ಮನುಷ್ಯ ದಯಾ ಸಂಘಗಳನ್ನು ಹುಟ್ಟುಹಾಕಿ..!

KannadaprabhaNewsNetwork |  
Published : Jul 20, 2025, 01:15 AM IST
ಮದಮ | Kannada Prabha

ಸಾರಾಂಶ

ಬೀದಿನಾಯಿ ಕಾಟದಿಂದ ರೋಸಿ ಹೋಗಿದ್ದೇವೆ. ಪ್ರಾಣಿದಯಾ ಸಂಘ ಇರುವಂತೆ ಮನುಷ್ಯ ದಯಾ ಸಂಘಗಳನ್ನು ಮಾಡಿ

ಹುಬ್ಬಳ್ಳಿ: ಬೀದಿನಾಯಿ ದಾಳಿ, ಬಿಡಾಡಿ ದನಗಳ ಹಾವಳಿಯಿಂದ ಸಾಕಾಗಿ ಹೋಗಿದೆ. ಮನುಷ್ಯ ದಯಾ ಸಂಘಗಳನ್ನು ಹುಟ್ಟುಹಾಕಿ, ಇಲ್ಲವೇ ಪ್ರಾಣಿಗಳ ಸಂಖ್ಯೆಯೇ ಹೆಚ್ಚಾಗುತ್ತಿದ್ದರೆ, ನಮ್ಮನ್ನು ಕೊಲೆ ಮಾಡಿ ಬಿಡಿ...!, ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುತ್ತಿದ್ದರೆ, ನಿಯಂತ್ರಣ ಏಕೆ ಆಗುತ್ತಿಲ್ಲ..?

ಇದು ಇಲ್ಲಿನ ಸವಾಯಿ ಗಂಧರ್ವ ಹಾಲ್‌ನಲ್ಲಿ ಬೀದಿನಾಯಿ ದಾಳಿ, ಬಿಡಾಡಿ ದನಗಳ ಹಾವಳಿ ತಡೆಗಟ್ಟಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಕರೆದಿದ್ದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಸಾರ್ವಜನಿಕರು ಹೇಳಿದ ಪರಿ..

ಕಳೆದ ಮೂರ್ನಾಲ್ಕು ದಿನಗಳ ಬಾಲಕಿಯೊಬ್ಬಳ ಮೇಲೆ ದಾಳಿ ನಡೆಸಿದ ಪರಿಣಾಮ ಪಾಲಿಕೆಯೂ ಈ ಸಭೆಯನ್ನು ಏರ್ಪಡಿಸಿತ್ತು. ಸಭೆಯಲ್ಲಿ ಬೀದಿ ನಾಯಿಗಳ ದಾಳಿ ಕುರಿತಂತೆ, ಬಿಡಾಡಿ ದನಗಳಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು. ಬೀದಿ ನಾಯಿಗಳ ನಿಯಂತ್ರಣದ ಹೆಸರಲ್ಲಿ ಪಾಲಿಕೆಯಲ್ಲಿ ನಡೆಯುತ್ತಿರುವ ಗೋಲ್‌ಮಾಲ್‌ನ್ನು ಬಹಿರಂಗಗೊಳಿಸಿದರು.

ಬೀದಿನಾಯಿ ಕಾಟದಿಂದ ರೋಸಿ ಹೋಗಿದ್ದೇವೆ. ಪ್ರಾಣಿದಯಾ ಸಂಘ ಇರುವಂತೆ ಮನುಷ್ಯ ದಯಾ ಸಂಘಗಳನ್ನು ಮಾಡಿ. ಪ್ರಾಣಿಗಳೇ ಜಾಸ್ತಿಯಾದರೆ ನಮ್ಮನ್ನು ಕೊಲೆ ಮಾಡಿಬಿಡಿ. ನಗರದಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದು, ಓಡಾಡುವಾಗ ದಾಳಿ ಮಾಡುತ್ತವೆ. ರಾತ್ರಿಯಿಡೀ ಬೊಗಳುತ್ತವೆ. ಬಿಪಿ ಪೇಷಂಟ್‌ಗಳಿರುತ್ತವೆ. ಇವುಗಳ ಕಾಟಕ್ಕೆ ರಾತ್ರಿಯಿಡೀ ನಿದ್ರೆ ಇಲ್ಲದಂತಾಗಿದೆ. ನಾವು ಬದುಕಬೇಕೋ? ಬೇಡವೋ..?

ಎಲ್ಲೆಂದರಲ್ಲಿ ತ್ಯಾಜ್ಯ, ಹೋಟೆಲ್‌ಗಳು ಮಾಂಸದ ತುಂಡುಗಳನ್ನು ಎಸೆಯುತ್ತಾರೆ. ಇದರಿಂದ ಬೀದಿನಾಯಿಗಳ ಉಪಟಳ ಹೆಚ್ಚಾಗಿದೆ. ಕೆಲವರು ಮನೆಯಲ್ಲಿ ದನಗಳನ್ನು ಸಾಕಲಾಗದೆ ಬೀದಿಯಲ್ಲಿ ಬಿಟ್ಟಿದ್ದಾರೆ. ಪಾಲಿಕೆಗೆ ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಪಾಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಅವಳಿನಗರದಲ್ಲಿ 30 ಸಾವಿರ ಬೀದಿನಾಯಿಗಳು ಇವೆ ಎಂದು ಪಾಲಿಕೆ ಪಶು ವೈದ್ಯರು ಹೇಳುತ್ತಾರೆ. ಪ್ರತಿ ತಿಂಗಳು 400 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದರೆ ಸಮಸ್ಯೆ ಆಗುತ್ತಿರಲಿಲ್ಲ. ಬಿಡಾಡಿ ದನಗಳನ್ನು ಗುರುತು ಮಾಡಿದರೆ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್‌ ಯಲಿಗಾರ ಹೇಳಿದರು.

