ಈಗ ಕೊರೋನಾ ಬಂದರೆ 7 ದಿನ ಕ್ವಾರಂಟೈನ್‌ ಕಡ್ಡಾಯ!

KannadaprabhaNewsNetwork | Published : Dec 27, 2023 1:33 AM

ಸಾರಾಂಶ

ರಾಜ್ಯದಲ್ಲಿ ಕೋವಿಡ್‌ ಹೊಸ ತಳಿ ವೇಗವಾಗಿ ಹಬ್ಬುತ್ತಿದ್ದು, ಜನರಿಗೆ ಆತಂಕ ದ್ವಿಗುಣವಾಗಿದೆ, ಹೀಗಾಗಿ ಕೋವಿಡ್‌ ಕಾಣಿಸಿಕೊಂಡರೆ 7 ದಿನ ಕಡ್ಡಾಯ ಕ್ವಾರಂಟೈನ್‌ ಇರುವಂತೆ ಹಾಗೂ ಮಕ್ಕಳಿಗೆ ಜ್ವರ, ಶೀತ ಕಾಣಿಸಿಕೊಂಡರೆ ಶಾಲೆಗಳಿಗೆ ಕಳುಹಿಸದಂತೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಕೊರೋನಾ ಸೋಂಕು ದೃಢಪಟ್ಟವರಿಗೆ ಏಳು ದಿನಗಳ ಕಡ್ಡಾಯ ಹೋಂ ಐಸೊಲೇಷನ್‌ ವಿಧಿಸಲು ಹಾಗೂ ಸೋಂಕು ದೃಢಪಟ್ಟ ಸರ್ಕಾರಿ, ಸರ್ಕಾರೇತರ ಉದ್ಯೋಗಿಗಳಿಗೆ ಏಳು ದಿನಗಳ ರಜೆ, ತೀವ್ರ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದರೆ ಚಿಕಿತ್ಸೆ ಪೂರ್ಣಗೊಳ್ಳುವವರೆಗೂ ವಿಶೇಷ ರಜೆ ನೀಡುವಂತೆ ಆದೇಶ ಹೊರಡಿಸಲು ಕೊರೋನಾಗೆ ಸಂಬಂಧಿಸಿದ ಸಚಿವ ಸಂಪುಟ ಉಪ ಸಮಿತಿಯು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಮಾರ್ಗಸೂಚಿ ಪ್ರಕಟವಾಗಲಿದ್ದು, ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ಕೊರೋನಾ ಕುರಿತ ಸಚಿವ ಸಂಪುಟ ಉಪ ಸಮಿತಿಯು ಮಂಗಳವಾರ ಮೊದಲ ಸಭೆ ನಡೆಸಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌, ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ ಹಾಗೂ ಡಾ.ಎಂ.ಸಿ. ಸುಧಾಕರ್‌, ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆ ಬಳಿಕ ನಿರ್ಣಯಗಳನ್ನು ಪ್ರಕಟಿಸಿದ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಕೊರೋನಾ ಸೋಂಕು ದೃಢಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ಏಳು ದಿನಗಳ ಕಾಲ ಹೋಂ ಐಸೊಲೇಷನ್‌ನಲ್ಲಿ (ಮನೆಯಲ್ಲೇ ಪ್ರತ್ಯೇಕವಾಗಿರಬೇಕು) ಇರಬೇಕು. ಈ ಬಗ್ಗೆ ಸ್ಥಳೀಯ ವೈದ್ಯರು ನಿಗಾ ಇಡಲಿದ್ದಾರೆ. ಉಳಿದಂತೆ ಸೋಂಕು ಲಕ್ಷಣ ಉಲ್ಬಣಗೊಂಡು ಚಿಕಿತ್ಸೆ ಅಗತ್ಯವಿರುವವರು ಮಾತ್ರ ಕೊರೋನಾ ಚಿಕಿತ್ಸೆಗೆ ಮೀಸಲಾದ ಆಸ್ಪತ್ರೆಗಳಿಗೆ ದಾಖಲಾಗಬೇಕು ಎಂದು ಸ್ಪಷ್ಟಪಡಿಸಿದರು.

ಸೋಂಕಿತರಿಗೆ ರಜೆಗೆ ಕ್ರಮ:

ಸೋಂಕು ದೃಢಪಟ್ಟ ಸರ್ಕಾರಿ ಹಾಗೂ ಸರ್ಕಾರೇತರ ಉದ್ಯೋಗಿಗಳಿಗೆ ಏಳು ದಿನಗಳ ರಜೆ ನೀಡುವಂತೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಆದೇಶ ಹೊರಡಿಸಲಾಗುವುದು. ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುವವರಿಗೆ ಅಗತ್ಯವಿರುವ ದಿನಗಳವರೆಗೆ ವಿಶೇಷ ರಜೆ ಮಂಜೂರು ಮಾಡಬೇಕು. ಈ ಬಗ್ಗೆ ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದರು.

