ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನ ಕೋನಿಗರಹಳ್ಳಿ ಗ್ರಾಮದ ಬಳಿ ಇರುವ ಈ ಮೇಲ್ಸೇತುವೆ ಸುಮಾರು 35 ರಿಂದ 40ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆಯಾಗಿದೆ.
ನಿರ್ಮಿಸಿದಾಗ ಕಾಮಗಾರಿ ನಡೆದಿದ್ದು ಬಿಟ್ಟರೆ ಮತ್ತೆ ಯಾವಾಗಲೂ ಅದರ ಗುಣಮಟ್ಟವನ್ನು ಅಧಿಕಾರಿ ವರ್ಗ ಪರಿಶೀಲನೆಯೇ ನಡೆಸಿಲ್ಲ, ಬಿಸಿಲು, ಮಳೆಗೆ ತನ್ನ ಗುಣಮಟ್ಟವನ್ನು ಕಳೆದುಕೊಂಡ ಸೇತುವೆ ಬೀಳುವ ಹಂತ ತಲುಪಿದೆ.ಸುಮಾರು ವರ್ಷಗಳಿಂದ ಈ ಸೇತುವೆಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿತ್ತು.
ಶಿಥಿಲಗೊಂಡ ಸೇತುವೆಯ ರಿಪೇರಿ ಕಾರ್ಯ ಕಾಲ ಕಾಲಕ್ಕೆ ಆಗಬೇಕಿತ್ತು, ಆದರೆ, ಈಗ ಸೇತುವೆಯ ಕೆಳಭಾಗ ಹಾಗೂ ಮೇಲ್ಭಾಗ ಸಂಪೂರ್ಣ ಬಿರುಕು ಬಿಟ್ಟಿದ್ದು ಯಾವ ಕ್ಷಣದಲ್ಲಾದರೂ ಬೀಳುವ ಸಂಭವ ಹೆಚ್ಚಿದೆ. ಕಳೆದ ವರ್ಷದಲ್ಲಿ ಮಳೆ ಹೆಚ್ಚಾಗಿ ಸೇತುವೆ ಮೇಲಿನ ತಡೆಗೋಡೆಗಳು ಬಿದ್ದೋಗಿದ್ದವು. ಆಗಲೂ ಸುಮಾರು ಎರಡ್ಮೂರು ವರ್ಷಗಳ ನಂತರ ಅದರ ರಿಪೇರಿ ಮಾಡಿದ್ದು ಬಿಟ್ಟರೆ ಮತ್ತೆ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ಬಿರುಕು ಯಾವ ಸಂದರ್ಭದಲ್ಲಿ ಬಿದ್ದು ಅನಾಹುತ ಉಂಟು ಮಾಡುತ್ತದೆಯೋ ಗೊತ್ತಿಲ್ಲ. ಇಷ್ಟಾದರೂ ಅಧಿಕಾರಿಗಳು ಸೇತುವೆ ಮೇಲೆ ಓಡಾಡದಂತೆ ಎಚ್ಚರಿಕೆ ಅಥವಾ ಮುನ್ಸೂಚನೆ ಫಲಕ ಇಟ್ಟಿಲ್ಲ. ಮೊದಲೇ ಸೇತುವೆ ಶಿಥಿಲಗೊಂಡು ಓಡಾಡುವುದೇ ಸಾಹಸವಾಗಿತ್ತು. ಆದರೂ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. ಪ್ರಸ್ತುತ ಸಂಪೂರ್ಣ ಸೇತುವೆಯೇ ಬಿರುಕು ಬಿಟ್ಟು ಅಪಾಯ ಉಂಟುಮಾಡುವ ಸ್ಥಿತಿ ಎದುರಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಸೇತುವೆಯ ಪುನರ್ ನಿರ್ಮಾಣ ಅಥವಾ ದುರಸ್ಥಿಗೆ ಮುಂದಾಗುವರೇ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಹತ್ತಾರು ಗ್ರಾಮದ ಜನರು ತಮ್ಮ ವ್ಯಾಪಾರ, ವಹಿವಾಟಿಗಾಗಿ ಇದೇ ಸೇತುವೆಯನ್ನು ನಂಬಿದ್ದಾರೆ. ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಆತಂಕದಲ್ಲೇ ಈ ಸೇತುವೆ ಮೇಲೆ ಓಡಾಟ ಮಾಡುತ್ತಾರೆ. ದೊಡ್ಡ ಅನಾಹುತ ಆಗುವ ಮೊದಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ದುರಸ್ತಿ ಮಾಡಿಸಬೇಕಿದೆ. ಸುಮಾರು ವರ್ಷಗಳಿಂದ ಈ ಸೇತುವೆ ಅಲ್ಲಲ್ಲಿ ಶಿಥಿಲಗೊಂಡಿದೆ. ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಪ್ರಸ್ತುತ ಸೇತುವೆ ಬಿರುಕು ಬಿಟ್ಟು ಕಳಚಿ ಬೀಳುವ ಸ್ಥಿತಿಯಲ್ಲಿದೆ. ಸೇತುವೆ ಕೆಳಭಾಗ, ಮೇಲ್ಭಾಗದಲ್ಲಿ ಬಿರುಕು ಕಾಣಿಸಿಕೊಂಡು ಜನರಲ್ಲಿ ಭಯ ಉಂಟುಮಾಡಿದೆ.