ಹೊನ್ನಾವರ ತಾಲೂಕು ಸಾಲ್ಕೋಡದಲ್ಲಿ ಇತ್ತೀಚೆಗೆ ನಡೆದಿದ್ದ ವಿಕೃತ ಗೋಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಗೋ ಹಂತಕರು ಗೋವನ್ನು ಕೊಲ್ಲುವ ಮುನ್ನ ಅದರ ಫೋಟೋ ತೆಗೆಯುತ್ತಿದ್ದರು, ಅದನ್ನು ಮಾಂಸ ಮಾರಾಟ ಮಾಡಲು ಸೃಷ್ಟಿಸಿದ್ದ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಶೇರ್ ಮಾಡುತ್ತಿದ್ದರು.
ಕಾರವಾರ : ಹೊನ್ನಾವರ ತಾಲೂಕು ಸಾಲ್ಕೋಡದಲ್ಲಿ ಇತ್ತೀಚೆಗೆ ನಡೆದಿದ್ದ ವಿಕೃತ ಗೋಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಗೋ ಹಂತಕರು ಗೋವನ್ನು ಕೊಲ್ಲುವ ಮುನ್ನ ಅದರ ಫೋಟೋ ತೆಗೆಯುತ್ತಿದ್ದರು, ಅದನ್ನು ಮಾಂಸ ಮಾರಾಟ ಮಾಡಲು ಸೃಷ್ಟಿಸಿದ್ದ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಶೇರ್ ಮಾಡುತ್ತಿದ್ದರು. ಹಸುವನ್ನು ಕಡಿದ ಬಳಿಕ ಮಾಂಸದ ಫೋಟೋವನ್ನೂ ಗ್ರೂಪ್‌ನಲ್ಲಿ ಬಿತ್ತರಿಸಿ ಬೇಡಿಕೆ ಸೃಷ್ಟಿಸುತ್ತಿದ್ದರು. ಬೇಡಿಕೆ ಬಂದಾಗ ಮಾಂಸವನ್ನು ವಿಳಾಸಕ್ಕೆ ಕಳುಹಿಸಿ, ಆನ್‌ಲೈನ್ ಮೂಲಕ ಹಣ ಪಡೆಯುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ಬಂಧಿತನಾಗಿರುವ ಮೊದಲನೇ ಆರೋಪಿ ತೌಫಿಕ್‌ನೇ ಈ ವಿಷಯವನ್ನು ಬಾಯಿಬಿಟ್ಟಿದ್ದಾನೆ.
ಹೊನ್ನಾವರ ಗೋಹತ್ಯೆ ಪ್ರಕರಣ ಸಂಬಂಧ ತೌಫೀಕ್ ಹೇಳಿಕೆ ಮೇರೆಗೆ ಶನಿವಾರ ಫೈಜಾನ್ ಎಂಬಾತನನ್ನು ಬಂಧಿಸಲಾಗಿತ್ತು. ಪ್ರಕರಣ ಪ್ರಮುಖ ಆರೋಪಿಗಳಾದ ವಾಸಿಮ್, ಮುಜಾಮಿಲ್ (ತಲೆಮರೆಸಿಕೊಂಡಿದ್ದಾರೆ), ಫೈಜಾನ್ ಹಾಗೂ ತೌಫೀಕ್ ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದು, ಗೋವುಗಳ ಫೋಟೋ ಹಾಕುತ್ತಿದ್ದರು. ನಂತರ ಆ ದನದ ಮಾಂಸದ ಫೋಟೋ ಹಾಕುತ್ತಿದ್ದರು. ಬೇಡಿಕೆ ಬಂದಾಗ ಮಾಂಸ ಕಳುಹಿಸಿಕೊಟ್ಟು ಗೂಗಲ್ ಪೇ ಮೂಲಕ ಹಣ ಪಡೆಯುತ್ತಿದ್ದರು.
ಆರೋಪಿಗಳ ಮೊಬೈಲ್‌ನಲ್ಲಿ ಹಲವು ಹಸುಗಳು, ಮಾಂಸದ ಫೋಟೋ ಪತ್ತೆಯಾಗಿದೆ. ಗೂಗಲ್ ಪೇ ಮೂಲಕ ಹಣ ಪಡೆದಿದ್ದೂ ಬೆಳಕಿಗೆ ಬಂದಿದೆ.
ಹೊನ್ನಾವರದಲ್ಲಿ ಜ.18ರಂದು ವಿಕೃತವಾಗಿ ಹಸು ಕೊಂದ ಪ್ರಕರಣದ ಆರೋಪಿಗಳು ಹಾಗೂ ಸ್ಥಳೀಯ ಇಬ್ಬರು ಹಿಂದುಗಳ ಸಹಕಾರದಿಂದ ಮಾಂಸ ಕಡಿದು ಪ್ಯಾಕ್ ಮಾಡಿದ್ದಾರೆನ್ನಲಾಗಿದೆ. ಫೈಜಾನ್ ಸ್ಕೂಟಿಯ ಮೂಲಕ ಮದುವೆಗೆ ಈ ಮಾಂಸ ಸಾಗಾಟ ಮಾಡಿದ್ದು. ಗೂಗಲ್ ಪೇ ಮೂಲಕ ಹಣ ಪಾವತಿಸಿಕೊಂಡಿದ್ದಾರೆ.
