ಪ್ರತಿಭೆ ಪ್ರದರ್ಶಿಸಿದರೆ ಮಕ್ಕಳ ಪ್ರೋತ್ಸಾಹಿಸಲು ವೇದಿಕೆ ಸೃಷ್ಟಿ

KannadaprabhaNewsNetwork | Published : Dec 7, 2024 12:33 AM

ಸಾರಾಂಶ

ಗುಂಡ್ಲುಪೇಟೆ ಮದ್ದಾನೇಶ್ವರ ವಿದ್ಯಾಸಂಸ್ಥೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವವನ್ನು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಮಕ್ಕಳ ಪ್ರತಿಭೆ ಪ್ರದರ್ಶನ ಮಾಡಿದರೆ ಪ್ರೋತ್ಸಾಹಿಸಲು ವೇದಿಕೆ ಸೃಷ್ಟಿಸಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ಪಟ್ಟಣದ ಮದ್ದಾನೇಶ್ವರ ವಿದ್ಯಾಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಪ್ರತಿಭೆಗಳಿವೆ. ಪ್ರತಿಭೆಗಳ ಹೊರ ತರುವ ಕೆಲಸ ಶಿಕ್ಷಕರು ಮಾಡಬೇಕು. ಜೊತೆಗೆ ಮಕ್ಕಳು ಪ್ರತಿಭೆ ಪ್ರದರ್ಶಿಸಿದರೆ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ನಾನು ಪ್ರಯತ್ನಿಸುವುದಾಗಿ ಹೇಳಿದರು.

ಪ್ರತಿ ವರ್ಷ ಪಟ್ಟಣದಲ್ಲಿ ವಿದ್ಯಾ ಗಣಪತಿ ಸೇವಾ ಸಮಿತಿ ನಡೆಸುವ ಕಾರ್ಯಕ್ರಮದಲ್ಲಿ ಒಂದು ದಿನ ಮಕ್ಕಳ ಪ್ರತಿಭೆ ಪ್ರದರ್ಶಿಸಲು ಅವಕಾಶವನ್ನು ಸಂಗಮ ಟ್ರಸ್ಟ್‌ ಕಲ್ಪಿಸಲಿದೆ ಎಂದು ಭರವಸೆ ನೀಡಿದರು. ಯಾವುದೇ ತರಬೇತಿ ಇಲ್ಲದೆಯೂ ತಾಲೂಕಿನ ಚಿನ್ನಿಕಟ್ಟೆ ಸೋಲಿಗರ ಹುಡುಗರು ಅಂತಾರಾಜ್ಯ ವಾಲಿಬಾಲ್‌ನಲ್ಲಿ ಆಡುತ್ತಿದ್ದಾರೆ ಇದು ಪ್ರತಿಭೆಯಲ್ಲವೇ ಇದು ತಾಲೂಕಿನ ವಿಶೇಷ ಎಂದರು. ತಾಲೂಕಿನ ದೇಪಾಪುರದ ಮೌಲ್ಯ ಎಂಬ ಯುವತಿ ಸೇನೆ ಸೇರಿದ್ದಾರೆ. ಇದು ಕೂಡ ತಾಲೂಕಿಗೆ ಹೆಮ್ಮೆ. ಇನ್ನೋರ್ವಳು ವಿದ್ಯಾರ್ಥಿನಿ ಸರಿಗಮಪದಲ್ಲಿ ಭಾಗವಹಿಸಿದ್ದಾರೆ ಇಬ್ಬರಿಗೂ ಅಭಿನಂದನೆ ಎಂದರು.

೭ ಬಾರಿ ಗೆದ್ದ ಅಮ್ಮ: ತಾಲೂಕಿನ ಮತ್ತೊಂದು ವೈಶಿಷ್ಟ್ಯ ಏನಂದರೆ ತಾಲೂಕಿನ ಕೆ.ಎಸ್.ನಾಗರತ್ನಮ್ಮ ಏಳು ಬಾರಿ ಶಾಸಕರಾಗಿದ್ದರು. ಸಚಿವರು, ಸಭಾಪತಿ, ವಿಪಕ್ಷ ನಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದರು. ನಾಡಿನ ಜನತೆಗೆ ಬೋರ್‌ವೆಲ್‌ ಮೂಲಕ ನೀರು ಕುಡಿಸಿದ ಅಬ್ದುಲ್‌ ನಜೀರ್‌ ಸಾಬ್‌ ಕೂಡ ಗುಂಡ್ಲುಪೇಟೆ ನಿವಾಸಿಯೇ ಎಂಬುದು ಮತ್ತೊಂದು ವಿಶೇಷ. ಹಾಗಾಗಿ ತಾಲೂಕಿನ ಮಕ್ಕಳು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಬೇಕು ಎಂದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಕಿರಣ್‌ ಗೌಡ, ಉಪಾಧ್ಯಕ್ಷೆ ಹೀನಾ ಕೌಸರ್‌, ಬಿಇಒ ಟಿ.ಆರ್.ಸ್ವಾಮಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಎಸ್.ಪ್ರಸಾದ್‌, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸತೀಶ್‌, ಟಿಪಿಒ ಚಿಕ್ಕಮಲ್ಲಪ್ಪ, ಬಿಆರ್‌ಸಿ ಡಾ.ಸರೋಜಮ್ಮ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿದ್ದರು.

Share this article