ವಿಜಯಪುರ: ಮುಂದಿನ ಪೀಳಿಗೆಗೆ ನೀರನ್ನು ಉಳಿಸುವುದೇ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಎಲ್.ಆರ್.ಕೋಮಲ ತಿಳಿಸಿದರು.
ಮಕ್ಕಳು ಮನೆ ಮತ್ತು ತಮ್ಮ ಸುತ್ತಮುತ್ತಲಿನವರಿಗೆ ನೀರಿನ ಮಹತ್ವ ಕುರಿತು ತಿಳಿಸಬೇಕು. ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು. ಎಲ್ಲೇ ನೀರಿನ ದುರ್ಬಳಕೆ ಆಗುತ್ತಿದ್ದರೂ ಕೂಡಲೇ ಎಚ್ಚೆತ್ತುಕೊಂಡು ಅಲ್ಲಿನ ಜನರಿಗೆ ಅರಿವು ಮೂಡಿಸಬೇಕು. ಜಲ ಸಂರಕ್ಷಣೆ ಮಾಡಲು ನೀರಿನ ಮಳೆ ಕೊಯ್ಲ, ಪುನರುಜ್ಜೀವನ ಕುರಿತು ಮಾಹಿತಿ ಪಡೆದು ಅರಿತುಕೊಳ್ಳಬೇಕು. ಮಕ್ಕಳಿಂದ ಇಂತಹ ಸಾಮಾಜಿಕ ವಿಷಯಗಳಲ್ಲಿ ಕಾಳಜಿ ವಹಿಸಬೇಕು. ಆಗ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯನ್ನು ನೀಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಸರ್ಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿ.ಎಂ.ಕಿಶೋರ್ ಕುಮಾರ್ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧೀಜಿಯವರ ವಿವಿಧ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ಸಾಹಿತ್ಯ ಕೃತಿಗಳನ್ನು ವಿತರಿಸಿ ಮಾತನಾಡಿ, ಮೊದಲು ನಾವು ಪುಸ್ತಕಗಳನ್ನು ಓದಬೇಕು. ಗಾಂಧೀಜಿಯವರ ವಿಷಯಗಳನ್ನು ಪ್ರಶ್ನಿಸಬೇಕು ಮತ್ತು ಪ್ರಶ್ನಿಸಿ ಉತ್ತರ ಪಡೆಯುವ ಮನೋಭಾವವನ್ನು ಓದಿನ ಮೂಲಕ ಬೆಳೆಸಿಕೊಂಡರೆ ನಮ್ಮ ವ್ಯಕ್ತಿತ್ವದ ಅಭಿವೃದ್ಧಿ ಸಾಧ್ಯ. ಕೇವಲ ಪುಸ್ತಕಗಳನ್ನು ನೋಡಿಡಬಾರದು. ಪ್ರತಿ ವಿದ್ಯಾರ್ಥಿಯೂ, ಪ್ರತಿ ಪ್ರಜೆಯೂ ಮಹಾತ್ಮ ಗಾಂಧೀಜಿ ಕುರಿತು ಅಧ್ಯಯನ ಮಾಡಬೇಕು. ಆಗಲೇ ಸರಳ ಜೀವನ ಅಳವಡಿಸಿಕೊಳ್ಳಲು ಸಾಧ್ಯ. ಸರಳ ಜೀವನವನ್ನು ಅಳವಡಿಸಿಕೊಂಡಾಗ ಜೀವನದಲ್ಲಿ ಒತ್ತಡ ಇರುವುದಿಲ್ಲ. ಮನುಷ್ಯ ಹಣದ ಬೆನ್ನೇರಿದಾಗಲೇ ಬದುಕಿನ ಮೇಲೆ ಒತ್ತಡ ಹೆಚ್ಚಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ. ವಿ.ಪ್ರಶಾಂತ, ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾದ ಕೆ.ಎನ್.ದೀಪ, ಸಿ.ಸರಳ, ಕೆ.ವಿ.ಅರುಣ, ಸಿ.ಎನ್.ಪಾರ್ವತಮ್ಮ, ವೇದಿಕ, ವಿ.ಸಿ.ನೇತ್ರಾವತಿ, ಯುವಕ ಸಂಘ, ಯುವತಿ ಮಂಡಳಿಗಳ ಪದಾಧಿಕಾರಿಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಬೋಧಕ ಮತ್ತು ಬೋಧಕೇತರ ವೃಂದ ಹಾಜರಿದ್ದರು.