ಕನ್ನಡಪ್ರಭ ವಾರ್ತೆ ಹಾವೇರಿ
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಹನುಮ ಧ್ವಜ ಹಾರಿಸಿರುವುದನ್ನು ಪೊಲೀಸ್ ಅಧಿಕಾರಿಗಳ ಮೂಲಕ ಕಿತ್ತು ಹಾಕಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಅಂತ ಪದೇ ಪದೇ ಹೇಳುತ್ತಾರೆ. ಆದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಿದರು.
ರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಹಲವು ಕಡೆ ಅಡೆತಡೆ ಆಗಿವೆ. ಕೆಲವು ಜನರನ್ನು ಅರೆಸ್ಟ್ ಮಾಡಿದ್ದಾರೆ. ಎಲ್ಲ ಕಡೆ ಸಮಸ್ಯೆ ಆಗುತ್ತಿದೆ. ಕಾನೂನು ಬಾಹಿರ ಚಟುವಟಿಕೆ ಮಾಡುವವರಿಗೆ ರಕ್ಷಣೆ ಕೊಡುತ್ತಿದ್ದಾರೆ. ಸರ್ಕಾರದ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.ದಲಿತ ಮಹಿಳೆ ಮೇಲೆ, ಅಲ್ಪಸಂಖ್ಯಾತ ಮಹಿಳೆ ಮೇಲೆ ದೌರ್ಜನ್ಯ ಆದರೂ ಯಾವುದೇ ಕ್ರಮ ಆಗಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯಗಳು ಶೇ. 30ರಷ್ಟು ಹೆಚ್ಚಾಗಿವೆ. ಕಾನೂನು ಕೈಗೆತ್ತಿಕೊಂಡವರು ನಿರ್ಭಿಡೆಯಿಂದ ವ್ಯವಹಾರ ಮಾಡುತ್ತಿದ್ದಾರೆ. ಬಿಹಾರ್ ತರ ಜಂಗಲ್ ರಾಜ್ ನಮ್ಮ ರಾಜ್ಯದಲ್ಲಿಯೂ ಉಂಟಾಗಿದೆ. ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಇವರು ಎಸ್ಐಟಿ ರಚನೆ ಮಾಡಲಿಲ್ಲ. ಹೀಗಾಗಿ ನಾವೇ ಒಂದು ಪಿಐಎಲ್ ಹಾಕುತ್ತೇವೆ ಎಂದು ಹೇಳಿದರು.
ಹಿಂದುಳಿದ ವರ್ಗ, ಎಸ್ಸಿ, ಎಸ್ಟಿ ಜನಾಂಗಕ್ಕೆ ಏನು ಮಾಡಿದ್ದೀರಾ? ದಲಿತರಿಗೆ ಮೀಸಲಿಟ್ಟ ₹11,3000 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿದ್ದಾರೆ. ದಲಿತರ ಹಣ ಡೈವರ್ಟ್ ಯಾಕೆ ಮಾಡಿದ್ದೀರಿ? ದಲಿತರು ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ದಲಿತರಿಗೆ ನ್ಯಾಯ ಒದಗಿಸಿದ್ದೇ ನಾವು. ನಾನು ಆಡಳಿತ ನಡೆಸುವಾಗ ದಲಿತರಿಗೆ ಯೋಜನೆಗಳನ್ನು ತಂದರೆ ಚುನಾವಣೆ ಸ್ಟಂಟ್ ಅಂದರು. ಆದರೆ, ನಾವು ಎಸ್ಸಿ, ಎಸ್ಟಿ ಜನಾಂಗಗಳಿಗೆ ನ್ಯಾಯ ಒದಗಿಸಿದ್ದೇವೆ. ಶಿಕ್ಷಣ, ಉದ್ಯೋಗದಲ್ಲಿ ನಮ್ಮ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಈಗ ಅವರ ಸರ್ಕಾರ ಇದೆ, ಅವರು ಸಮಾವೇಶ ಮಾಡುತ್ತಿದ್ದಾರೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಪಡೆದ ಲಾಭ ಈಗ ಪಡೆಯಲು ಆಗುವುದಿಲ್ಲ ಎಂದು ಹೇಳಿದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಜನಾರ್ದನ ರೆಡ್ಡಿ ಮೊದಲು ಬಿಜೆಪಿಯಲ್ಲಿ ಇದ್ದವರು, ಸಹಜವಾಗಿಯೇ ಅವರು ಪ್ರಧಾನಿ ಮೋದಿ ಅವರ ಬಗ್ಗೆ ಮೆಚ್ಚುಗೆಯ ಮಾತು ಹೇಳಿರುತ್ತಾರೆ ಎಂದರು.