ಸಾಹಿತ್ಯ, ಚಿತ್ರಕಲೆಯಿಂದ ದೇಶ ಶ್ರೀಮಂತ: ಉಮಾಕಾಂತ ಭಟ್ಟ

KannadaprabhaNewsNetwork |  
Published : May 13, 2024, 12:04 AM IST
ಚಿತ್ರ ಕಲಾವಿದರಾದ ನೀರ್ನಳ್ಳಿ ಗಣಪತಿ ಹಾಗೂ ಕೌಶಿಕ ಹೆಗಡೆ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮಕ್ಕಳಲ್ಲಿ ಭಾವ ಶಿಕ್ಷಣ ಇಲ್ಲ. ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕು, ಹೇಗೆ ಸಮತೋಲನ ಮಾಡಬೇಕು, ಹೇಗೆ ವರ್ತಿಸಬೇಕು ಎಂಬ ಕೊರತೆಯಿದೆ. ಅದನ್ನು ಚಿತ್ರಕಲೆ ಸಮೃದ್ಧವಾಗಿ ತುಂಬುತ್ತದೆ. ಇದು ಸಮಾಜದ ಅಗತ್ಯತೆಯೂ ಹೌದು ಎಂದು ಉಮಾಕಾಂತ ಭಟ್ಟ ಕೆರೆಕೈ ತಿಳಿಸಿದರು.

ಶಿರಸಿ: ಚಿತ್ರಕಲೆ ಹಾಗೂ ಸಾಹಿತ್ಯ ದೇಶವನ್ನು ಶ್ರೀಮಂತಗೊಳಿಸುತ್ತವೆ. ದರ್ಶನ, ಪ್ರದರ್ಶನ ಎರಡೂ ತುಂಬಿ ಬಂದಾಗ ದೇಶ ಶ್ರೀಮಂತವಾಗುತ್ತದೆ ಎಂದು ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ ತಿಳಿಸಿದರು.

ಶನಿವಾರ ನಗರದ ಸುಪ್ರಿಯಾ ಇಂಟರ್‌ನ್ಯಾಷನಲ್ ಹೋಟೆಲ್ ಸಭಾಭವನದಲ್ಲಿ ಚಿತ್ರಕಲಾವಿದೆ ರೇಖಾ ಸತೀಶ ಭಟ್ಟ ನಾಡಗುಳಿ ಅವರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ, ಮಾತನಾಡಿದರು.

ಮಕ್ಕಳಲ್ಲಿ ಭಾವ ಶಿಕ್ಷಣ ಇಲ್ಲ. ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕು, ಹೇಗೆ ಸಮತೋಲನ ಮಾಡಬೇಕು, ಹೇಗೆ ವರ್ತಿಸಬೇಕು ಎಂಬ ಕೊರತೆಯಿದೆ. ಅದನ್ನು ಚಿತ್ರಕಲೆ ಸಮೃದ್ಧವಾಗಿ ತುಂಬುತ್ತದೆ. ಇದು ಸಮಾಜದ ಅಗತ್ಯತೆಯೂ ಹೌದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಸಾಧನೆಯ ಆಸೆ, ಆಕಾಂಕ್ಷೆ ಇದ್ದರೆ ಸಾಲದು, ಅದನ್ನು ಸಾಧಿಸುವ ಛಲ ಇರಬೇಕು. ಹಿರಿಯರ ಮಾರ್ಗದರ್ಶನ ಪಡೆದು ಈ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು. ಸಮಾಜದ ದಿಕ್ಕನ್ನು ಬದಲಾಯಿಸುವ ಶಕ್ತಿ ಚಿತ್ರಕಲೆಗಿದೆ. ಕಾರ್ಟೂನ್‌ಗಳ ರೇಖೆಗಳು ರಾಜಕಾರಣಿಗಳು ಸರಿಮಾರ್ಗದಲ್ಲಿ ನಡೆಯುವಂತೆ ಮಾಡುತ್ತವೆ ಎಂದರು.

