್ತಿನ ಕೋಟೆಯಂತಾಗಿತ್ತು. ಮತ ಎಣಿಕೆ ಕೇಂದ್ರಗಳ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ತುಮಕೂರು ಎಸ್ಪಿ ಅಶೋಕ್ ಕೆವಿ ನೇತೃತ್ವದಲ್ಲಿ ಪೊಲೀಸ್ ಬಿಗಿಭದ್ರತೆ ಮಾಡಲಾಗಿತ್ತು. ಮತ ಎಣಿಕೆ ಕೇಂದ್ರಗಳಿಗೆ ಮೂರು ಸುತ್ತಿನ ಭದ್ರತೆ ಒದಗಿಸಲಾಗಿತ್ತು. ಮೊದಲ ಹಂತದಲ್ಲಿ ಸಿವಿಲ್ ಪೊಲೀಸ್, ಎರಡನೇ ಹಂತದಲ್ಲಿ ಕೆಎಸ್ ಆರ್ ಪಿಯ ಮೂರು ತುಕಡಿಗಳು, ಮತ್ತು ಮೂರನೇ ಹಂತದಲ್ಲಿ ಬಿಎಸ್ ಎಫ್/ ಸಿಎಎಸ್ ಎಫ್ ಭದ್ರತೆ ನೀಡಲಾಗಿತ್ತು. ಒಬ್ಬರು ಎಎಸ್ಪಿ, ನಾಲ್ವರು ಡಿವೈಎಸ್ಪಿ ಗಳನ್ನು ನಿಯೋಜಿಸಲಾಗಿತ್ತು.15 ಸಿಪಿಐ, 29 ಪಿಎಸ್ಐ, 48 ಎಎಸ್ಐ, 277 ಪೊಲೀಸ್ ಸಿಬ್ಬಂದಿ, 42 ಮಹಿಳಾ ಪೊಲೀಸ್ ಸಿಬ್ಬಂದಿ, 63 ಕೆಎಸ್ಆರ್‌ಪಿ ಹಾಗೂ 40 ಸಿಎಪಿಎಫ್ ಯಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು. ಇನ್ನೊಂದೆಡೆ ಮತ ಎಣಿಕೆ ಕೇಂದ್ರಗಳ ಸುತ್ತಲೂ ಸಿಸಿಟಿವಿ ಕಣ್ಗಾವಲು ಹಾಕಲಾಗಿತ್ತು. ಒಟ್ಟಾರೆಯಾಗಿ ಕಳೆದ 2 ತಿಂಗಳಿನಿಂದ ನಡೆದ ಲೋಕಸಮರ ಚುನಾವಣಾ ಪ್ರಕ್ರಿಯೆ ಮತ ಎಣಿಕೆಯೊಂದಿಗೆ ಮುಕ್ತಾಯವಾಯಿತು.

Share this article