ಯೋಗೇಶ್ವರ್ ನಾಡಿದ್ದು ದಿಲ್ಲಿಗೆ : ಟಿಕೆಟ್‌ಗಾಗಿ ಅಂತಿಮ ಪ್ರಯತ್ನ - ಭೇಟಿ ಬಳಿಕ ಮುಂದಿನ ನಡೆ?

KannadaprabhaNewsNetwork |  
Published : Aug 22, 2024, 12:47 AM ISTUpdated : Aug 26, 2024, 11:18 AM IST
CP Yogeshwar

ಸಾರಾಂಶ

 ಚನ್ನಪಟ್ಟಣ ಉಪಚುನಾವಣೆಯ ಮೈತ್ರಿ ಟಿಕೆಟ್‌ಗಾಗಿ ಹಗ್ಗ ಜಗ್ಗಾಟ ಮುಂದುವರಿದಿದ್ದು, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಟಿಕೆಟ್‌ಗಾಗಿ ದೆಹಲಿ ದಂಡಯಾತ್ರೆ ನಡೆಸಲಿದ್ದಾರೆ

 ಚನ್ನಪಟ್ಟಣ :  ಚನ್ನಪಟ್ಟಣ ಉಪಚುನಾವಣೆಯ ಮೈತ್ರಿ ಟಿಕೆಟ್‌ಗಾಗಿ ಹಗ್ಗ ಜಗ್ಗಾಟ ಮುಂದುವರಿದಿದ್ದು, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಟಿಕೆಟ್‌ಗಾಗಿ ದೆಹಲಿ ದಂಡಯಾತ್ರೆ ನಡೆಸಲು ಸಿದ್ಧರಾಗಿದ್ದಾರೆ.  ಇತ್ತ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಲ್ಲಿ ಪ್ರವಾಸ  ನಡೆಸುವ ಮೂಲಕ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಅಣಿಯಾಗಿದ್ದಾರೆ. ಚನ್ನಪಟ್ಟಣದ ಉಪಚುನಾವಣೆಯಲ್ಲಿ ಮೈತ್ರಿ ಟಿಕೆಟ್ ಪಡೆಯಲೇಬೇಕು ಎಂಬ ನಿಟ್ಟಿನಲ್ಲಿ ಯೋಗೇಶ್ವರ್ ಈಗಾಗಲೇ ಹಲವು ಬಾರಿ ದೆಹಲಿಗೆ ಭೇಟಿ ನೀಡಿ ಲಾಭಿ ನಡೆಸಿದ್ದು,  ಬುಧವಾರ ಮತ್ತೆ ದೆಹಲಿಗೆ ತೆರಳಲು ಸಿದ್ಧರಾಗಿದ್ದಾರೆ.  

ಸಿಪಿವೈ ದೆಹಲಿ ದಂಡಯಾತ್ರೆ: ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಯೋಗೇಶ್ವರ್ ಪಾಲಿಗೆ ಚನ್ನಪಟ್ಟಣ ಉಪಚುನಾವಣೆ ನಿರ್ಣಾಯಕ ಎನಿಸಿದೆ. ಕ್ಷೇತ್ರವನ್ನು ಮರಳಿ ತೆಕ್ಕೆಗೆ ಪಡೆದುಕೊಳ್ಳಬೇಕು ಎಂದು ಪಣತೊಟ್ಟಿರುವ ಸೈನಿಕ ಎನ್‌ಡಿಎ ಟಿಕೆಟ್ ಪಡೆಯಲು ಸಾಕಷ್ಟು ಸರ್ಕಸ್ ನಡೆಸಿದ್ದಾರೆ.

ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಬಾರಿ ಖುದ್ದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಹಲವು ಬಾರಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿದ್ದು,  ಮತ್ತೆ ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ. ಉಪಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂದು ನಿರ್ಧರಿಸಿರುವ ಯೋಗೇಶ್ವರ್ ಎನ್‌ಡಿಎ ಟಿಕೆಟ್ ಸಿಗದಿದ್ದ ಪಕ್ಷದಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವ ಉಮೇದಿನಲ್ಲಿದ್ದು, ಇದನ್ನು ಅವರು ಪರೋಕ್ಷವಾಗಿ ತಿಳಿಸಿದ್ದಾರೆ. 

ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ಯೋಗೇಶ್ವರ್ ಅಭಿಮಾನಿಗಳು ಹಾಗೂ ಸಮಾನ ಮನಸ್ಕರ ನೇತೃತ್ವದಲ್ಲಿ ಸಭೆ ನಡೆಸಲು ಮುಂದಾಗಿದ್ದರಾದರೂ ಬಿಜೆಪಿ ವರಿಷ್ಠರ ಸೂಚನೆಯ ಮೇರೆಗೆ ಸಭೆಯನ್ನು ರದ್ದುಪಡಿಸಲಾಗಿತ್ತು. ಈಗಲೂ ಸಹ ಎನ್‌ಡಿಎ ಟಿಕೆಟ್ ಸಿಗದಿದ್ದ ಪಕ್ಷದಲ್ಲಿ ಯೋಗೇಶ್ವರ್ ಯಾವ ಹಾದಿ ತುಳಿಯಲಿದ್ದಾರೆ ಎಂಬುದು ನಿಗೂಢವಾಗಿದೆ.