ಸೋಂಕು ಲಕ್ಷಣವಿದ್ದರೆ ಶಾಲೆಗೆ ಕಳಿಸುವಂತಿಲ್ಲ:

ಮಕ್ಕಳಲ್ಲಿ ವೇಗವಾಗಿ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಜ್ವರ, ನೆಗಡಿ ಸೇರಿದಂತೆ ಯಾವುದೇ ಅನಾರೋಗ್ಯ ಸಮಸ್ಯೆ ಕಾಣಿಸಿದರೂ ಅಂತಹ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಬಾರದು. ಮನೆಯಲ್ಲೇ ಸೂಕ್ತ ಆರೈಕೆಗೆ ಮಾರ್ಗಸೂಚಿ ಹೊರಡಿಸಲು ನಿರ್ಧಾರ ಮಾಡಲಾಗಿದೆ. ಅಗತ್ಯ ಎನಿಸಿದರೆ ಪೋಷಕರು ಕೊರೋನಾ ಪರೀಕ್ಷೆ ಮಾಡಿಸಬಹುದು. ಆದರೆ ಕಡ್ಡಾಯವಲ್ಲ ಎಂದು ಹೇಳಿದರು.

ಥರ್ಮಲ್ ಸ್ಕ್ರೀನಿಂಗ್‌ ಇಲ್ಲ:

ಇನ್ನು ಜೆಎನ್‌.1 ಉಪತಳಿಯ 34 ಸೋಂಕು ದೃಢಪಟ್ಟಿದ್ದರೂ ಆತಂಕಪಡುವ ಅಗತ್ಯವಿಲ್ಲ. ಗಡಿ ಭಾಗದಲ್ಲಾಗಲಿ, ವಿಮಾನ ನಿಲ್ದಾಣಗಳಲ್ಲಿ ಆಗಲಿ ಥರ್ಮಲ್ ಸ್ಕ್ರೀನಿಂಗ್‌ ಮಾಡಲು ನಾವು ನಿರ್ಧರಿಸಿಲ್ಲ. ಸಾರ್ವಜನಿಕರಿಗೆ ಸೋಂಕು ಲಕ್ಷಣ ಕಂಡು ಬಂದರೆ ಪರೀಕ್ಷೆ ಮಾಡಿಸಿಕೊಳ್ಳಬಹುದು. ನೆರೆ ರಾಜ್ಯ, ಬೇರೆ ದೇಶಗಳಲ್ಲೂ ಥರ್ಮಲ್‌ ಸ್ಕ್ರೀನಿಂಗ್‌ ಮಾಡುತಿಲ್ಲ. ಹೀಗಾಗಿ ನಾವೂ ಮಾಡುವುದಿಲ್ಲ ಎಂದು ದಿನೇಶ್ ಗುಂಡೂರಾವ್‌ ಸ್ಪಷ್ಟಪಡಿಸಿದರು.

ಬಿಜೆಪಿಯ ಬಸನಗೌಡ ಯತ್ನಾಳ್‌ ಅವರ ಕೊರೋನಾದಲ್ಲಿ 40 ಸಾವಿರ ಕೋಟಿ ರು. ಹಗರಣ ಆಗಿತ್ತು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ತನಿಖೆ ನಡೆಯುತ್ತಿದೆ. ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ. ಯತ್ನಾಳ್ ಅವರಿಗೆ ವಿಶೇಷ ಮಾಹಿತಿ ಇರುತ್ತದೆ. ಹೀಗಾಗಿ ಅವರು ಹೇಳಿರುತ್ತಾರೆ ಎಂದಷ್ಟೇ ಹೇಳಿದರು.ಸಚಿವ ಸಂಪುಟ ಉಪ ಸಮಿತಿ ಸದಸ್ಯರ ಜತೆಗೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್‌, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ರವಿ ಸೇರಿ ಹಲವರು ಹಾಜರಿದ್ದರು.

ಹೆಚ್ಚುವರಿ ನಿರ್ಬಂಧ ಇಲ್ಲ

ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ, ದೀರ್ಘ ಕಾಲೀನ ಅನಾರೋಗ್ಯ ಉಳ್ಳವರಿಗೆ ಮಾಸ್ಕ್‌ ಕಡ್ಡಾಯ ಮಾಡಲಾಗಿದೆ. ಉಳಿದಂತೆ ಜನದಟ್ಟಣೆ ಇರುವ ಕಡೆ ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ. ಇದನ್ನು ಹೊರತುಪಡಿಸಿ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್‌ ತಿಳಿಸಿದರು.

ಹೊಸ ವರ್ಷಾಚರಣೆಗೂ ನಿರ್ಬಂಧವಿಲ್ಲ

ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧಗಳು ಇಲ್ಲ. ಆದರೆ ಜನದಟ್ಟಣೆ ಇರುವುದರಿಂದ ಕೊರೋನಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಅದನ್ನು ಹೊರತುಪಡಿಸಿ ಜನರ ಓಡಾಟಕ್ಕೆ ಸದ್ಯ ಯಾವುದೇ ನಿರ್ಬಂಧ ಹೇರುವುದಿಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ

ಕೊರೋನಾ ಹೆಚ್ಚಳ ಆಶ್ಚರ್ಯಪಡುವ ವಿಚಾರವೂ ಅಲ್ಲ, ಆತಂಕಪಡುವ ವಿಚಾರವೂ ಅಲ್ಲ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ನಾವು ಸಲಹೆ-ಸೂಚನೆ ನೀಡುತ್ತೇವೆ. ಅದನ್ನು ಪಾಲಿಸುವುದು, ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಸಾರ್ವಜನಿಕರ ಜವಾಬ್ದಾರಿ.

ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ

Share this article