ಕನ್ನಡಪ್ರಭ ವಾರ್ತೆ ಅಥಣಿ
ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಮಹತ್ವದ ಪಾತ್ರವನ್ನು ವಹಿಸುತ್ತದೆ. ಒಂದು ದೇಶದ ಪ್ರಗತಿ ಕೂಡ ಅಲ್ಲಿನ ಶಿಕ್ಷಣ ವ್ಯವಸ್ಥೆಯ ಮೇಲೆ ಅವಲಂಬಿಸಿರುತ್ತದೆ ಎಂದು ಡಾ.ಅಣ್ಣಾಸಾಬ ಪಾಂಗಿ ಹೇಳಿದರು.ಪಟ್ಟಣದ ಪ್ರತಿಷ್ಠಿತ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ 35ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಚಿತ್ರಕಲಾ ಸ್ಪರ್ಧೆ, ವಿಜ್ಞಾನ ವಸ್ತು ಪ್ರದರ್ಶನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಪ್ರತಿಯೊಬ್ಬರ ಜೀವನದಲ್ಲಿ ಗುರುಗಳ ಅಥವಾ ಶಿಕ್ಷಕರ ಮಾರ್ಗದರ್ಶನ ಬಹಳ ಅವಶ್ಯಕ. ಶಿಕ್ಷಕರು ಪಠ್ಯಪುಸ್ತಕದ ಜ್ಞಾನದ ಜೊತೆಗೆ ಮಕ್ಕಳಲ್ಲಿರುವ ವಿಶೇಷ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಶಿಕ್ಷಣ ಸಂಸ್ಥೆಗಳು ಎಂದರೆ ಕೇವಲ ಕಟ್ಟಡವಲ್ಲ. ಅಲ್ಲಿ ಕಲಿಸುವ ವಿಧಾನ, ಆಡಳಿತ ಮಂಡಳಿಯ ಇಚ್ಛಾಶಕ್ತಿಯಿಂದ ಮಕ್ಕಳು ಗುಣಾತ್ಮಕ ಶಿಕ್ಷಣವನ್ನು ಪಡೆದು ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ನಮ್ಮ ಶೈಕ್ಷಣಿಕ ಉನ್ನತಿಯಲ್ಲಿ ದೇಶದ ಪ್ರಗತಿ ಅಡಗಿರುತ್ತದೆ. ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯನ್ನು ನಾನು ಬಾಲ್ಯದಿಂದಲೂ ಕಂಡಿದ್ದೇನೆ. ಇಂದು ಹಂತ, ಹಂತವಾಗಿ ಬೆಳೆದು 35 ವರ್ಷಗಳಲ್ಲಿ ಸಾವಿರಾರು ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವುದು ಶ್ಲಾಘನೀಯ. ಇಲ್ಲಿನ ಶಿಕ್ಷಕರ ಪರಿಶ್ರಮದಿಂದ ಅನೇಕ ವಿದ್ಯಾರ್ಥಿಗಳು ಇಂದು ದೇಶದ ಉನ್ನತ ಹುದ್ದೆಗಳಲ್ಲಿ, ವಿದೇಶಗಳಲ್ಲಿಯೂ ಕಾರ್ಯನಿರ್ವಹಿಸುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಸಮನ್ವಯ ಅಧಿಕಾರಿ ಗೌಡಪ್ಪ ಖೋತ ಮಾತನಾಡಿ, ಒಂದು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಕೇವಲ ಶಿಕ್ಷಕರು ಅಥವಾ ಶಿಕ್ಷಣ ಸಂಸ್ಥೆ ಶ್ರಮಿಸಿದರೇ ಸಾಲದು. ಮಗುವಿನ ಪ್ರಗತಿಯಲ್ಲಿ ಪಾಲಕರ ಪಾತ್ರ ಮಹತ್ತರವಾಗಿರುತ್ತದೆ. ಅವರಿಗೆ ವಿದ್ಯಾಭ್ಯಾಸಕ್ಕಾಗಿ ಕೇವಲ ಒತ್ತಡ ಹಾಕಿದರೆ ಸಾಲದು, ಅವರಿಗೆ ಒಲವು ತೋರಿಸುವ ಮೂಲಕ ಅವರಲ್ಲಿನ ಪ್ರತಿಭೆ ಮತ್ತು ಕೌಶಲ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರು ಹಂತ ಹಂತವಾಗಿ ಸಾಧನೆ ಮಾಡಬಲ್ಲರು ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿ, ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಿಕೊಡುವುದು ಅವಶ್ಯಕ ಎಂದರು.
ಸಂಸ್ಥೆಯ ಅಧ್ಯಕ್ಷ ಸುನೀಲ ಶಿವಣಗಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಶ್ರಮಿಸುತ್ತಿರುವುದರಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶಸ್ತಿ ಮತ್ತು ಬಹುಮಾನಗಳನ್ನು ಪಡೆದುಕೊಳ್ಳುವ ಮೂಲಕ ಪ್ರಗತಿಯ ಹೆಜ್ಜೆಯನ್ನು ಇಡುತ್ತಿದೆ. ನಮ್ಮ ಶಾಲೆಯ ವಿದ್ಯಾರ್ಥಿಗಳ ಸಾಧನೆಯನ್ನು ಪ್ರೋತ್ಸಾಹಿಸಿ ಎಂದು ಬಹುಮಾನ ನೀಡಲು ನಮಗೆಲ್ಲ ಹೆಮ್ಮೆ ಅನಿಸುತ್ತದೆ ಎಂದರು.ಇದೇ ಸಂದರ್ಭದಲ್ಲಿ ಶಾಲೆಯ ಅಭಿಮಾನಿ ಪಾಲಕರ ದಂಪತಿಗಳಾದ ಗೌಡಪ್ಪ ಖೋತ, ಸವಿತಾ ಖೋತ ಮತ್ತು ಅಣ್ಣಾಸಾಬ ತೆಲಸಂಗ, ರಾಜಶ್ರೀ ತೆಲಸಂಗ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು. ನಂತರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮತ್ತು ಕ್ರೀಡಾಕೂಟಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ, ಪದಕಗಳನ್ನು ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ತಯಾರಿಸಿದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಚಿತ್ರಕಲಾ ಪ್ರದರ್ಶನ ವೀಕ್ಷಣೆ ಮಾಡಿದ ಅತಿಥಿಗಳು ಮಕ್ಕಳು ಪ್ರತಿಭೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.