ಶೃಂಗೇರಿ ಮೆಣಸೆ ರಾಜೀವಗಾಂಧಿ ಸಂಸ್ಕೃತ ಪರಿಸರದಲ್ಲಿ ನಡೆದ ದಕ್ಷಿಣವಲಯ ಯುವ ಮಹೋತ್ಸವ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಶೃಂಗೇರಿಯುವಶಕ್ತಿ ದೇಶದ ನಿಜವಾದ ಶಕ್ತಿ. ಸದೃಡ ಸಮಾಜ, ದೇಶ ನಿರ್ಮಾಣದಲ್ಲಿ ಯುವಜನರ ಪಾತ್ರ ಮಹತ್ತರವಾಗಿದೆ. ಯುವಶಕ್ತಿ ಜಾಗೃತವಾದರೆ ಮಾತ್ರ ದೇಶ ಅಭಿವೃದ್ಧಿ ಸಾದ್ಯ ಎಂದು ವಾರಣಾಸಿ ಕರಪಾತ್ರಿಸ್ವಾಮಿ ಅಭಿಷೇಕ ಬ್ರಹ್ಮಚಾರಿ ಅಭಿಪ್ರಾಯಪಟ್ಟರು. ಶೃಂಗೇರಿ ಮೆಣಸೆ ರಾಜೀವಗಾಂಧಿ ಸಂಸ್ಕೃತ ಪರಿಸರದಲ್ಲಿ ನಡೆದ ದಕ್ಷಿಣವಲಯ ಯುವ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ಯುವಜನತೆ ಭಾರತೀಯ ಸಂಸ್ಕೃತಿಯ ಆಧಾರವಾದ ವೇದ, ಉಪನಿಷತ್ತು, ಪುರಾಣ, ಮೊದಲಾದವು ಗಳಲ್ಲಿ ಚಿತ್ರಿಸಲ್ಪಟ್ಟ ನಚಿಕೇತ, ಪ್ರಹ್ಲಾದ, ಮೊದಲಾದವರಿಂದ ಹಾಗೂ ಶ್ರೀ ಶಂಕರ ಭಗವತ್ಪಾದಾ ಚಾರ್ಯರು, ಸ್ವಾಮಿ ವಿವೇಕಾನಂದರಂತಹ ಮಹಾಪುರುಷರಿಂದ, ಐತಿಹಾಸಿಕ ಪುರುಷರ ಜೀವನ ಸಂದೇಶಗಳಿಂದ ಸ್ಫೂರ್ತಿ ಪಡೆದು ಸದೃಢ ಸಮಾಜ, ದೇಶ ಕಟ್ಟುವ ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ಯುವ ಮಹೋತ್ಸವಗಳಂತಹ ಕಾರ್ಯಕ್ರಮ ಯುವ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವನೆ, ಐಕ್ಯತೆ, ಒಗ್ಗಟ್ಟು,ಶಿಸ್ತನ್ನು ಮೂಡಿಸುತ್ತದೆ. ಅಲ್ಲದೇ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಮೂಡಿಸುತ್ತದೆ. ಯುವಶಕ್ತಿ ದೇಶದ ನಿಜವಾದ ಆಸ್ತಿ. ಯುವಶಕ್ತಿ ಸದ್ಭಳಕೆಯಾಗಬೇಕು ಎಂದರು. ಯುವಚೇತನ ಸಂಘಟನೆಯ ರಾಷ್ಟ್ರೀಯ ಸಮನ್ವಯಕಾರ ರೋಹಿತ್ ಕುಮಾರ್ ಸಿಂಗ್ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿ, ಬ್ರಿಟೀಷರ ಕಾಲದ ಮೆಕಾಲೆ ಶಿಕ್ಷಣ ಪದ್ದತಿ ಭಾರತೀಯರಲ್ಲಿ ದಾಸ್ಯಮನೋಭಾವ ಉಂಟುಮಾಡಿದೆ. ಹಾಗಾಗಿ ಯುವಜನರಲ್ಲಿ ಪುನಃ ಭಾರತೀಯತೆ ಹೆಚ್ಚಿಸುವ ಕೆಲಸ ಇಂದು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಶ್ರೀ ಶಂಕರಾ ಚಾರ್ಯರಂತಹ ಭಾರತೀಯ ಮಹಾಪುರುಷರ, ತತ್ವಜ್ಞಾನಿಗಳ ವಿಚಾರಧಾರೆಗಳು, ಭಗತ್‌ಸಿಂಗ್ ರಂತಹ ಕ್ರಾಂತಿಕಾರಿಗಳ ವಿಚಾರಧಾರೆಗಳ ಅಧ್ಯಯನಗೊಳಿಸುವ ಮೂಲಕ ರಾಷ್ಟ್ರೀಯ ಮನೋಭಾವ ಜಾಗೃತಿಗೊಳಿಸಬೇಕಿದೆ. ರಾಜೀವಗಾಂಧಿ ಸಂಸ್ಕೃತ ಪರಿಸರದ ನಿರ್ದೇಶಕ ಹಂಸಧರ ಝಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಮಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರೀಶಂಕರ್, ಪ್ರೊ ಚಂದ್ರಕಾಂತ ಪ್ರಾಸ್ತಾವಿಕ ಮಾತನಾಡಿದರು. ಪ್ರೊ ನವೀನ್ ಹೊಳ್ಳ ಸ್ವಾಗತಿಸಿದರು. ಡಾ,ನಾರಾಯಣ ವೈದ್ಯ ನಿರೂಪಿಸಿದರು. ಪ್ರೊ ಸೂರ್ಯ ನಾರಾಯಣ ಭಟ್ ವಂದಿಸಿದರು. ಯುವಮಹೋತ್ಸವದಲ್ಲಿ ಸುಮಾರು 40 ಕ್ಕೂ ಹೆಚ್ಚಿನ ಕ್ರೀಡಾ ಸ್ಪರ್ಧೆಗಳು, ಸಾಂಸ್ಕೃತಿಕ, ಶೈಕ್ಷಣಿಕ ಸ್ಪರ್ಧೆಗಳು ನಡೆಯಲಿದೆ. ಕಬಡಿ, ವಾಲಿಬಾಲ್, ಖೋಖೋ ಮೊದಲಾದ ಹೊರಾಂಗಣ ಕ್ರೀಡೆಗಳು, ಚೆಸ್ ಮೊದಲಾದ ಒಳಾಂಗಣ ಕ್ರೀಡೆಗಳು ನಡೆಯಲಿದೆ. ಗಾನ, ನೃತ್ಯ ಮೊದಲಾದ ಸಾಂಸ್ಕೃತಿಕ ಸ್ಪರ್ಧೆಗಳು, ವಾರ್ತಾ ಲೇಖನ,ಅನುವಾದ ಮೊದಲಾದ ಶೈಕ್ಷಣಿಕ ಸ್ಪರ್ದೆಗಳು ನಡೆಯಲಿದೆ. ವಿಜೇತರಿಗೆ ಚಿನ್ನ, ಬೆಳ್ಳಿ, ಕಂಚಿನ ಪದಕಗಳು, ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಸಂಸ್ಥೆಗೆ ವಿಜಯ ವೈಜಯಂತಿ ಟ್ರೋಫಿ ನೀಡಿ ಗೌರವಿಸಲಾಗುವುದು.
---ಬಾಕ್ಸ್---ವಿದ್ಯಾರ್ಥಿಗಳ ಶೋಭಾ ಯಾತ್ರೆ ಬೆಳಿಗ್ಗೆ ಮೆಣಸೆ ವೃತ್ತದಿಂದ ದಕ್ಷಿಣವಲಯ ಯುವ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಕಾರ್ಯಕ್ರಮಮದ ಪ್ರಾಂಗಣದವರೆಗೂ ಭವ್ಯ ಶೋಭಾಯಾತ್ರೆ ನಡೆಯಿತು. ಪಾರಂಪರಿಕ ಆಕರ್ಷಕ ಚಂಡೆ ವಾದನ ದೊಂದಿಗೆ ವಿವಿಧ ಸಾಂಪ್ರದಾಯಿಕ ವೇಷಭೂಷಣಗಳು ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಿತು. ದೇಶದ ವಿವಿಧೆಡೆಗಳಿಂದ ಯುವ ಮಹೋತ್ಸವಕ್ಕೆ ಬಂದಿದ್ದ ಸುಮಾರು 250 ಕ್ಕೂ ಅಧಿಕ ವಿದ್ಯಾರ್ಥಿಗಳು ಶೋಭಾಯಾತ್ರೆಗೆ ಸಾಥ್ ನೀಡಿದರು.24 ಶ್ರೀ ಚಿತ್ರ 1-ಶೃಂಗೇರಿ ಮೆಣಸೆ ರಾಜೀವಗಾಂಧಿ ಸಂಸ್ಕ್ರತ ಪರಿಸರದಲ್ಲಿ ನಡೆದ ದಕ್ಷಿಣ ವಲಯ ಯುವ ಮಹೋತ್ಸವ ಕಾರ್ಯಕ್ರಮವನ್ನು ವಾರಣಾಸಿ ಕರಪಾತ್ರಿ ಸ್ವಾಮಿ ಅಭಿಷೇಕ ಬ್ರಹ್ಮಚಾರಿ ಉದ್ಘಾಟಿಸಿ ಮಾತನಾಡಿದರು.