ಮುಂಡಗೋಡ:
ಯಾರೇ ತಪ್ಪು ಮಾಡಿದರೂ ಅದನ್ನು ಮುಚ್ಚಿ ಹಾಕಬಾರದು. ಹಾಗೇನಾದರೂ ಮಾಡಿದರೆ ನಾವೇ ತಪ್ಪು ಮಾಡಲು ಪ್ರೇರೇಪಣೆ ನೀಡಿದಂತಾಗುತ್ತದೆ. ಮುಂದೊಂದು ದಿನ ಅದು ಸಮಾಜಕ್ಕೆ ಮಾರಕವಾಗಬಹುದು ಎಂದು ಮುಂಡಗೋಡ ಆರಕ್ಷಕ ವೃತ್ತ ನಿರೀಕ್ಷಕ ಬರಮಪ್ಪ ಲೋಕಾಪುರ ಹೇಳಿದರು.ಬುಧವಾರ ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ ವತಿಯಿಂದ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಭಾಗಿದಾರರಿಗಾಗಿ ಬೇಟಿ ಬಚಾವೋ ಬೇಟಿ ಪಢಾವೋ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.ಇಂದು ಬೇರೆಯವರಿಗಾದ ಅನ್ಯಾಯ ನಾಳೆ ನಮಗೂ ಅಗಬಹುದೆಂಬ ಪರಿಕಲ್ಪನೆ ಇಟ್ಟುಕೊಂಡು ತಪ್ಪನ್ನು ಖಂಡಿಸಿ ನ್ಯಾಯ ಕೊಡಿಸುವ ಪ್ರಯತ್ನ ಮಾಡಬೇಕು. ತಪ್ಪಿತಸ್ಥರು ಎಷ್ಟೇ ಬುದ್ಧಿವಂತರಿದ್ದರೂ ಪತ್ತೆ ಹಚ್ಚುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತದೆ. ಆ ಕ್ಷಣಕ್ಕೆ ತಪ್ಪಿಸಿಕೊಳ್ಳಬಹುದು, ಆದರೆ ಶಿಕ್ಷೆಯಿಂದ ಯಾರು ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.ಇಷ್ಟೊಂದು ಜಾಗೃತಿ ಮೂಡಿಸಿದರೂ ಕೂಡ ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿರುವುದು ವಿಷಾದನಿಯ. ಗಂಡಿನಿಂದ ಮಾತ್ರವಲ್ಲ ಹೆಣ್ಣಿನಿಂದಲೂ ತಪ್ಪು ನಡೆಯಬಹುದು. ಆದರೆ ಪೋಕ್ಸೋ ಪ್ರಕರಣದಲ್ಲಿ ಹೆಣ್ಣಿನೊಂದಿಗೆ ಗಂಡು ಮಕ್ಕಳ ಜೀವನ ಕೂಡ ಹಾಳಾಗುತ್ತದೆ. ತಪ್ಪು ಯಾರೇ ಮಾಡಿದರೂ ಕೂಡ ಶಿಕ್ಷೆ ಮಾತ್ರ ಹುಡುಗರಿಗೆ ಆಗುತ್ತದೆ. ಇದನ್ನು ಇಂದಿನ ಪೀಳಿಗೆ ಅರಿತುಕೊಳ್ಳಬೇಕಿದೆ ಎಂದ ಅವರು, ಮೊಬೈಲ್ ಬಳಕೆ ಎಷ್ಟು ಪೂರಕವೊ ಅಷ್ಟೇ ಮಾರಕವಾಗುತ್ತಿದ ಎಂದು ತಿಳಿ ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ್ ಶಂಕರ ಗೌಡಿ, ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತು ಅದನ್ನು ಸಮರ್ಪಕವಾಗಿ ನಿಭಾಯಿಸಿದರೆ ಸಾಧ್ಯವಾದಷ್ಟು ಅಪರಾಧ ತಡೆಯಬಹುದು ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರೂಪಾ ಅಂಗಡಿ, ವಕೀಲ ರಾಜಶೇಖರ ಹುಬ್ಬಳ್ಳಿ ಉಪನ್ಯಾಸ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಲೋಚಕ ಸುನೀಲ ಗಾಂವಕರ, ವಿರಾತ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರಶಾಂತ ಸಾವಣಗಿ, ಮಾನಸಿಂಗ್ ರಾಥೋಡ, ಮಂಜುಳಾ ಮರಡಿ ಇದ್ದರು.