ಗ್ರಾಮೀಣ ಪ್ರದೇಶದಲ್ಲಿ ಚೆಸ್ ಬಗ್ಗೆ ಅರಿವು ಮೂಡಿಸಿ

KannadaprabhaNewsNetwork | Published : Jun 12, 2024 12:31 AM

ಸಾರಾಂಶ

ನಗರದ ಶ್ರೀ ದೇವಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಮಹಿಳಾ ಚೆಸ್ ಚಾಂಪಿಯನ್‌ಶಿಪ್‌ಗೆ ವಿದ್ಯುಕ್ತ ತೆರೆ ಬಿದ್ದಿತು.

ಕನ್ನಡಪ್ರಭ ವಾರ್ತೆ ತುಮಕೂರುನಗರದ ಶ್ರೀ ದೇವಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಮಹಿಳಾ ಚೆಸ್ ಚಾಂಪಿಯನ್‌ಶಿಪ್‌ಗೆ ವಿದ್ಯುಕ್ತ ತೆರೆ ಬಿದ್ದಿತು. ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್, ನ್ಯೂ ತುಮಕೂರು ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ ನೇತೃತ್ವದಲ್ಲಿ ಆಯೋಜಿಸಿದ್ದ ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧೆಡೆಯ ಎಂಟು ವರ್ಷದಿಂದ ಆರವತ್ತು ವರ್ಷದವರೆಗಿನ ನೂರಕ್ಕೂ ಅಧಿಕ ಮಹಿಳಾ ಚೆಸ್ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿದರು. ರಾಜ್ಯ ಮಟ್ಟದ ಈ ಚಾಂಪಿಯನ್ ಶಿಪ್‌ನಲ್ಲಿ ಮೊದಲ ನಾಲ್ಕು ಸ್ಥಾನ ಪಡೆದ ಬೆಂಗಳೂರಿನ ಮಾನಸ, ಕೃಪಾ ಎಸ್ ಉಕ್ಕಾಲಿ, ಶ್ರೇಯಾ ರಾಜೇಶ್ ಹಾಗೂ ದಕ್ಷಿಣ ಕನ್ನಡದ ಅರುಷಿ ಡಿಸೆಲ್ವ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದರು. ರೆಡ್ ಕ್ರಾಸ್ ರಾಷ್ಟ್ರೀಯ ಮಂಡಳಿ ಸದಸ್ಯ ಎಸ್. ನಾಗಣ್ಣ ಮಾತನಾಡಿ, ಭಾರತ ಇಂದು ಹಲವು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಅದೇ ರೀತಿ ಚೆಸ್‌ನಲ್ಲೂ ಭಾರತ ವಿಶ್ವ ಪ್ರಸಿದ್ಧಿ ಪಡೆದಿದ್ದು, ನಗರ ಪ್ರದೇಶಕ್ಕೆ ಸೀಮಿತವಾಗಿರುವ ಈ ಕ್ರೀಡೆಯನ್ನು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದರು. ಮಕ್ಕಳಿಗೆ ಚೆಸ್ ಕಲಿಕೆಯಲ್ಲಿ ತಾಯಂದಿರ ಪಾತ್ರ ಮಹತ್ತರವಾದುದು. ಚೆಸ್ ನಿರಂತರ ಅಭ್ಯಾಸದಿಂದ ಮಕ್ಕಳಲ್ಲಿ ಏಕಾಗ್ರತೆ ಜತೆಗೆ ಗ್ರಹಿಕೆ ಸಾಮರ್ಥ್ಯವೂ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು. ಬಟವಾಡಿ ಸೆಂಟ್ ಮೇರಿಸ್ ಶಾಲೆ ಮುಖ್ಯಸ್ಥ ಸಿಸ್ಟರ್ ಫೆರಿಕಾ ಮಾತನಾಡಿ, ಚದುರಂಗದಾಟವೆಂದು ಕರೆಯಲ್ಪಡುವ ಚೆಸ್ ಭಾರತೀಯ ಆಟವಾಗಿದೆ. ಮಹಾಭಾರತ ಗತಿಸಲು ಈ ಚದುರಂಗದಾಟವೇ ಕಾರಣವಾಗಿದೆ. ಚೆಸ್ ಬರೀ ಆಟವಲ್ಲ. ಬದುಕಿನ ಸವಾಲುಗಳನ್ನು ಹೇಗೆ ಚಾಕಚಕ್ಯತೆಯಿಂದ ಗೆಲ್ಲಬೇಕು ಎಂದು ಅರಿವು ಮೂಡಿಸುವ ಕ್ರಿಯೆ ಎಂದು ಬಣ್ಣಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್ ಮಾತನಾಡಿ, ತುಮಕೂರು ಜಿಲ್ಲೆ ಕಲೆ ಸಾಹಿತ್ಯ ಸಂಸ್ಕಂತಿಗೆ ಹೆಸರಾಗಿರುವಂತೆ ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ರಾಜ್ಯ, ತುಮಕೂರು ಜಿಲ್ಲಾ ಚೆಸ್ ಅಸೋಸಿಯೇಷನ್ ಮಧುಕರ್, ಮಾಧುರಿ, ಅಖಿಲಾನಂದ್ ಅವರ ತಂಡ ರಾಜ್ಯ, ರಾಷ್ಟ್ರ ಮಟ್ಟದ ಹಲವು ಪಂದ್ಯಾವಳಿಗಳನ್ನು ತುಮಕೂರಲ್ಲಿ ಯಶಸ್ವಿಯಾಗಿ ಸಂಘಟಿಸಿ ಚೆಸ್ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದರು. ರಾಮನಗರದ ಮಾತೃಭೂಮಿ ಸಂಸ್ಥೆಯ ಬಾಲಸುಬ್ರಹ್ಮಣ್ಯಂ ಅವರು ಚೆಸ್ ಆಟಗಾರರು ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದರು. ಚೆಸ್ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಟಿ.ಎನ್. ಮಧುಕರ್, ತತ್ವ ಫೌಂಡೇಶನ್ ಮುಖ್ಯಸ್ಥ ಉಮೇಶ್, ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಅಖಿಲಾನಂದ್, ಅಂತಾರಾಷ್ಟ್ರೀಯ ಚೆಸ್ ಕೋಚ್‌ಗಳಾದ ಮಾಧುರಿ, ಮಂಜುನಾಥ್ ಜೈನ್ ಮಹಿಳಾ ಚಾಂಪಿಯನ್ ಶಿಪ್‌ನ ವಿವಿಧ ವಿಭಾಗಗಳಲ್ಲಿ ಗೆಲವು ಸಾಧಿಸಿದ ಮಹಿಳಾ ಚೆಸ್ ಆಟಗಾರ್ತಿಯರಿಗೆ ನಗದು ಬಹುಮಾನ, ಪಾರಿತೋಷಕವನ್ನು ವಿತರಿಸಿದರು. ಮುಂದಿನ ವರ್ಷದಿಂದ ಮಹಿಳಾ ಚೆಸ್ ಪಂದ್ಯಾವಳಿಯ ಮೊತ್ತವನ್ನು ಎರಡು ಲಕ್ಷ ರು,ಗೆ ಏರಿಸುವುದಾಗಿ ತಿಳಿಸಿದರು.

Share this article