ಕನ್ನಡಪ್ರಭ ವಾರ್ತೆ ಅಥಣಿ
ಸರ್ಕಾರ ಬಡವರಿಗಾಗಿ ನೀಡುವ ಅನ್ನಭಾಗ್ಯ ಯೋಜನೆ ಪಡಿತರ ಅಕ್ಕಿ, ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ವಿತರಿಸಲಾಗುವ ಆಹಾರ ಧಾನ್ಯಗಳು ಅಕ್ರಮವಾಗಿ ಮಾರಾಟವಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಹಿಂದಿನ ಕೆಡಿಪಿ ಸಭೆಯಲ್ಲಿ ಸೂಚನೆ ನೀಡಿದ ನಂತರ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಆದರೆ ತಾಲೂಕಿನಲ್ಲಿ ಅಕ್ರಮ ಅಕ್ಕಿ ಸಂಗ್ರಹಣೆ ಮಾಡುವ ದಂಧೆಗಾರರು ಹುಟ್ಟಿಕೊಳ್ಳುತ್ತಿದ್ದಾರೆ. ಇದರಲ್ಲಿ ಕೆಲವು ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಬಡವರ, ಮಕ್ಕಳ ಅನ್ನವನ್ನು ಕಸಿದುಕೊಳ್ಳುವ ಪ್ರಸಂಗ ತಾಲೂಕಿನಲ್ಲಿ ನಡೆಯಬಾರದು. ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದರೆ ಶಿಸ್ತುಕ್ರಮ ಕೈಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈಗ ಮಳೆಗಾಲ ಆರಂಭವಾಗಿದ್ದು, ಕೃಷ್ಣಾ ನದಿ ಪಾತ್ರದ ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ಅರಿತುಕೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಪ್ರತಿದಿನ ಮಹಾರಾಷ್ಟ್ರದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣವನ್ನು ಗಮನಿಸುತ್ತಾ ಯಾವುದೇ ಪರಿಸ್ಥಿತಿಯಲ್ಲಿ ಪ್ರವಾಹ ಎದುರಾದರೆ ಅದನ್ನು ಎದುರಿಸಲು ತಾಲೂಕು ಆಡಳಿತ ಸನ್ನದ್ಧರಾಗಿ ಇರಬೇಕೆಂದರು.ತಾಲೂಕಿನಲ್ಲಿ ಬಹುಗ್ರಾಮ ಕುಡಿವ ನೀರಿನ ಯೋಜನೆ ನೀರಿನ ಟ್ಯಾಂಕಗಳ ನಿರ್ಮಾಣ, ಜಲಜೀವನ್ ಮಿಷನ್ ಯೋಜನೆ ಪ್ರಗತಿ, ನದಿ ಪಾತ್ರದಲ್ಲಿ ಜಾಕ್ವೆಲ್ ಕಾಮಗಾರಿ ವಿಳಂಬವಾಗುತ್ತಿದ್ದು, ಎರಡು ವರ್ಷಗಳಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಬೇಗನೆ ಕೆಲಸ ಪೂರ್ಣಗೊಳಿಸುವಂತೆ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ರವಿ ಮರಗಾಲಿಗೆ ಸೂಚನೆ ನೀಡಿದರು.
ತಾಲೂಕಿನ ಬಾಡಗಿ ಮತ್ತು ಕೋಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಪ್ರಗತಿ ಹಂತದಲ್ಲಿದ್ದು, ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಯಾವುದೇ ನೆಪ ಹೇಳಿದರೆ ನಡಿಯಲ್ಲ. ಜೂ.15ರೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು. ಅರಣ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಂಟಿಯಾಗಿ ಸಭೆ ನಡೆಸುವ ಮೂಲಕ ಶಾಲಾ ಮಕ್ಕಳಿಗೆ ಗಿಡಮರ ಬೆಳೆಸಲು ದತ್ತು ನೀಡಬೇಕು. ರಸ್ತೆ ಬದಿಗೆ ಗಿಡಗಳನ್ನು ನೆಡುವಾಗ ಲೋಕೋಪಯೋಗಿ ಮತ್ತು ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳನ್ನು, ವಿದ್ಯುತ್ ಕಂಬಗಳಿರುವಲ್ಲಿ ಹೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ ಗಿಡ ನೆಡಬೇಕು. ನರ್ಸರಿಯಲ್ಲಿ ಬೆಳೆಸಿರುವ ಸಸಿಗಳು ನೆರೆಯ ಮಹಾರಾಷ್ಟ್ರಕ್ಕೆ ಸರಬರಾಜು ಆಗುತ್ತಿರುವ ದೂರುಗಳು ಬಂದಿವೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾಯಿಸಬೇಕು. ಪ್ರತಿ ವರ್ಷ ಗಿಡ ಹಚ್ಚುವ ಕಾರ್ಯಕ್ರಮ ಫೋಟೋ ಕಾರ್ಯಕ್ರಮಕ್ಕೆ ಸೀಮಿತವಾಗದೆ ಗಿಡ ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಸೇವೆ ಮಾಡಬೇಕೆಂದರು.
