ಕನ್ನಡ ಸಾಹಿತ್ಯದ ಬಗ್ಗೆ ಅರಿವು ಮೂಡಿಸಿಕೊಳ್ಳಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ

KannadaprabhaNewsNetwork | Published : Dec 15, 2024 2:01 AM

ಸಾರಾಂಶ

ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ನಿಮ್ಮ ಪ್ರತಿಭೆ ಪ್ರದರ್ಶಿಸಿ ಸಮ್ಮೇಳನದ ಬಗ್ಗೆ ರಸಪ್ರಶ್ನೆಗಳಿಗೆ ಉತ್ತರಿಸಿದರೆ ಸಾಹಿತ್ಯದ ಅರಿವು ಮೂಡುತ್ತದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಕನ್ನಡ ಸಾಹಿತ್ಯದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಕನ್ನಡ ಸಾಹಿತ್ಯದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ಸಮ್ಮೇಳನ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕರೆ ನೀಡಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಎಕ್ಸ್ ಮುನಿಸಿಪಲ್)ನಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ನಿಮ್ಮ ಪ್ರತಿಭೆ ಪ್ರದರ್ಶಿಸಿ ಸಮ್ಮೇಳನದ ಬಗ್ಗೆ ರಸಪ್ರಶ್ನೆಗಳಿಗೆ ಉತ್ತರಿಸಿದರೆ ಸಾಹಿತ್ಯದ ಅರಿವು ಮೂಡುತ್ತದೆ ಎಂದರು.

ಈವೆಂಟ್ ಉಪಸಮಿತಿ ಅಧ್ಯಕ್ಷ ಸಬ್ಬನಹಳ್ಳಿ ಶಶಿಧರ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಗುರುಲಿಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ತಾಲೂಕು ಕಸಾಪ ಅಧ್ಯಕ್ಷ ಚಂದ್ರಲಿಂಗು, ಪ್ರಚಾರ ಸಮಿತಿ ಈವೆಂಟ್ ಸಮಿತಿ ಸದಸ್ಯರಾದ ಶಂಭು ಕಬ್ಬನಹಳ್ಳಿ, ಎಂ.ಮಂಚಶೆಟ್ಟಿ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಬಿ.ಎಂ.ಅಪ್ಪಾಜಪ್ಪ,ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ಎಲ್.ಕೃಷ್ಣ, ಬಸವೇಗೌಡ ಖರಡ್ಯ, ಚಿಕ್ಕತಿಮ್ಮಯ್ಯ ಉಪಸ್ಥಿತರಿದ್ದರು.

ಸಾಹಿತ್ಯದ ಅಭಿರುಚಿ ಮಕ್ಕಳ ಮನದಾಳದಲ್ಲಿ ಮೂಡಬೇಕು: ಲೋಕೇಶ್

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮನದಾಳದಲ್ಲಿ ಮೂಡಿದರೆ ಕನ್ನಡ ಭಾಷೆ, ಸಾಹಿತ್ಯ ಗಟ್ಟಿಯಾಗಲಿದೆ ಎಂದು ಅತ್ತಿಗುಪ್ಪೆ ಸಾಹಿತ್ಯ ಬಳಗ ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್ ತಿಳಿಸಿದರು.

ಸಾಸಲು ಗ್ರಾಮದ ಶಂಭುಲಿಂಗೇಶ್ವರ ಪ್ರೌಢಶಾಲೆಯಲ್ಲಿ ಅತ್ತಿಗುಪ್ಪೆ ಸಾಹಿತ್ಯ ಬಳಗದಿಂದ ನಡೆದ ಸುವರ್ಣ ಕರ್ನಾಟಕ ಸಂಭ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆಗೆ 2 ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಹಲ್ಮಿಡಿ ಶಾಸನ ಕನ್ನಡ ಭಾಷೆಗೆ ಪುಷ್ಟಿ ನೀಡುವಂತಿದೆ. ಅತಿ ಹೆಚ್ಚು ಜ್ಞಾನಪೀಠ ಹೊಂದಿರುವ ಸಾಹಿತಿಗಳ ರಾಜ್ಯ ನಮ್ಮದಾಗಿದೆ. ಮಕ್ಕಳು ಹೆಚ್ಚು ಸಾಹಿತ್ಯ ಓದುವ, ಸರಳವಾಗಿ ಕವಿತೆ, ಲೇಖನ ಬರೆಯುವ ಹವ್ಯಾಸ ಮೂಡಿಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಡ್ಡಾಯವಾಗಿ ವಿದ್ಯಾರ್ಥಿಗಳು ಪೋಷಕರೊಂದಿಗೆ ಭಾಗವಹಿಸಿ ಕನ್ನಡತನ ಮೆರೆಯಬೇಕು. ಸಮ್ಮೇಳನದಲ್ಲಿ ಭಾಗವಹಿಸುವಿಕೆಯಿಂದ ಮತ್ತಷ್ಟು ಭಾಷೆಯಲ್ಲಿ ಪ್ರೀತಿ, ಹಿಡಿತವನ್ನು ಸಾಧಿಸಬಹುದಾಗಿದೆ ಎಂದರು.

ಉತ್ತಮವಾಗಿ ಪ್ರತಿಭಾ ಪ್ರದರ್ಶನ ನೀಡಿದ ಹಾಗೂ ಉತ್ತಮ ಕಲಿಕಾ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಮುಖ್ಯಶಿಕ್ಷಕ ಶಾಂತಪ್ಪಾಜಿ, ಶಿಕ್ಷಕ ವಿ.ಜಿ.ಮಲ್ಲಿಕಾರ್ಜುನಸ್ವಾಮಿ, ತ್ರಿವೇಣಿ, ಪಾಪಣ್ಣ, ಮಧು ಮತ್ತಿತರರಿದ್ದರು.

Share this article