ಸರ್ಕಾರಿ ಶಾಲೆಗಳಲ್ಲಿ ದೇಶದ ಭವಿಷ್ಯ ಅಡಗಿದೆ: ಚಲನಚಿತ್ರ ನಿರ್ದೇಶಕ ಅರುಣ್ ಕುಮಾರ್ ಕರಡಿಗಾಲ

KannadaprabhaNewsNetwork | Published : Jun 21, 2024 1:07 AM

ಸಾರಾಂಶ

ಇಲ್ಲಿನ ಶಿಕ್ಷಣ ಪ್ರಗತಿ ಕಾಣಬೇಕಿದೆ. ಪ್ರತಿ ಮಗುವಿಗೆ ಅಗತ್ಯ ಕಲಿಕಾ ಸಾಮಾಗ್ರಿಗಳು ದೊರೆತು ಉತ್ತಮ ಕಲಿಕೆಯತ್ತ ಸಾಗಬೇಕಿದೆ ಎಂದು ಚಲನಚಿತ್ರ ನಿರ್ದೇಶಕ ಹಾಗೂ ಬರಹಗಾರ ಅರುಣ್‌ಕುಮಾರ್ ಕರಡಿಗಾಲ ಅಭಿಪ್ರಾಯಪಟ್ಟರು. ಆಲೂರು ತಾಲೂಕಿನ ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಪ್ಪತ್ತೈದು ಮಕ್ಕಳಿಗೆ ತಲಾ ಹತ್ತು ನೋಟ್ಸ್ ಹಾಗೂ ಐದೈದು ಪೆನ್‌ಗಳನ್ನು ನೀಡಿ ಮಾತನಾಡಿದರು.

ತಾಳೂರು ಸರ್ಕಾರಿ ಶಾಲೆಯಲ್ಲಿ ಕಲಿಕಾ ಸಾಮಗ್ರಿ ವಿತರಣೆ

ಕನ್ನಡಪ್ರಭ ವಾರ್ತೆ ಆಲೂರು

ಭಾರತ ಹಳ್ಳಿಗಳ ದೇಶವಾದ್ದರಿಂದ ದೇಶದ ಬಹುತೇಕ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ದೇಶದ ಭವಿಷ್ಯವಿರುವುದೇ ಸರ್ಕಾರಿ ಶಾಲೆಗಳಲ್ಲಿ. ಆದ್ದರಿಂದ ಇಲ್ಲಿನ ಶಿಕ್ಷಣ ಪ್ರಗತಿ ಕಾಣಬೇಕಿದೆ. ಪ್ರತಿ ಮಗುವಿಗೆ ಅಗತ್ಯ ಕಲಿಕಾ ಸಾಮಾಗ್ರಿಗಳು ದೊರೆತು ಉತ್ತಮ ಕಲಿಕೆಯತ್ತ ಸಾಗಬೇಕಿದೆ ಎಂದು ಚಲನಚಿತ್ರ ನಿರ್ದೇಶಕ ಹಾಗೂ ಬರಹಗಾರ ಅರುಣ್‌ಕುಮಾರ್ ಕರಡಿಗಾಲ ಅಭಿಪ್ರಾಯಪಟ್ಟರು.

ಆಲೂರು ತಾಲೂಕಿನ ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಪ್ಪತ್ತೈದು ಮಕ್ಕಳಿಗೆ ತಲಾ ಹತ್ತು ನೋಟ್ಸ್ ಹಾಗೂ ಐದೈದು ಪೆನ್‌ಗಳನ್ನು ಉಚಿತವಾಗಿ ನೀಡಿ ಮಾತನಾಡಿ, ಸರ್ಕಾರ ಮಕ್ಕಳಿಗೆ ಅಗತ್ಯವಿರುವ ಸಮವಸ್ತ್ರ, ಶೂ, ಊಟ, ಪಠ್ಯಪುಸ್ತಕಗಳನ್ನು ಒದಗಿಸುತ್ತದೆ. ಆದರೆ ನಿತ್ಯ ಅಗತ್ಯವಿರುವ ನೋಟ್ ಪುಸ್ತಕಗಳು, ಪೆನ್ನುಗಳು ಇತರೆ ಲೇಖನ ಸಾಮಾಗ್ರಿಗಳನ್ನು ಶಿಕ್ಷಣ ಆಸಕ್ತರಿಂದ ಸಂಗ್ರಹಿಸಿ ಮಕ್ಕಳಿಗೆ ನೀಡುವುದರಿಂದ ಅವರ ಕಲಿಕೆಗೆ ಪ್ರೋತ್ಸಾಹ ದೊರೆಯುತ್ತದೆ. ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಣ ಆಸಕ್ತರು, ಸಾಮಾಜಿಕ ಸೇವಕರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ. ಇದು ಸಾಮಾಜಿಕ ಜವಬ್ಧಾರಿಯೂ ಸಹ ಆಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಕೊಟ್ರೇಶ್ ಎಸ್.ಉಪ್ಪಾರ್ ಮಾತನಾಡಿ, ‘ಅರುಣ್‌ಕುಮಾರ್ ಅವರು ನಮ್ಮ ಶಾಲೆಯ ಮೇಲಿನ ಅಭಿಮಾನದಿಂದ ಎಲ್ಲಾ ಮಕ್ಕಳಿಗೂ ಅಗತ್ಯವಿರುವ ನೋಟ್ ಬುಕ್‌ ಹಾಗೂ ಲೇಖನ ಸಾಮಾಗ್ರಿಗಳನ್ನು ಉಚಿತವಾಗಿ ನೀಡಿದ್ದಾರೆ. ಈ ಕೊಡುಗೆಯ ಹಿಂದೆ ಅವರ ದುಡಿಮೆಯ ಪರಿಶ್ರಮವಿದೆ. ನಮ್ಮ ಸರ್ಕಾರಿ ಶಾಲೆಯ ಮಕ್ಕಳಿಗೆ ಒಳಿತಾಗಲಿ ಎಂದು ಕೊಟ್ಟಿರುವ ಕೊಡುಗೆ ಮಕ್ಕಳು ಸಕಾರಾತ್ಮಕವಾಗಿ ಸದ್ಬಳಕೆ ಮಾಡಿಕೊಂಡು ಶಿಕ್ಷಣದಲ್ಲೂ ಗುಣಾತ್ಮಕತೆಯನ್ನು ಸಾಧಿಸಿದಾಗ ಮಾತ್ರ ಸಾರ್ಥಕತೆ ದೊರೆಯುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ರವಿತ ವಿ., ಅತಿಥಿ ಶಿಕ್ಷಕಿ ರೇಖಾ ಸೇರಿದಂತೆ ಮಕ್ಕಳು ಹಾಜರಿದ್ದರು.

Share this article