ಅಥಣಿ ಪಟ್ಟಣದ ಸರ್ಕಾರಿ ಆಸ್ಪತ್ರೆಯು ರಾಜ್ಯದ ಅತ್ಯುತ್ತಮ 10 ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿದೆ. ಇಲ್ಲಿನ ಎಲ್ಲಾ ವೈದ್ಯರು ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮ ರೀತಿ ಕೆಲಸ ಮಾಡುತ್ತಿರುವುದು ನನಗೆ ಹೆಮ್ಮೆ ತಂದಿದೆ. ಆಸ್ಪತ್ರೆಯಲ್ಲಿ ಇನ್ನಷ್ಟು ಮೂಲಸೌಕರ್ಯ ಒದಗಿಸುವುದರ ಜೊತೆಗೆ ಕಣ್ಣಿನ ತಪಾಸಣೆ ಮತ್ತು ಶಿಬಿರ ನಡೆಸಲು ಅಗತ್ಯವಿರುವ ಯಂತ್ರೋಪಕರಣಗಳ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.ತೋಟಗಾರಿಕೆ ಮತ್ತು ಕೃಷಿ ಅಧಿಕಾರಿಗಳು ಬೆಳೆ ವಿಮಾ ಪರಿಹಾರದ ನೀಡುವಲ್ಲಿ ಪಾರದರ್ಶಕತೆಯಿಂದ ಕೆಲಸ ಮಾಡಬೇಕು. ಈಗಾಗಲೇ ಕೆಲವು ಬೋಗಸ್ ಬೆಳೆ ಹಾನಿ ತೋರಿಸಿ ವಿಮೆ ಹಣ ಪಡೆದುಕೊಂಡಿರುವ ದೂರುಗಳು ಬಂದಿವೆ. ಇದೇ ಚಾಳಿ ಮುಂದುವರೆದರೆ ವಿಮೆ ಹಣ ನೀಡುವ ಕಂಪನಿಗಳಿಗೆ ಮುಂದೊಂದು ದಿನ ಈ ಯೋಜನೆಯನ್ನು ಕೈಬಿಡಬಹುದು. ಇದರಿಂದ ಅನೇಕ ರೈತರಿಗೆ ಸಮಸ್ಯೆಯಾಗುತ್ತದೆ. ಒಬ್ಬ ಮಾಡುವ ಮೋಸದಿಂದ ಅನೇಕ ಬಡ ರೈತರಿಗೆ ತೊಂದರೆಯಾಗುವುದು ಬೇಡ. ತಮ್ಮ ಇಲಾಖೆಯ ಸಿಬ್ಬಂದಿಗಳು ಪ್ರಾಮಾಣಿಕ ಮತ್ತು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಸೂಚಿಸಿದರು.
ಈ ಬಾರಿ ರೈತರಿಗೆ ನೀಡಲಾಗುತ್ತಿರುವ ಸಬ್ಸಿಡಿ ಬೀಜಗಳು ಕಳಪೆ ಮಟ್ಟದಾಗಿದ್ದು, ಸೋಯಬಿನ್ ಬೀಜ ಬಿತ್ತಿದ ನಂತರ ಮೊಳಕೆ ಒಡೆಯದೇ ಇರುವ ಬಗ್ಗೆ ದೂರು ಬಂದಿದೆ. ಅಂತಹ ಕಳಪೆ ಮಟ್ಟದ ಬೀಜಗಳನ್ನು ರೈತರಿಗೆ ವಿತರಣೆ ಮಾಡದಂತೆ, ಹೆಚ್ಚಿನ ದರದಲ್ಲಿ ಗೊಬ್ಬರ ಮತ್ತು ಬೀಜಗಳನ್ನು ಮಾರಾಟ ಮಾಡದಂತೆ ನಿಗ ವಹಿಸಬೇಕೆಂದು ಶಾಸಕರು ಹೇಳಿದರು.ಈ ವೇಳೆ ತಾಲೂಕು ತಹಸೀಲ್ದಾರ್ ಸಿದ್ದರಾಯ ಬೋಸಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ, ಸಿಪಿಐ ಸಂತೋಷ ಹಳ್ಳೂರು, ಅಭಿಯಂತರ ವೀರಣ್ಣ ವಾಲಿ, ಜಗದೀಶ್ ಹಿರೇಮಠ, ಪ್ರವೀಣ ಹುಣಸಿಕಟ್ಟಿ, ಎಸ್.ಜಿ ಸಂಪಣ್ಣವರ, ಗುರುಸ್ವಾಮಿ, ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ, ರಾಕೇಶ್ ಅರ್ಜುನವಾಡ, ವೆಂಕಟೇಶ ಕುಲಕರ್ಣಿ, ಬಸವರಾಜು ಯಾದವಾಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು, ತಮ್ಮ ಇಲಾಖೆ ಪ್ರಗತಿ ವರದಿ ಓದಿದರು.