ಗದಗ: ರೈತರಿಗೆ ಶೋಷಣೆ ಮುಕ್ತ ಬದುಕು ನಿರ್ಮಾಣವಾಗಬೇಕು, ಅಂದಾಗ ಮಾತ್ರ ಅವರು ನೆಮ್ಮದಿ ಜೀವನ ಸಾಗಿಸಲು ಸಾಧ್ಯ ಎನ್ನುವುದು ನನ್ನ ತಂದೆಯವರಾದ ಕೆ.ಎಚ್. ಪಾಟೀಲ ಅವರ ಕನಸಾಗಿತ್ತು. ಅದನ್ನು ನನಸು ಮಾಡುವಲ್ಲಿ ನಾವೆಲ್ಲಾ ಇನ್ನು ಶ್ರಮಿಸಬೇಕಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ದುಡಿಯುವ ವರ್ಗದ ಕಲ್ಯಾಣ ಆಗಬೇಕು ಎನ್ನುವುದನ್ನು ಅತ್ಯಂತ ಗಟ್ಟಿಯಾಗಿ ಪ್ರತಿಪಾದಿಸಿದ್ದ ಅವರು, ಅವರ ಮಾಡಿದ ನಿರಂತರ ಹೋರಾಟದ ಫಲವಾಗಿಯೇ ರಾಜ್ಯದಲ್ಲಿ ಎಪಿಎಂಸಿಗಳು ಮತ್ತು ಅದಕ್ಕೆ ಉತ್ತಮವಾದ ಕಾಯಿದೆಗಳು ಜಾರಿಗೆ ಬಂದಿದ್ದವು ಎಂದು ಸ್ಮರಿಸಿದರು.
ಸಮಾಜದಲ್ಲಿರುವ ಅತ್ಯಂತ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎನ್ನುವುದನ್ನು ಪ್ರತಿಪಾದಿಸುತ್ತಿದ್ದ ಅವರು, ಶೋಷಣೆಮುಕ್ತ ಬದುಕು ಎಲ್ಲರದ್ದಾಗಬೇಕು ಎನ್ನುತ್ತಿದ್ದರು. ಅವರು ಅಂದು ಕಂಡಿದ್ದ ಕನಸುಗಳು ಮತ್ತು ಹಾಕಿ ಕೊಟ್ಟಿರುವ ಯೋಜನೆಗಳನ್ನು ಪೂರ್ಣಗೊಳಿಸಲು ನಮಗೆ ಇನ್ನೊಂದು ಜನ್ಮ ಬೇಕಾಗುತ್ತದೆ. ಅಷ್ಟೊಂದು ಕನಸು ಮತ್ತು ದೂರ ದೃಷ್ಟಿಯನ್ನು ಹೊಂದಿದ್ದರು ಎಂದು ತಮ್ಮ ತಂದೆಯವರ ಕಾರ್ಯ ವೈಖರಿಯನ್ನು ಸ್ಮರಿಸಿದರು.ಇದರೊಟ್ಟಿಗೆ ವೇದಿಕೆಯಲ್ಲಿಯೇ ತಮ್ಮ ತಂದೆಯವರ ಕಾರ್ಯವೈಖರಿಯನ್ನು ಶ್ಲಾಘಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಕೃತಜ್ಞತೆ ಸಲ್ಲಿಸಿದರು.