ಜೆಡಿಎಸ್ ಪಟ್ಟು: ಇನ್ನು ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್ ಮುಖಂಡರು ಸಹ ಕಾರ್ಯತಂತ್ರ ಹಣೆದಿದ್ದು, ಕ್ಷೇತ್ರವನ್ನು ಜೆಡಿಎಸ್‌ಗೆ ಉಳಿಸಿಕೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ. ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಎದುರಾಗಲಿದ್ದು, ಮೂರರಲ್ಲಿ ಒಂದು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಪಟ್ಟು ಹಿಡಿದಿದ್ದಾರೆ. ಚನ್ನಪಟ್ಟಣ ಜೆಡಿಎಸ್ ತೆಕ್ಕೆಯಲ್ಲಿದ್ದ ಕ್ಷೇತ್ರವಾಗಿದ್ದು, ಜೆಡಿಎಸ್‌ಗೆ ಬಿಟ್ಟುಕೊಡಬೇಕು. ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನೇ ಕಣಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದ್ದಾರೆ. 

 ಡಿಕೆಶಿ ಅಬ್ಬರ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಗೆಲುವು ಸಾಧಿಸುತ್ತಿದ್ದಂತೆ, ಉಪಚುನಾವಣೆಗೆ ಕಾಂಗ್ರೆಸ್‌ನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಕಣಕ್ಕೆ ಇಳಿದಿದ್ದಾರೆ. ಈಗಾಗಲೇ ಚನ್ನಪಟ್ಟಣ ನಗರ ಹಾಗೂ ಎಲ್ಲ ಜಿಪಂ ವ್ಯಾಪ್ತಿಯಲ್ಲಿ ಜನಸ್ಪಂದನಾ ಕಾರ್ಯಕ್ರಮದ ಮೂಲ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸುವ ಜತೆಗೆ ಚನ್ನಪಟ್ಟಣದ ಅಭ್ಯರ್ಥಿ ನಾನೇ ಎನ್ನುವ ಮೂಲಕ ಸಾಕಷ್ಟು ಸಂಚಲನ ಮೂಡಿಸಿದ್ದಾರೆ. 

ಉದ್ಯೋಗ ಮೇಳ: ಬಡವರಿಗೆ ನಿವೇಶನ, ಸೂರು ಕಲ್ಪಿಸುವ ಭರವಸೆ ನೀಡಿರುವ ಡಿಕೆಶಿ ಇದೀಗ ಯುವಜನತೆಯನ್ನು ಸೆಳೆಯುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಬೃಹತ್ ಉದ್ಯೋಗ ಮೇಳ ನಡೆಸಲು ಮುಂದಾಗಿದ್ದಾರೆ. ಇದೇ ಆ.30ರಂದು ಚನ್ನಪಟ್ಟಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದ್ದು, ಯುವಕರು ಹಾಗೂ ನಿರುದ್ಯೋಗಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ಹಣೆದಿದ್ದಾರೆ. ಈಗಾಗಲೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಚನ್ನಪಟ್ಟಣದಲ್ಲಿ ಧ್ವಜಾರೋಹಣ ನಡೆಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದ ಡಿಕೆಶಿ, ಉಪಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರದಲ್ಲಿ ಬೃಹತ್ ಉದ್ಯೋಗ ಮೇಳ ನಡೆಸಲು ಮುಂದಾಗಿದ್ದಾರೆ. 

ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಜತೆಗೆ ಜನರನ್ನು ಸೆಳೆಯಲು ಈಗಾಗಲೇ ಕಸರತ್ತು ಆರಂಭಿಸಿದೆ. ಟಿಕೆಟ್ ಹಗ್ಗಜಗ್ಗಾಟದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜನರನ್ನು ತಲುಪುವ ಕೆಲಸ ಆರಂಭಿಸರಲಿಲ್ಲ. ಇದೀಗ ನಿಖಿಲ್ ಕ್ಷೇತ್ರ ಪ್ರವಾಸದ ಮೂಲಕ ಜೆಡಿಎಸ್ ಸಹ ಪಕ್ಷ ಸಂಘಟನೆ ಕಾರ್ಯಕ್ಕೆ ಮುಂದಾಗಿದೆ. ದೆಹಲಿಯಿಂದ ಹಿಂದಿರುಗಿದ ನಂತರ ಯೋಗೇಶ್ವರ್ ನಡೆ ಬಹುತೇಕ ನಿರ್ಧಾರವಾಗಲಿದ್ದು, ಮುಂದಿನ ದಿನಗಳಲ್ಲಿ ಚನ್ನಪಟ್ಟಣದ ಚುನಾವಣಾ ಅಖಾಡ ಮತ್ತಷ್ಟು ರಂಗೇರಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