ಯಲ್ಲಾಪುರ ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಅಗೋಚರವಾದ ದೇವರನ್ನು ಚಿತ್ರಕಲಾವಿದರು ಇಲ್ಲದಿದ್ದರೆ ನೋಡಲು ಸಾಧ್ಯವಿರಲಿಲ್ಲ. ದೇವರ ರೂಪವನ್ನು ಕಣ್ಣಿಗೆ ಕಟ್ಟಿಕೊಟ್ಟವರು, ದೇವರ ದರ್ಶನವನ್ನು ಜಗತ್ತಿಗೆ ತೋರಿಸಿಕೊಟ್ಟವರು ಚಿತ್ರಕಲಾವಿದರು. ಹುಟ್ಟು ಮತ್ತು ಸಾವಿನ ನಡುವಿನ ಬದುಕಿನಲ್ಲಿ ನಮ್ಮದು ಹೇಳುವಂತ ಸಾಧನೆ ಮಾಡಬೇಕು. ಅದಕ್ಕೆ ಪರಿಶ್ರಮ ಬೇಕು. ಮಕ್ಕಳಿಗೂ ಈ ಸಂಸ್ಕೃತಿ ಬೆಳೆಸಬೇಕು. ಚಿತ್ರಕಲಾವಿದೆ ರೇಖಾ ಭಟ್ಟ ಸಾಧನೆ ನಿಜಕ್ಕೂ ಮೆಚ್ಚುವಂತದ್ದು ಎಂದರು.

ಪ್ರಾಸ್ತಾವಿಕವಾಗಿ ರೇಖಾ ಭಟ್ಟ ಮಾತನಾಡಿ, ಚಿಕ್ಕಂದಿನಿಂದಲೇ ಪೇಂಟಿಂಗ್ ಆಸಕ್ತಿಯಿತ್ತು. ಅದಕ್ಕೆ ಪಾಲಕರ, ಕುಟುಂಬದ ಪ್ರೋತ್ಸಾಹ ನಿರಂತರವಾಗಿ ದೊರೆಯಿತು. ಇವೆಲ್ಲ ಕಾರಣದಿಂದ ಇದೆಲ್ಲ ಸಾಧ್ಯವಾಗಿದೆ. ತಾಳ್ಮೆ ಇದ್ದರೆ ಮಾತ್ರ ಚಿತ್ರಕಲೆಯಲ್ಲಿ ಬೆಳೆಯಬಹುದು ಎಂದರು.

ಈ ಸಂದರ್ಭದಲ್ಲಿ ಹೆಸರಾಂತ ಚಿತ್ರ ಕಲಾವಿದರಾದ ನೀರ್ನಳ್ಳಿ ಗಣಪತಿ ಹಾಗೂ ಕೌಶಿಕ ಹೆಗಡೆ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ ಹೆಗಡೆ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಪುಷ್ಪಾ ಭಟ್ಟ, ಆದರ್ಶ ವನಿತಾ ಸಮಾಜದ ಅಧ್ಯಕ್ಷೆ ಮಂಗಲಾ ಹಬ್ಬು ಮತ್ತಿತರರು ಪಾಲ್ಗೊಂಡರು. ಸತೀಶ ಭಟ್ಟ ನಾಡಗುಳಿ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು.ಗಮನ ಸೆಳೆದ ಚಿತ್ರಕಲಾ ಪ್ರದರ್ಶನ...

ಪರಿಸರ, ಯಕ್ಷಗಾನ, ಹಣ್ಣು, ಪ್ರಾಣಿ, ದೇವರು ಹೀಗೆ ಹಲವು ಬಗೆಯ ಆಕರ್ಷಕ ಪೇಂಟಿಂಗ್‌ಗಳು ಚಿತ್ರಕಲಾ ಪ್ರದರ್ಶನದಲ್ಲಿ ಗಮನ ಸೆಳೆದವು. ಒಂದಕ್ಕಿಂತ ಒಂದು ಚಿತ್ರಗಳು ನೋಡುಗರನ್ನು ಆಕರ್ಷಿಸಿದವಲ್ಲದೇ, ನೂರಾರು ಆಸಕ್ತರು ಕಣ್ತುಂಬಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