ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಕಳೆದ ಶನಿವಾರ ಇಸ್ರೇಲ್‌ನಲ್ಲಿ ರಾಕೆಟ್‌ಗಳ ಸದ್ದು ಎಲ್ಲೆಡೆ ಮೊಳಗುತ್ತಿತ್ತು. ಆಗೆಲ್ಲ ತುಂಬಾನೇ ಭಯ ಕಾಡುತ್ತಿತ್ತು. ನಾವು ಬದುಕಿ ಬರುವುದು ಕೂಡ ಡೌಟು ಎಂಬಂತಾಗಿತ್ತು. ಆದರೆ, ಅಲ್ಲಿನ ಇಸ್ರೆಲ್ ಸರ್ಕಾರ ಕಾಲಕಾಲಕ್ಕೆ ನಮಗೆ ನೋಟಿಫಿಕೇಶನ್ ಕಳುಹಿಸುವ ಮೂಲಕ ಎಚ್ಚರಿಕೆ ನೀಡುತ್ತಿತ್ತು. ಆಗ ಸ್ವಲ್ಪ ಧೈರ್ಯ ಬರುತ್ತಿತ್ತು... ಇದು ಇಸ್ರೇಲ್‌ನ ಟೆಲ್ ಅವೀವ್ ಪ್ರದೇಶದಲ್ಲಿ ಸಿಲುಕಿ ಕೇಂದ್ರ ಸರ್ಕಾರದ ಆಪರೇಷನ್ ಅಜೇಯ್ ನೆರವಿನೊಂದಿಗೆ ತಾಯ್ನಾಡು ತಲುಪಿದ ಹುಬ್ಬಳ್ಳಿಯ ಡಾ. ಅಖಿಲೇಶ ಕಾರಗದ್ದೆ ಹಾಗೂ ಪತ್ನಿ ಕೃತಿ ಹೇಳುವ ಮಾತಿದು. ಲೇಸರ್ ಟೆಕ್ನಾಲಜಿ ಪೋಸ್ಟ್ ಡಾಕ್ಟರಲ್ ಫೆಲೋ (ಪಿಡಿಎಫ್) ವ್ಯಾಸಂಗಕ್ಕೆ ಅಖಿಲೇಶ ಇಸ್ರೇಲ್‌ಗೆ ತೆರಳಿದ್ದರು. ಕಳೆದ ಮಾರ್ಚ್‌ನಲ್ಲಿ ವ್ಯಾಸಂಗ ಆರಂಭಿಸಿದ್ದರು. ಅವರ ಪತ್ನಿ ಕೃತಿ ಕಳೆದ ಜೂನ್‌ನಲ್ಲಷ್ಟೇ ಅಲ್ಲಿಗೆ ಹೋಗಿ, ಟೆಲ್ ಅವೀವ್‌ನಲ್ಲೇ ಈ ದಂಪತಿ ವಾಸವಾಗಿದ್ದರು. ಟೆಲ್ ಅವೀವ್ ಯುದ್ಧ ನಡೆಯುವ ಪ್ರದೇಶದಿಂದ ದೂರ ಇದೆ. ಆದರೆ, ಕಳೆದ ಶನಿವಾರ ಇವರಿದ್ದ ಸ್ಥಳಗಳಲ್ಲೂ ರಾಕೆಟ್‌ಗಳು ಹಾರಾಡಿದ್ದವಂತೆ. ಇದರಿಂದ ಇವರಲ್ಲಿ ಭಯ ಕಾಡಿತ್ತು. ಇಸ್ರೇಲ್ ಸರ್ಕಾರ ಕೂಡ ಸುರಕ್ಷಿತ ಸ್ಥಳದಲ್ಲಿರಿ, ಇಲ್ಲವೇ ಯಾವುದಾದರೂ ಬಂಕರ್ ಸೇರಿಕೊಳ್ಳಿ ಎಂದು ಮೊಬೈಲ್‌ಗೆ ಮೆಸೆಜ್ ಕೂಡ ಕಳುಹಿಸಿತ್ತಂತೆ. ಇದರಿಂದ ಈ ದಂಪತಿ ಆರಂಭದಲ್ಲಿ ಆತಂಕಕ್ಕೊಳಗಾಗಿದ್ದರು. ಆದರೆ, ಸೋಮವಾರದಿಂದ ಮತ್ತೆ ಯಾವುದೇ ಬಗೆಯ ಶಬ್ದ ಕೇಳಿಸಿಲ್ಲ. ಅಲ್ಲಿನ ಸರ್ಕಾರ ಮನೆಯಿಂದ ಹೊರಗೆ ಬರಬೇಡಿ. ಪರಿಸ್ಥಿತಿ ಸರಿಯಿಲ್ಲ. ಆದಷ್ಟು