ಗಾಂಧಿ ಕೊಂದವನ ಆರಾಧಿಸುವ ಮನಸ್ಥಿತಿ ನಿರ್ಮಾಣ: ಪ್ರೊ.ಬಿ.ಜಯಪ್ರಕಾಶ್‌ಗೌಡ

KannadaprabhaNewsNetwork |  
Published : Dec 15, 2025, 02:30 AM IST
೧೪ಕೆಎಂಎನ್‌ಡಿ-೧ಮದ್ದೂರು ತಾಲೂಕಿನ ಕೆ. ಹೊನ್ನಲಗೆರೆ ಆರ್.ಕೆ.ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಗಾಂಧೀಜಿಯವರ ಬಹುಮುಖ ವ್ಯಕ್ತಿತ್ವ ಮತ್ತು ಚಿಂತನೆಗಳ ಪ್ರಸ್ತುತತೆ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದ ಸಮಾರೋಪದಲ್ಲಿ ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಗಾಂಧಿ ಮಾರ್ಗದಲ್ಲಿ ಸಾಗಿದ ಐವರಿಗೆ ನೊಬೆಲ್ ಪುರಸ್ಕಾರ ದೊರಕಿರುವುದೇ ಇದಕ್ಕೆ ಸಾಕ್ಷಿಯಾಗಿದೆ

ಕನ್ನಡಪ್ರಭ ವಾರ್ತೆ ಮದ್ದೂರು

ಗಾಂಧಿ ಕೊಂದವನನ್ನು ಆರಾಧನೆ ಮಾಡುವ ಮನಸ್ಥಿತಿ ಇಂದು ನಿರ್ಮಾಣವಾಗಿದೆ. ಇದು ನೈತಿಕ ಅಧಃಪತನದ ಸಂಕೇತ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಹಾಗೂ ಸಾಹಿತಿ ಪ್ರೊ.ಬಿ.ಜಯಪ್ರಕಾಶ್‌ಗೌಡ ಹೇಳಿದರು.

ತಾಲೂಕಿನ ಕೆ. ಹೊನ್ನಲಗೆರೆ ಆರ್.ಕೆ.ಎಜುಕೇಷನಲ್ ಇನ್‌ಸ್ಟಿಟ್ಯೂಷನ್, ಆರ್.ಕೆ.ಪ್ರಥಮ ದರ್ಜೆ ಕಾಲೇಜು ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಬಹುರೂಪಿ ಗಾಂಧಿ- ಗಾಂಧೀಜಿ ಅವರ ಬಹುಮುಖಿ ವ್ಯಕ್ತಿತ್ವ ಮತ್ತು ಚಿಂತನೆಗಳ ಪ್ರಸ್ತುತತೆ ಕುರಿತು ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದಿನ ಯುವ ಜನಾಂಗ ಒಳ್ಳೆಯ ವಿಚಾರಗಳಿಗಿಂತಲೂ ಕೆಟ್ಟ ವಿಚಾರಗಳಿಗೆ ಬಹಳ ಬೇಗ ಪ್ರೇರೇಪಿತರಾಗುತ್ತಿದ್ದಾರೆ. ಕೆಟ್ಟದ್ದನ್ನು ಆರಾಧಿಸುವ, ಕೊಲೆಗಡುಕರನ್ನು ಪೂಜಿಸುವ ಮಟ್ಟಕ್ಕೆ ನೈತಿಕ ಅಧಃಪತನ ಸ್ಥಿತಿ ತಲುಪಿದ್ದೇವೆ. ಅವಕಾಶವಾದಿತನದಿಂದಾಗಿ ಭೌತಿಕ ಅನುಕೂಲಕ್ಕಾಗಿ ಪ್ರಶ್ನೆ ಮಾಡುವ ಮನಸ್ಥಿತಿ ಕಳೆದುಕೊಂಡಿದ್ದೇವೆ. ಗುಲಾಮಿ ರಕ್ತ ಹರಿಯುತ್ತಿದೆ ಎಂದು ವಿಷಾದಿಸಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಅವರು ಮಾತನಾಡಿ, ಈ ವಿಚಾರ ಸಂಕಿರಣದಿಂದ ಬಹು ಮುಖ್ಯವಾಗಿ ನಾವೆಲ್ಲರೂ ಕಲಿಯಬೇಕಾದ ಅಂಶಗಳೆಂದರೆ ತಾಳ್ಮೆ, ಸಹನೆ, ಸಹಿಷ್ಣುತೆ. ಪ್ರತಿಯೊಬ್ಬರೂ ನೆಮ್ಮದಿ ಜೀವನ ನಡೆಸಲು ಇವು ಬಹಳ ಮುಖ್ಯ ಎಂದರು.