ಈಗ ಪೊಲೀಸರು ಪ್ರಮುಖ ಆರೋಪಿಗಳಾದ ವಾಸಿಮ್, ಮುಜಾಮಿಲ್ ಹಾಗೂ ಸಹಕರಿಸಿದ ಇಬ್ಬರು ಹಿಂದುಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ತನಿಖೆ ಹೇಗಿತ್ತು?:
ಹೊನ್ನಾವರ ಸಮೀಪದ ಸಾಲ್ಕೋಡ ಕೊಂಡೊಕುಳಿಯಲ್ಲಿ ಗಬ್ಬದ ಹಸು ಹಾಗೂ ಕರು ಹತ್ಯೆ ಮಾಡಿ ಮಾಂಸ ಒಯ್ದ ದೂರು ಬರುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹೋಗಿ ಪರಿಶೀಲಿಸಿದಾಗ ಕಾಡುಪ್ರಾಣಿ ಬೇಟೆಯಾಡಿರಬೇಕೆಂದು ಭಾವಿಸಿದ್ದರು. ನಂತರ ಪಶು ವೈದ್ಯರು ಪರಿಶೀಲಿಸಿದಾಗ ಹಸು ಕಡಿದಿರುವುದು ತಿಳಿದು ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್, ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಬರುತ್ತಿದ್ದಂತೆಯೇ ಹೆಚ್ಚುವರಿ ಪೊಲೀಸ್ ವರಿಷ್ಠ ಜಗದೀಶ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠರು ತನಿಖೆಗಾಗಿ ಆರು ತಂಡ ರಚಿಸಿದ್ದರು. ಸ್ಥಳಕ್ಕೆ ಐಜಿಪಿ ಅಮಿತ್ ಸಿಂಗ್ ಕೂಡ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ಮಾಡಿದರು.
ಸಾರ್ವಜನಿಕರಿಂದ ಬಂದ ಮಾಹಿತಿ ಹಿನ್ನೆಲೆಯಲ್ಲಿ ವಾಸಿಮ್ ಭಟ್ಕಳ, ಮುಜಾಮಿಲ್, ತೌಫೀಕ್, ಫೈಜಾನ್ ಹಾಗೂ ಇಬ್ಬರು ಹಿಂದುಗಳು ಈ ಪ್ರಕರಣದಲ್ಲಿ ಇರುವುದು ಸ್ಪಷ್ಟವಾಯಿತು.
ತೌಫೀಕನನ್ನು ಭದ್ರಾವತಿಯಲ್ಲಿ, ಫೈಜಾನ್‌ನನ್ನು ವಿಚಾರಣೆಗೆ ಕರೆದು ಬಂಧಿಸಲಾಯಿತು. ಫೈಜಾನ್‌ನನ್ನು ಮಹಜರಿಗಾಗಿ ಕರೆದೊಯ್ಯುತ್ತಿದ್ದಾಗ ಪೊಲೀಸರ ಮೇಲೆ ದಾಳಿ ಮಾಡಿದ್ದ. ಆಗ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ತನಿಖೆಯ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರಗಳನ್ನು ನೀಡಿದ್ದಾರೆ. ಆರೋಪಿಯಿಂದ ದಾಳಿಗೊಳಗಾದ ಪೊಲೀಸರು ಹಾಗೂ ಆರೋಪಿ ಫೈಜಾನ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ.
ಸುಳಿವು ನೀಡಿದವರಿಗೆ ₹50 ಸಾವಿರ ಬಹುಮಾನ
ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಸುಳಿವು ನೀಡಿದವರಿಗೆ ₹50 ಸಾವಿರ ಬಹುಮಾನವನ್ನು ಜಿಲ್ಲಾ ಪೊಲೀಸ್ ವರಿಷ್ಠರು ಘೋಷಣೆ ಮಾಡಿದ್ದು, ಸುಳಿವು ನೀಡುವವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು ಎಂದು ಪೊಲೀಸ್ ವರಿಷ್ಠ ಎಂ. ನಾರಾಯಣ ತಿಳಿಸಿದ್ದಾರೆ. ಪ್ರಕರಣ ಪ್ರಮುಖ ಆರೋಪಿಗಳಾದ ವಾಸಿಮ್, ಮುಜಾಮಿಲ್ ತಲೆಮರೆಸಿಕೊಂಡಿದ್ದಾರೆ.