ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಯುವ ಸಮೂಹಕ್ಕೆ ಮಾದಕ ವಸ್ತುಗಳ ವ್ಯಸನದಿಂದ ಆಗುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳ ಅರಿವಿನ ಕೊರತೆಯಿದೆ. ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿದ ಅಧ್ಯಕ್ಷರಾದ ನೇರಳೆ ವೀರಭದ್ರಯ್ಯ ಭವಾನಿ ತಿಳಿಸಿದರು.ತಾಲೂಕಿನ ಅರೂರು ಬಳಿಯ ನಂದಿ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಾದಕವಸ್ತು ಬಳಸಬೇಡಿಪಿಯುಸಿಯವರೆಗೂ ಪೋಷಕರ ನೆರಳಲ್ಲಿ ಬೆಳೆಯುವ ವಿದ್ಯಾರ್ಥಿಗಳು ನಂತರದ ಶಿಕ್ಷಣಕ್ಕಾಗಿ ಎಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಹಲವಾರು ಕೋರ್ಸ್‌ಗಳಿಗೆ ಬೇರೆ ಕಡೆಗೆ ಬಂದು ಸೇರುತ್ತಾರೆ. ಅಂತಹ ಕೆಲ ವಿದ್ಯಾರ್ಥಿಗಳು ಮೊದಲು ಸಿಗರೇಟ್‌ನಿಂದ ಆರಂಭಿಸಿ ನಂತರ ಮಾದಕ ವಸ್ತುಗಳ ಚಟಕ್ಕೆ ದಾಸನಾಗುತ್ತಾರೆ. ಈ ಬಗ್ಗೆ ವಿದ್ಯಾರ್ಥಿಗಳೇ ಎಚ್ಚರ ವಹಿಸಿ ಮಾದಕ ವಸ್ತುಗಳಿಂದ ದೂರವಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜಿನ ಡೀನ್ ಹಾಗೂ ನಿರ್ದೇಶಕ ಡಾ. ಎಂ.ಎಲ್. ಮಂಜುನಾಥ್ ಮಾತನಾಡಿ, ಡ್ರಗ್ ಸೇವನೆಯಿಂದ ದೇಹದ ಮೇಲೆ ವಿಪರೀತ ಕೆಟ್ಟ ಪರಿಣಾಮಗಳಾಗುತ್ತದೆ. ಇದು ಮನಸ್ಸನ್ನು ಛಿದ್ರಗೊಳಿ ಮನೋರೋಗಕ್ಕೆ ಕಾರಣವಾಗುತ್ತದೆ. ಇಂತಹ ವ್ಯಸನ ಬಿಡಲು ಮನಸ್ಸು ಮಾಡಿ. ಸಮಾಜದಿಂದ ಪಡೆದ ವಿದ್ಯೆ ಮತ್ತು ಕೌಶಲವನ್ನು ಸಮಾಜದ ಒಳಿತಿಗೆ ಉಪಯೋಗಿಸಿ ಮಾದಕ ವ್ಯಸನ ಮುಕ್ತ ಸಮಾಜ ಸೃಷ್ಟಿಸಿ ಎಂದು ವೈದ್ಯ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ವಿದ್ಯಾವಂತರೇ ಹೆಚ್ಚು ವ್ಯಸನಿಗಳು
ನ್ಯಾಯಾಧೀಶರಾದ ಎಚ್.ಕೆ.ಉಮೇಶ್ ಮಾತನಾಡಿ, ವಿದ್ಯಾವಂತರೇ ಅನೇಕ ಕಾರಣಗಳಿಂದ ಈ ದುರಭ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ . ಡ್ರಗ್ ಸೇವನೆಯಿಂದ ಉಂಟಾಗುವ ಪರಿಣಾಮಗಳನ್ನು ಸೈಕೇಡಿಲಿಕ್ ಅನುಭವಗಳೆಂದು ಕರೆಯುತ್ತಾರೆ . ಇವುಗಳ ಸೇವನೆಯಿಂದ ಮನಸ್ಸಿನಲ್ಲಿ ಅಸಾಮಾನ್ಯ ಸ್ಪಷ್ಟ ಉತ್ಪನ್ನವಾಗುತ್ತದೆ . ಈ ಚಟಕ್ಕೆ ಒಂದು ಸಲ ಸಿಕ್ಕಿಬಿದ್ದರೆ ತಪ್ಪಿಸಿಕೊಳ್ಳುವುದು ಕಷ್ಟ . ಇಂದು ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಈ ಚಟಕ್ಕೆ ಬಲಿಯಾಗುತ್ತಿದ್ದಾರೆ ಇಂತಹ ವ್ಯಕ್ತಿಗಳನ್ನು ಸರಿದಾರಿಗೆ ತರುವುದೇ ಒಂದು ಸವಾಲಾಗಿದೆ ಎಂದು ತಿಳಿಸಿದರು.ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಖಾಸೀಂ ಮಾತನಾಡಿ, ಪ್ರತಿದಿನ ಸರಾಸರಿಯಂತೆ ನಾಲ್ಕು ಜನರಂತೆ,ವರ್ಷಕ್ಕೆ 4 ಸಾವಿರ ಜನರು ಮಾದಕ ವಸ್ತುಗಳ ಸೇವನೆಯಿಂದ ಆತ್ಮಹತ್ಯೆ ಮಾಡಿಕೊಳ್ಳೂತ್ತಿದ್ದಾರೆ. ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಯುವ ಜನತೆಗೆ ವೈದ್ಯರು ಮತ್ತು ನಾಗರೀಕರರು ಜಾಗೃತಿ ಮೂಡಿಸಬೇಕು ಎಂದರು.
ಸಮಾಜದ ಸ್ವಾಸ್ಥ್ಯ ಕಾಪಾಡಿಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್ ಮಾತನಾಡಿ, ಒಂದು ವೇಳೆ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾದರೇ ನಿಮ್ಮ ಇಡೀ ಜೀವನ ನಾಶವಾಗುತ್ತದೆ. ಸಮಾಜದ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕೆಟ್ಟ ಚಟಗಳಿಗೆ ದಾಸರಾಗದೇ ಓದಿನ ಕಡೆ ಗಮನ ಹರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಶಿವಕುಮಾರ್,ತಾಲ್ಲೂಕು ವೈದ್ಯಾಧಿಕಾರಿ ಡಾ.ಮಂಜುಳ, ಮೆಡಿಕಲ್ ಕಾಲೇಜಿನ ಫಿಸಿಯಾಲಜಿ ವಿಭಾಗ ಮುಖ್ಯಸ್ಥ ಡಾ.ಸುರೇಶ್‌ನಾಯಕ್,ಡಾ.ಶಂಕರಪ್ಪ,ಡಾ.ಅರ್ಜುನ್ ಬಹದ್ದೂರ್, ಮತ್ತಿತರರು ಇದ್ದರು.