ಹೊಳೆ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಸಿ.ಪಿ.ಯೋಗೇಶ್ವರ್ ಪತ್ನಿ ಶೀಲಾ

KannadaprabhaNewsNetwork | Published : Nov 25, 2024 1:03 AM

ಸಾರಾಂಶ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪತ್ನಿ ಶೀಲಾ ಶನಿವಾರ ರಾತ್ರಿ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯ ಸ್ವಾಮಿ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪತ್ನಿ ಶೀಲಾ ಶನಿವಾರ ರಾತ್ರಿ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯ ಸ್ವಾಮಿ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಪಟ್ಟಣದ ಹೊರವಲಯದಲ್ಲಿರು ಶ್ರೀಆಂಜನೇಯಸ್ವಾಮಿ ಸನ್ನಿಧಿಗೆ ರಾತ್ರಿ 8 ಗಂಟೆ ಸುಮಾರಿಗೆ ಮದ್ದೂರು ಶಾಸಕ ಕೆ. ಎಂ. ಉದಯ್ ಪತ್ನಿ ವಿನುತಾ ಅವರೊಂದಿಗೆ ಆಗಮಿಸಿದ ಶೀಲಾ ಯೋಗೇಶ್ವರ್ ದೇವರ ಅಭಿಷೇಕಕ್ಕಾಗಿ ಜೇನುತುಪ್ಪ ಅರ್ಪಿಸಿದರು.

ನಂತರ ಶ್ರೀಆಂಜನೇಯ ಸ್ವಾಮಿ ಮೂಲ ವಿಗ್ರಹದ ಮುಂದೆ ಕೆಲ ಹೊತ್ತು ನಿಂತು ಪ್ರಾರ್ಥನೆ ಮಾಡಿ ಮಹಾ ಮಂಗಳಾರತಿಯೊಂದಿಗೆ ಪ್ರಸಾದ ಸ್ವೀಕರಿಸಿದರು. ಚುನಾವಣೆಯಲ್ಲಿ ಪತಿ ಯೋಗೇಶ್ವರ್ ನಾಮಪತ್ರ ಸಲ್ಲಿಸಿದ ಬಳಿಕ ಕಳೆದ ನ.10ರಂದು ಶ್ರೀಹೊಳೆ ಆಂಜನೇಯ ಸ್ವಾಮಿ ದೇಗುಲಕ್ಕೆ ಆಗಮಿಸಿದ್ದ ಶೀಲಾ ಯೋಗೇಶ್ವರ್ ದೇಗುಲದ ಆವರಣದಲ್ಲಿ ವಿಶೇಷ ವಾಯುಸ್ತುತ್ ಪುನಶ್ಚರನ ಹೋಮ ಹವನಾದಿ ನೆರವೇರಿಸಿ ಪತಿ ಗೆಲುವಿಗೆ ಪ್ರಾರ್ಥನೆ ಸಲ್ಲಿಸಿದ್ದರು.

ಗೆಲುವಿನ ನಂತರ ಶನಿವಾರ ರಾತ್ರಿ ಮತ್ತೆ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮುಂದಿನ ವಾರದಲ್ಲಿ ಪತಿ ಯೋಗೇಶ್ವರೊಂದಿಗೆ ಆಗಮಿಸಿ ಅಭಿಷೇಕದೊಂದಿಗೆ ಹರಕೆ ತೀರಿಸಿ ಪೂಜೆ ಸಲ್ಲಿಸುವುದಾಗಿ ಹರಕೆ ಹೊತ್ತರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೀಲಾ ಯೋಗೇಶ್ವರ್, ಚನ್ನಪಟ್ಟಣ ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ಪತಿ ಯೋಗೇಶ್ವರ್ ಅವರನ್ನು ತಮ್ಮ ಮನೆ ಮಗನೆಂದು ಆಶೀರ್ವಾದ ಮಾಡಿ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಿ ಜನರ ಋಣ ತೀರಿಸಲಿದ್ದಾರೆ ಎಂದರು.

ಉಪಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕ ಉದಯ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು, ಹಲವು ಮುಖಂಡರು ಪತಿ ಯೋಗೇಶ್ವರ್‌ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಾರೆ. ಈ ಎಲ್ಲರಿಗೂ ಭಗವಂತನ ಸನ್ನಿಧಿಯಲ್ಲಿ ಕೃತಜ್ಞತೆ ಸಲ್ಲಿಸುವುದಾಗಿ ಶೀಲಾ ತಿಳಿಸಿದರು.

ಈ ವೇಳೆ ದೇಗುಲದ ಪ್ರಧಾನ ಅರ್ಚಕ ಪ್ರದೀಪಚಾರ್ಯ, ಸಹ ಅರ್ಚಕ ಸುರೇಶ ಆಚಾರ್ಯ ಇದ್ದರು.

Share this article