ಪಾಲಿಕೆ ಸದಸ್ಯರಾದ ನಜೀರ್ ಅಹ್ಮದ ಹೊನ್ಯಾಳ, ಸುವರ್ಣ ಕಲ್ಲಕುಂಟ್ಲಾ, ಆರೀಫ್ ಭದ್ರಾಪುರ, ಉಮಾ ಮುಕುಂದ, ಮಹ್ಮದ್‌ ಇಕ್ಬಾಲ್‌ ನವಲೂರ ಹಾಗೂ ಇತರರು ಬೀಡಾಡಿ ದನಗಳ ಹಾಗೂ ನಾಯಿಗಳ ಕಾಟದ ಕುರಿತು ಅಸಮಾಧಾನ ಹೊರಹಾಕಿದರು.

ಪಾಲಿಕೆ ಸದಸ್ಯರ, ಪ್ರಾಣಿ ಪ್ರಿಯರ ಸಲಹೆ ಆಲಿಸಿ ಮಾತನಾಡಿದ ಮೇಯರ್ ಜ್ಯೋತಿ ಪಾಟೀಲ, ‘ಬೀಡಾಡಿ ದನಗಳ ಹಾಗೂ ಬೀದಿ ನಾಯಿಗಳ ಹಾವಳಿ ತಡೆಗೆ ಎರಡು-ಮೂರು ತಿಂಗಳಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು. ಯಾವುದೇ ನಿಯಮ ಜಾರಿಗೆ ತಂದರೂ ಎಲ್ಲರಿಗೂ ಅನ್ವಯಿಸಲಿದೆ. ಸಾರ್ವಜನಿಕರು, ಪ್ರಾಣಿ ಪ್ರಿಯರು ಹಾಗೂ ಪಾಲಿಕೆ ಸದಸ್ಯರು ಸಹಕರಿಸಬೇಕು. ಎನ್‌ಜಿಒಗಳು ನಾಯಿಗಳ ದತ್ತು ಪಡೆಯುತ್ತೇವೆ ಎಂದರೆ ಪಾಲಿಕೆಯಿಂದ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಪಶು ವೈದ್ಯಾಧಿಕಾರಿ ಒಬ್ಬರೇ ಇದ್ದು, ಹುಬ್ಬಳ್ಳಿ, ಧಾರವಾಡಕ್ಕೆ ಇಬ್ಬರು ಪ್ರತ್ಯೇಕ ಪಶು ವೈದ್ಯಾಧಿಕಾರಿಗಳ ನೇಮಕಕ್ಕೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಉಪಮೇಯರ್ ಸಂತೋಷ ಚವ್ಹಾಣ್‌, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಶಿವು ಹಿರೇಮಠ, ಚಂದ್ರಿಕಾ ಮೇಸ್ತ್ರಿ, ಪ್ರೀತಿ ಲದವಾ, ಕವಿತಾ ಕಬ್ಬೇರ ಇದ್ದರು.

ಡಾಗ್‌ ಕ್ಯಾಚರ್ಸ್‌: ಮಹಾನಗರದಲ್ಲಿರುವ ಬಿಡಾಡಿ ದನಗಳಲ್ಲಿ ಶೇ. 90ರಷ್ಟು ದನಗಳು ಖಾಸಗಿ ಅವರದ್ದಾಗಿವೆ. ದನಗಳ ತೆಗೆದುಕೊಂಡು ಹೋಗಲು ಸಹ ಅವರು ಸಹಕಾರ ನೀಡುವುದಿಲ್ಲ. ಅದಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. 15 ದಿನ ಅಥವಾ 1 ತಿಂಗಳು ಅವರಿಗೆ ಕಾಲಾವಕಾಶ ನೀಡಲಾಗುವುದು. ಇದಕ್ಕೆ ಸ್ಪಂದಿಸದಿದ್ದರೆ ಪಾಲಿಕೆ ಕಾರ್ಯಾಚರಣೆ ಮಾಡಲಿದೆ. ಬೀದಿನಾಯಿಗಳ ಸಂಖ್ಯೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. 30ಸಾವಿರ ಇವೆ ಎಂದು ಅಂದಾಜಿಸಲಾಗಿದೆ. ನಾಯಿಗಳ ನಿಯಂತ್ರಣ ಕಷ್ಟದ ಕೆಲಸವಾಗಿದೆ. ಆದ್ದರಿಂದ ಶಸ್ತ್ರಚಿಕಿತ್ಸೆ ದಿನಕ್ಕೆ ನೂರು ಮಾಡಲು ಚಿಂತನೆ ನಡೆದಿದೆ. ಬೀದಿ ನಾಯಿ ಹಾವಳಿ ತಡೆಯಲು ಎಬಿಸಿ (ಆ್ಯನಿಮಲ್‌ ಬರ್ತ್‌ ಕಂಟ್ರೋಲ್‌) ಒಂದೇ ಪರಿಹಾರವಾಗಿದೆ. ಆದ್ದರಿಂದ ಅವಳಿನಗರದಲ್ಲಿ 2-3 ಎಬಿಸಿ ಕೇಂದ್ರಗಳ ಸ್ಥಾಪಿಸಲು ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ನಾಯಿ ಹಿಡಿಯಲು 30 ಡಾಗ್‌ ಕ್ಯಾಚರ್‌ಗಳನ್ನು ಕರೆತರಲಾಗುವುದು ಎಂದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''