ಗಾಂಧಿ ನಮ್ಮೆಲ್ಲರಿಗೂ ಮಾದರಿ ನಿರ್ಮಾಣ ಮಾಡಿಹೋಗಿದ್ದಾರೆ. ಗಾಂಧಿ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಕಿಡಿಗೇಡಿಗಳ ಅಪಪ್ರಚಾರವೂ ನಡೆದಿದೆ. ಎಲ್ಲರ ಮೆದುಳು ಕೂಡ ಕೆಟ್ಟಿವೆ. ವಿದ್ಯಾವಂತರಾಗಿದ್ದೇವೆ. ಆದರೆ ವಿಕಾಸವಾಗುತ್ತಿಲ್ಲ. ಶಿಕ್ಷೆ ಇಲ್ಲದ ಶಿಕ್ಷಣದಿಂದ ಸುಧಾರಣೆಯಾಗುವುದಿಲ್ಲ. ಶಿಕ್ಷೆಯಿಂದ ಮಾತ್ರ ಸುಧಾರಣೆ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಆರ್.ಕೆ.ವಿದ್ಯಾಸಂಸ್ಥೆ ಸಂಸ್ಥಾಪಕ ಬಿ.ರಾಮಕೃಷ್ಣ ಮಾತನಾಡಿ, ಎರಡು ದಿನಗಳ ಕಾರ್ಯಕ್ರಮದಲ್ಲಿ ಗಾಂಧಿ ಕುರಿತು ಗಣ್ಯರು ನೀಡಿದ ಉಪನ್ಯಾಸಗಳನ್ನು ಎಲ್ಲರೂ ಮೆಲುಕು ಹಾಕಬೇಕು. ಯಾರು ಇರಲಿ, ಬಿಡಲಿ ಗಾಂಧಿ ಅವರ ತತ್ವಾದರ್ಶಗಳ ಪ್ರಸರಣೆ ನಿರಂತರವಾಗಿ ಜರುಗಬೇಕು. ಇದಕ್ಕಾಗಿ ಶಿಕ್ಷಕರು ಮುಂದಾಗಬೇಕು ಎಂದರು.

ನೊಬೆಲ್ ಪ್ರಶಸ್ತಿಗೂ ಮಿಗಿಲಾದ ಗಾಂಧಿ:

ಗಾಂಧೀಜಿ ನೊಬೆಲ್ ಪ್ರಶಸ್ತಿಗೂ ಮೀರಿ ನಿಂತವರು ಎಂದು ಪತ್ರಕರ್ತ ರವೀಂದ್ರ ಭಟ್ ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಗಾಂಧಿ ಮಾರ್ಗದಲ್ಲಿ ಸಾಗಿದ ಐವರಿಗೆ ನೊಬೆಲ್ ಪುರಸ್ಕಾರ ದೊರಕಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು. ಗಾಂಧಿ ಹಿಂದೂ ಧರ್ಮದವರಾಗಿದ್ದರೂ ಕೂಡ ಎಲ್ಲಾ ಧರ್ಮದ ಜನರನ್ನು ಸಮಾನವಾಗಿ ಕಾಣುವ ಸಹಿಷ್ಣುವಾಗಿದ್ದರು. ಹಾಗಾಗಿ ಅವರು ಮಹಾತ್ಮರಾಗಲು ಕಾರಣವಾಯಿತು ಎಂದು ಹೇಳಿದರು.

ಪತ್ರಕರ್ತ ರವೀಂದ್ರ ಭಟ್, ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕಿ ಡಾ. ಎಂ.ಬಿ. ಪ್ರಮೀಳಾ, ವಿನ್ಯಾಸಕ ಪ್ರಕಾಶ್ ಚಿಕ್ಕಪಾಳ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರದಿಂದ ಯಲ್ಲಮ್ಮನಗುಡ್ಡಕ್ಕೆ ₹118 ಅನುದಾನ
ಮಡಿಕೇರಿಯ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಶಿಕ್ಷಕರ ಸಹಪಠ್ಯ ಸ್ಪರ್ಧಾ ಕಾರ್ಯಕ್ರಮ