ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಬೆಳಗಾವಿ-ಬೈಲಹೊಂಗಲ-ಸೊಗಲ-ಸವದತ್ತಿ ಮಾರ್ಗವಾಗಿ ಧಾರವಾಡ ಸಂಪರ್ಕ ಹೊಂದುವ ಹೊಸ ರೈಲ್ವೆ ಮಾರ್ಗ ರಚಿಸುವಂತೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಮಹಾರಾಷ್ಟ್ರದಿಂದ ಸೋಗಲ ಶ್ರೀಕ್ಷೇತ್ರ ಮತ್ತು ರೇಣುಕಾ ಯಲ್ಲಮ್ಮ ಕ್ಷೇತ್ರಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಹಾಗೂ ಈ ಭಾಗದ ಸರಕು ಸಾಗಾಣಿಕೆಗೆ ಆದ್ಯತೆ ನೀಡಲು, ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಈ ಮಾರ್ಗ ಅತ್ಯವಶ್ಯಕವಾಗಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ನೈಋತ್ಯ ರೈಲ್ವೆ ವಿಭಾಗದ ಡಿಆರ್‌ಯುಸಿಸಿ ಸದಸ್ಯ ಎಫ್.ಎಸ್.ಸಿದ್ದನಗೌಡ ರೈಲ್ವೆ ಸಲಹಾ ಮಂಡಳಿ ಸಭೆಯಲ್ಲಿ ಆಗ್ರಹಿಸಿದರು.ಇತ್ತೀಚಿಗೆ ಹುಬ್ಬಳ್ಳಿ ರೈಲ್ವೆ ಮಂಡಳಿಯಲ್ಲಿ ನಡೆದ 38ನೇ ಡಿಆರ್‌ಯುಸಿಸಿ ಸಭೆಯಲ್ಲಿ ನೈಋತ್ಯ ರೈಲ್ವೆ ವಿಭಾಗದ ಮ್ಯಾನೇಜರ್ ಬೇಲಾ ಮೀನಾ ಅವರಿಗೆ ವಿವಿಧ ಬೇಡಿಕೆಗಳ ಮನವಿ ನೀಡಿ ಸಭೆಯಲ್ಲಿ ಮಾತನಾಡಿದ ಅವರು, ಜನಸಾಮನ್ಯರಿಗೆ ಸರಳ ಮತ್ತು ಅಗ್ಗದ ದರದ ಸುರಕ್ಷಿತ ಪ್ರಯಾಣಕ್ಕೆ ಹೆಸರುವಾಸಿಯಾದ ರೈಲ್ವೆ ಪ್ರಯಾಣ ಇಂದು ಅಮೃತ ಕಾಲ ಅಡಿಯಲ್ಲಿ ನೈಋತ್ಯ ರೈಲ್ವೆ ವಿಭಾಗದ ಅನೇಕ ರೈಲ್ವೆ ನಿಲ್ದಾಣಗಳು ಉನ್ನತೀಕರಣ ಹೊಂದಿರುವುದು ಸಮಸ್ತ ರೈಲ್ವೆ ಬಳಕೆದಾರರಿಗೆ ಖುಷಿ ತಂದಿರುವ ಸದ್ವಿಚಾರವಾಗಿದೆ. ಇಂತಹ ಸಮಯದಲ್ಲಿ ನನ್ನನ್ನು ನೈಋತ್ಯ ರೈಲ್ವೆ ವಿಭಾಗದ ಡಿ.ಆರ್.ಯು.ಸಿ.ಸಿ ಸದಸ್ಯನಾಗಿ ಆಯ್ಕೆ ಮಾಡಿ ರೈಲ್ವೆ ಬಳಕೆದಾರರ ಅಲ್ಪ ಸೇವೆ ಮಾಡಲು ಅನಕೂಲ ಮಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಬೆಳಗಾವಿ-ಧಾರವಾಡ ನೇರ ರೈಲ್ವೆ ಕಾಮಗಾರಿಯ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ, ತ್ವರಿತಗತಿಯಲ್ಲಿ ಕಾಮಗಾರಿ ಪ್ರಾರಂಭಿಸಬೇಕು. ಲೊಕಾಪೂರ-ರಾಮದುರ್ಗ-ಸವದತ್ತಿ ಹೊಸ ಮಾರ್ಗದ ಸರ್ವೇ ಕಾರ್ಯ ಕೈಗೊಳ್ಳಬೇಕು. ಬೆಳಗಾವಿ-ಮಿರಜ್ (ಸ್ಪೇಶಲ್) ರೈಲ್ವೆ ಬಹಳಷ್ಟು ಜನರಿಗೆ ಅತ್ಯಂತ ಅನಕೂಲಕರವಾಗಿದೆ. ಈ ರೈಲ್ವೆ ದರ ಹೆಚ್ಚಾಗಿದ್ದರಿಂದ ಹಾಗೂ ಕೆಲವು ಕಡೆಗಳಲ್ಲಿ ನಿಲುಗಡೆ ಇಲ್ಲದೇ ಇರುವುದರಿಂದ ದಿನನಿತ್ಯ ಸಂಚರಿಸುವ ರೋಗಿಗಳು, ರೈತರು, ಕೂಲಿ ಕಾರ್ಮಿಕರು ಸರಕು ಸಾಗಾಣಿಕೆದಾರರಿಗೆ ಸಮಸ್ಯೆಯಾಗುತಿದ್ದು, ಈ ಮಾರ್ಗಕ್ಕೆ ಮೊಮು ರೈಲ್ವೆ ನೀಡಬೇಕು. ಗೋವಾಕ್ಕೆ ತೆರಳುವ ರೈಲ್ವೆ ಮಾರ್ಗ ಡಬಲಿಂಗ್ ಕಾಮಗಾರಿ ವಿಳಂಬವಾಗುತ್ತಿದೆ. ರೈಲ್ವೆ ಸಂಚಾರ ಬಂದ ಆಗಿರುವುದರಿಂದ ಬೆಳಗಾವಿ ಜಿಲ್ಲೆಯಿಂದ ಕೃಷಿ ಉತ್ಪನ್ನಗಳು, ಹಾಲಿನ ಉತ್ಪನ್ನಗಳು, ಮೌಂಸ ಸಾಗಾಣಿಕೆ ಹಾಗೂ ಕೂಲಿಕಾರ್ಮಿಕರು ಉದ್ಯೋಗ ಆರಿಸಿ ಗೋವಾಕ್ಕೆ ತೆರಳುವುದು ಪ್ರವಾಸೋದ್ಯಮಕ್ಕೆ ದಿನ ನಿತ್ಯ ಓಡಾಡುವ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಡಬಲಿಂಗ್ ಕಾಮಗಾರಿ ಬೇಗನೆ ಪೂರ್ಣಗೊಳಿಸಿಬೇಕು. ಬೆಳಗಾವಿ ಸಮೀಪದ ಸೂಳೆಬಾವಿ ಹತ್ತಿರ ರೈಲ್ವೆ ಸೇತುವೆ ಸಮೀಪದ ತಡೆಗೊಡಿಯಿಂದ ರೈತರ ಜಮೀನುಗಳ ರಸ್ತೆಗೆ ತೊಂದರೆಯಾಗಿದ್ದು, ಈ ಬಗ್ಗೆ ಶೀಘ್ರವಾಗಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಖಾನಾಪುರ ರೈಲ್ವೆ ನಿಲ್ದಾಣದ 2ನೇ ಪ್ಲಾಟ್ ಪಾರಂನಲ್ಲಿ ಚಾವಣಿ ಇಲ್ಲದೇ ಪ್ರಯಾಣಿಕರು ಮಳೆಯಲ್ಲಿ ನೆನದುಕೊಂಡೇ ನಿಲ್ಲುವ ಸ್ಥಿತಿ ಇದೆ. ಚಾವಣಿ ಹಾಕಿ, ಅಸೋಗಾ ರಸ್ತೆಗೆ ಅಂಡರ್‌ಪಾಸ್ ರಸ್ತೆ ಕಾಮಗಾರಿ ಆಮೆಗತಿಯಲ್ಲಿದೆ. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು. ಪಂಡರಾಪೂರಕ್ಕೆ ಹೋಗುವ ಜಿಲ್ಲೆಯ ಲಕ್ಷಾಂತರ ಭಕ್ತರು ಅನಕೂಲಕ್ಕಾಗಿ ಹುಬ್ಬಳ್ಳಿ-ಪಂಡರಾಪೂರ ರೈಲು ಪ್ರತಿದಿನ ಪ್ರಾರಂಭಿಸುವುದಾಗಬೇಕು. ಮನಗೂರ-ಬೆಳಗಾವಿ ರೈಲುಗಾಡಿ ನಿತ್ಯ ಸಂಚರಿಸಬೇಕು. ಬೆಳಗಾವಿ-ಬೆಂಗಳೂರ ವಂದೇ ಭಾರತ ರೈಲು ಶೀಘ್ರವಾಗಿ ಪ್ರಾರಂಭಿಸಬೇಕು ಮತ್ತು ಬೆಳಗಾವಿಯ ಪ್ರಯಾಣಿಕರ ಅನಕೂಲಕ್ಕಾಗಿ ಬೆಳಗ್ಗೆ 7 ಗಂಟೆಗೆ ಪ್ರಾರಂಭಿಸಬೇಕು ಎಂದು ತಿಳಿಸಿ ಇನ್ನೂ ಅನೇಕ ರೈಲ್ವೆ ಬಳಕೆದಾರರ ಸಮಸ್ಯೆಗಳನ್ನು ತಿಳಿಸಿದರು. ಕೆಲ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿದ ರೈಲ್ವೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಆಂಧ್ರಪ್ರದೇಶ, ಗೋವಾ ಹಾಗೂ ಕರ್ನಾಟಕದ ಡಿ.ಆರ್.ಯು.ಸಿ.ಸಿ ಸದಸ್ಯರು ವಿಭಾಗೀಯ ಎಲ್ಲ ರೈಲ್ವೆ ಅಧಿಕಾರಿಗಳು ಭಾಗಿಯಾಗಿದ್ದರು.