ಶತಮಾನ ಪೂರೈಸಿದ ಶಾಲೆಗೆ ವಿಶೇಷ ಕಾರ್ಯಕ್ರಮ ರೂಪಿಸಿ: ಬಸವರಾಜ ಬೊಮ್ಮಾಯಿ

KannadaprabhaNewsNetwork | Published : Mar 16, 2025 1:52 AM

ಸಾರಾಂಶ

ಶಿಕ್ಷಣ ಸಂಸ್ಥೆಗೆ ನೂರು ವರ್ಷವಾಗುವುದು ಇತಿಹಾಸ ನಿರ್ಮಾಣ ಮಾಡಿದಂತೆ. ಇದರ ಹಿಂದೆ ನೂರಾರು ಕಥೆಗಳಿರುತ್ತವೆ. ಶಿಕ್ಷಕರು ಸರ್ಕಾರಿ ನೌಕರಿಗೆ ಬಂದಿದ್ದೇನೆ ಎಂದು ಭಾವಿಸಬಾರದು, ವೈದ್ಯ ಹೇಗಿದ್ದಾರೆ ಎಂದು ತಿಳಿಯಲು ಒಂದು ವಾರ ಸಾಕು, ಶಿಕ್ಷಕರು ಹೇಗಿದ್ದಾರೆ ಎಂದು ತಿಳಿಯಲು ಕನಿಷ್ಠ 25 ವರ್ಷ ಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಬ್ಯಾಡಗಿ: ನೂರು ವರ್ಷ ಪೂರೈಸಿರುವ ಸರ್ಕಾರಿ ಶಾಲೆಗಳಿಗೆ ರಾಜ್ಯ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸಿ ಅನುದಾನ ನೀಡುವ ಮೂಲಕ ಸದೃಢಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ಕೆರವಡಿ ಗ್ರಾಮದ ಸರ್ಕಾರಿ‌ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಸ್ತುತ ನೂರು ವರ್ಷ ಆಚರಿಸಿಕೊಳ್ಳುತ್ತಿರುವ ಕೆರವಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಸದರ ನಿಧಿಯಿಂದ ₹10 ಲಕ್ಷ ಅನುದಾನ ನೀಡುವುದಾಗಿ ಅವರು ಘೋಷಿಸಿದರು.

ಶಿಕ್ಷಣ ಸಂಸ್ಥೆಗೆ ನೂರು ವರ್ಷವಾಗುವುದು ಇತಿಹಾಸ ನಿರ್ಮಾಣ ಮಾಡಿದಂತೆ. ಇದರ ಹಿಂದೆ ನೂರಾರು ಕಥೆಗಳಿರುತ್ತವೆ. ಶಿಕ್ಷಕರು ಸರ್ಕಾರಿ ನೌಕರಿಗೆ ಬಂದಿದ್ದೇನೆ ಎಂದು ಭಾವಿಸಬಾರದು, ವೈದ್ಯ ಹೇಗಿದ್ದಾರೆ ಎಂದು ತಿಳಿಯಲು ಒಂದು ವಾರ ಸಾಕು, ಶಿಕ್ಷಕರು ಹೇಗಿದ್ದಾರೆ ಎಂದು ತಿಳಿಯಲು ಕನಿಷ್ಠ 25 ವರ್ಷ ಬೇಕು. ನಿಮ್ಮ ಬೋಧನೆ ಮಕ್ಕಳ ಯಶಸ್ಸಿನಲ್ಲಿದೆ. ಸಂಸ್ಥೆಗೆ ರುದ್ರಪ್ಪ ಮಲ್ಲಾಡದ ಜಮೀನು ದಾನ ಮಾಡಿದ್ದಾರೆ‌. ಇಲ್ಲಿನ ಶಿಕ್ಷಕರು ಮತ್ತು ಹಳೆಯ ವಿದ್ಯಾರ್ಥಿಗಳು ಯಶಸ್ಸು ಕಂಡಿದ್ದಾರೆ ಎಂದರು.

ವಿವೇಕ ಯೋಜನೆ: ನಾನು ಸಿಎಂ ಆಗಿದ್ದಾಗ ಬಜೆಟ್‌ನಲ್ಲಿ ವಿವೇಕ ಯೋಜನೆ ಘೊಷಣೆ ಮಾಡಿದ್ದೆ. ರಾಜ್ಯದಲ್ಲಿ 30 ಸಾವಿರ ಶಾಲಾ ಕೊಠಡಿ ಕೊರತೆ‌ಯಿದೆ. ಪ್ರತಿವರ್ಷ 9 ಸಾವಿರ ಶಾಲಾ‌ ಕೊಠಡಿ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿತ್ತು. ಕಳೆದ 2022-23ರಲ್ಲಿ ನಾಲ್ಕೂವರೆ ಸಾವಿರ ಶಾಲಾ ಕೊಠಡಿ ನಿರ್ಮಾಣ ಮಾಡಲಾಗಿತ್ತು. ಬಜೆಟ್‌ನಲ್ಲಿ ಶಿಕ್ಷಣಕ್ಕೆ ಶೇ. 14ರಷ್ಟು ಅನುದಾನ ಮೀಸಲಿಡಲಾಗಿತ್ತು. ಪ್ರಸ್ತುತ ಶೇ. 11 ಕ್ಕೆ ಇಳಿದಿದೆ‌. ಶಿಕ್ಷಣವಿಲ್ಲದ ಸಮಾಜದಿಂದ ಅರಾಜಕತೆ ಉಂಟಾಗಲಿದೆ ಎಂದರು.

ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ, ಎಸ್‌ಡಿಎಂಸಿ ಅಧ್ಯಕ್ಷ ಹೇಮಪ್ಪ ಬ್ಯಾಡಗಿ, ಹಾವೇಮುಲ್ ಸದಸ್ಯ ಪ್ರಕಾಶ ಬನ್ನಿಹಟ್ಟಿ, ಮುಖಂಡರಾದ ರಮೇಶ ಸುತ್ತಕೋಟಿ, ಎನ್.ಎಸ್. ಬಟ್ಟಲಕಟ್ಟಿ ಉಪಸ್ಥಿತರಿದ್ದರು.

Share this article