ಸುರಕ್ಷಿತ ಸ್ಥಳದಲ್ಲಿ ಇರಿ ಎಂದೆಲ್ಲ ಮೊಬೈಲ್ ಮೂಲಕ ಸಂದೇಶ ರವಾನಿಸುತ್ತಿತ್ತಂತೆ. ಇಸ್ರೇಲ್ ಸರ್ಕಾರ ತನ್ನ ಪ್ರಜೆಗಳನ್ನು, ಹೊರಗಿನಿಂದ ಅಲ್ಲಿಗೆ ಬಂದವರನ್ನು ತುಂಬಾನೆ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಸಂದರ್ಭಕ್ಕೆ ತಕ್ಕಂತೆ ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿ ಬಹಳಷ್ಟು ಧೈರ್ಯ ನೀಡುತ್ತಿತ್ತು ಎಂದು ತಿಳಿಸುತ್ತಾರೆ ಈ ದಂಪತಿ. ನಾವು ಇದ್ದ ಜಾಗ ಸುರಕ್ಷಿತವಾಗಿತ್ತು. ಆದರೆ, ಗಡಿಯಲ್ಲಿ ಮಾತ್ರ ಪರಿಸ್ಥಿತಿ ತುಂಬಾನೇ ಬಿಗಡಾಯಿಸಿದೆ. ಸೈರನ್ ಶಬ್ದ ಕೇಳಿದಾಗ ನಮಗೂ ಸಾಕಷ್ಟು ಭಯವಾಗುತ್ತಿತ್ತು. ನಾವು ಮರಳಿ ತಾಯ್ನಾಡಿಗೆ ಹೋಗುತ್ತೇವೋ ಇಲ್ಲವೋ ಎಂಬ ಭೀತಿ ಎದುರಾಗಿತ್ತು ಎಂದು ಅಲ್ಲಿನ ಪರಿಸ್ಥಿತಿಯನ್ನು ಕೃತಿ ಎಳೆ ಎಳೆಯಾಗಿ ಬಿಚ್ಚಿಟ್ಟರು. ಕೊನೆಗೆ ಅಲ್ಲಿನ ಸರ್ಕಾರದ ನೆರವು, ಭಾರತ ಸರ್ಕಾರದ ಆಪರೇಷನ್ ಅಜೇಯ್ ಕಾರ್ಯಾಚರಣೆಯಿಂದಾಗಿ ನಾವು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದೇವೆ. ಇದಕ್ಕಾಗಿ ಕೇಂದ್ರ ಸರ್ಕಾರ ಹಾಗೂ ಇಸ್ರೇಲ್ ಸರ್ಕಾರಕ್ಕೆ ಧನ್ಯವಾದಗಳು ಎಂದು ಕೃತಿ ಹಾಗೂ ಅಖಿಲೇಶ ಹೇಳಿದರು. ಭಾರತ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಆಪರೇಷನ್ ಅಜೇಯ್ ಕಾರ್ಯಾಚರಣೆ ನಡೆಸುತ್ತಿರುವುದು ಸಂತಸಕರ ಎಂದರು. ಇಸ್ರೇಲ್‌ನಿಂದ ದೆಹಲಿಗೆ ಆಗಮಿಸಿದ ಈ ದಂಪತಿ ಭಾನುವಾರ ಮಧ್ಯಾಹ್ನ ದೆಹಲಿಯಿಂದ ಹುಬ್ಬಳ್ಳಿಗೆ ವಿಮಾನ ಮೂಲಕ ಆಗಮಿಸಿದೆ. ಅವರನ್ನು ಜಿಲ್ಲಾಡಳಿತದ ಪರವಾಗಿ ಹುಬ್ಬಳ್ಳಿ ಶಹರ ತಹಸೀಲ್ದಾರ್ ಕಲ್ಲನಗೌಡ ಪಾಟೀಲ ಇತರೆ ಅಧಿಕಾರಿ ವರ್ಗ ಸ್ವಾಗತಿಸಿತು.