ಕನ್ನಡಪ್ರಭ ವಾರ್ತೆ ಯಾದಗಿರಿ
ಶಾಲೆಗಳಲ್ಲಿ ಮಕ್ಕಳಿಗೆ ಭಯ ಮುಕ್ತ ವಾತಾವರಣ ಸೃಷ್ಟಿಸಬೇಕು. ಎಲ್ಲ ಅಧಿಕಾರಿಗಳು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ನಿಯಮ ಅರಿತು ಉತ್ತಮ ರೀತಿಯಲ್ಲಿ ಕಾಳಜಿ ವಹಿಸಿ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಮಕ್ಕಳ ಹಕ್ಕುಗಳ ರಕ್ಷಣೆ ಪೂರ್ಣ ಮತ್ತು ಸಕಾಲದಲ್ಲಿ ನ್ಯಾಯ ಒದಗಿಸಲು ಸಾಧ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಹೇಳಿದರು.ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಭಾಗೀದಾರರ ಸಹಯೋಗದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಕಾರ್ಯಕ್ರಮ ಅಂಗವಾಗಿ ನಡೆದ ಎರಡು ದಿನದ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿಲ್ಲಾ ನ್ಯಾಯಧೀಶರಾದ ರವೀಂದ್ರ ಹೊನೋಲೆ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಡಿಮೆ ಮಾಡಲು ಅಧಿಕಾರಿಗಳು ತಮ್ಮ ಕಾರ್ಯ ಚಟುವಟಿಕೆಗಳನ್ನು ಅರಿತು ತಡೆಗಟ್ಟಬೇಕು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಮಾತನಾಡಿ, ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಬಂದಾಗ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹಾಕದೇ ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಮಕ್ಕಳ ವಿರುದ್ಧ ಆಗುವ ಅಪರಾಧಗಳನ್ನು ತಡೆಯುವಲ್ಲಿ ಯಶಸ್ವಿಯಾಗುವ ಹಾಗೆ ಕಾರ್ಯನಿರ್ವಹಿಸಬೇಕು ಎಂದರು.
ಜಿಪಂ ಸಿಇಓ ಗರಿಮಾ ಪನ್ವಾರ ಮಾತನಾಡಿ, ಸಾರ್ವಜನಿಕ ಸೇವೆಯಲ್ಲಿರುವ ನಾವುಗಳು ಮಕ್ಕಳಿಗೆ ನ್ಯಾಯವಾದಗಿಸುವ ಕಾರ್ಯ ಮಾಡಬೇಕು. ಅಧಿಕಾರಿಗಳು ಮಕ್ಕಳ ಹಕ್ಕುಗಳ ಜಾಗೃತಿ ಮೂಡಿಸುವ ಕುರಿತಾಗಿ ಅವಲೋಕಿಸಲು ತಿಳಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಕೊಪ್ಪಳದ ಯುನಿಸೆಫ್ ಪ್ರಾದೇಶಿಕ ಸಂಯೋಜಕರಾದ ಕೆ. ರಾಘವೇಂದ್ರ ಭಟ್ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೀರನಗೌಡ, ಮಹಿಳಾ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಪ್ರೇಮಮೂರ್ತಿ, ಕಾನೂನು ಮತ್ತು ಪರಿವೀಕ್ಷಣಾ ಅಧಿಕಾರಿ ರಾಜೇಂದ್ರಕುಮಾರ್ ಯಾದವ್, ಮಕ್ಕಳ ರಕ್ಷಣಾ ಅಧಿಕಾರಿ ದಶರಥನಾಯಕ, ಮಕ್ಕಳ ರಕ್ಷಣಾಧಿಕಾರಿ (ಸಂಸ್ಥಿಕ) ಗೋವಿಂದ್ ರಾಠೋಡ್ ಸೇರಿದಂತೆ ಇತರರಿದ್ದರು.