ಹರಿಹರ: ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಬೀಸುತ್ತಿರುವ ಬಿರುಗಾಳಿಯಿಂದ ದೇಶವನ್ನು ರಕ್ಷಿಸುವ ಅಗತ್ಯ ಈಗ ಎದುರಾಗಿದೆ ಎಂದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿದರು.
ಪರಸ್ಪರ ಬಳಗ, ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಬಂಡಾಯ ಸಾಹಿತ್ಯ ಸಂಘಟನೆ, ಚಿಂತನ ಬಳಗ, ನಕ್ಷತ್ರ ಟಿವಿ ಬಳಗ, ಸಾಹಿತ್ಯ ಸಂಗಮ ಮತ್ತು ಕರ್ನಾಟಕ ಜಾನಪದ ಪರಿಷತ್ತಿನಿಂದ ನಗರದ ರಚನಾ ಕ್ರೀಡಾ ಟ್ರಸ್ಟ್‌ನಲ್ಲಿ ಆಯೋಜಿಸಿದ್ದ ಕರ್ನಾಟಕ, ಕನ್ನಡ, ಸಂವಿಧಾನ ಕುರಿತು ಚಿಂತನೆ, ಕನ್ನಡ ನಾಡು, ನುಡಿ ಕುರಿತು ಕವಿಗೋಷ್ಠಿ, ಅಂಬೇಡ್ಕರ್ ಮತ್ತು ಸಂವಿಧಾನ ಕುರಿತು ಗೀತ ಗಾಯನ ಕರ್ನಾಟಕ ಸುವರ್ಣ ಸಂಭ್ರಮದಲ್ಲಿ ಭಾರತೀಯ ಸಂವಿಧಾನದ ಅಂತರಂಗ ಮತ್ತು ಬಹಿರಂಗ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.ಹಿಜಾಬ್ ವಿವಾದ, ಅಸ್ಪೃಶ್ಯತೆ, ದಬ್ಬಾಳಿಕೆ, ಶೋಷಣೆ, ಸಾಮಾಜಿಕ ಅಸಮಾನತೆ, ಸಿಗದ ಸಮಾನ ಅವಕಾಶ, ಶೇ.4ರಷ್ಟು ಇರುವ ಜನಾಂಗದವರಿಗೆ ಶೇ.10ರಷ್ಟು ಮೀಸಲಾಯತಿಯನ್ನು ಯಾರೂ ಕೇಳದಿದ್ದರೂ ನೀಡಿರುವುದು, ಜಾರಿಯಾಗದ ಜಸ್ಟಿಸ್ ಸಾಚಾರ್ ಆಯೋಗದ ವರದಿ, ದುರುದ್ದೇಶ ಪೂರಿತ ಜಾತಿ ಸಮೀಕ್ಷೆಗಳು, ಹಿಂದಿ ಭಾಷೆ ಹೇರಿಕೆ ಹೀಗೆ ವಿವಿಧ ಆಯಾಮಗಳಿಂದ ಬಿರುಗಾಳಿಯಂತೆ ದೇಶವನ್ನು ನಲುಗಿಸಲಾಗುತ್ತಿದೆ.
ಅಂಬೇಡ್ಕರ್ ನೀಡಿದ ಮೂರು ಮಂತ್ರಗಳಾದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಬಿರುಗಾಳಿಗಳನ್ನು ತಡೆಯಬೇಕಿದೆ. ಇಲ್ಲಿ ಶಿಕ್ಷಣ ಎಂದರೆ ಅಕ್ಷರ ಅಭ್ಯಾಸ ಮಾತ್ರ ಅಲ್ಲ, ಸಾಂಸ್ಕೃತಿಕ ಮತ್ತು ವೈಚಾರಿಕವಾಗಿಯೂ ಶಿಕ್ಷಣ ನೀಡಬೇಕು, ಆ ಮೂಲಕ ಭಾರತೀಯರು ಪ್ರಬುದ್ಧ ಶಿಕ್ಷಣವಂತರಾಗಬೇಕು. ಸಾಮಾಜಿಕವಾಗಿ ಎಲ್ಲರೂ ಪ್ರಜಾಸತ್ತಾತ್ಮಕವಾಗಿ ಸಂಘಟಿತರಾಗಬೇಕು, ಪಾಲ್ಗೊಳ್ಳಬೇಕು, ತೀವ್ರತೆಯೊಂದಿಗೆ ಹೋರಾಡಿ ಆದರೆ ಹೋರಾಟ ಸಂವಿಧಾನಾತ್ಮಕವಾಗಿರಲಿ ಎಂದರು.ಸಾಹಿತಿ ಪ್ರೊ.ಎಚ್.ಎ.ಭಿಕ್ಷಾವರ್ತಿಮಠ ಅಧ್ಯಕ್ಷತೆವಹಿಸಿದ್ದರು. ಸಾಹಿತಿ ಪ್ರೊ.ಸಿ.ವಿ.ಪಾಟೀಲ್ ವಿಷಯ ಪ್ರವೇಶ ಮಾಡಿದರು. ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎನ್.ರುದ್ರಮುನಿ, ಹಿರಿಯ ಕ್ರೀಡಾಪಟು ಎಚ್.ನಿಜಗುಣ, ಪತ್ರಕರ್ತ ಟಿ.ಇನಾಯತ್ ಉಲ್ಲಾ, ಹರಪನಹಳ್ಳಿ ಪ್ರಾಚಾರ್ಯ ಎಚ್.ಮಲ್ಲಿಕಾರ್ಜುನ, ಎ.ರಿಯಾಜ್ ಅಹ್ಮದ್, ಎಚ್.ನಿಜಗುಣ, ಬಿ.ಬಿ.ರೇವಣನಾಯ್ಕ್, ವಿ.ಬಿ.ಕೊಟ್ರೇಶ್, ಈಶಪ್ಪ ಬೂದಿಹಾಳ್ ಮಾತನಾಡಿದರು.
ಬಂಡಾಯ ಕವಿ ಜೆ.ಕಲೀಂಬಾಷಾ ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಟಿಯಲ್ಲಿ ಕವಿಗಳಾದ ಎಸ್.ಎಚ್.ಹೂಗಾರ್, ಹುಲಿಕಟ್ಟಿ ಚನ್ನಬಸಪ್ಪ, ಸುಬ್ರಹ್ಮಣ್ಯ ನಾಡಿಗೇರ್, ಜೆ.ವಸುಪಾಲಪ್ಪ, ಮಲ್ಲಿಕಾರ್ಜುನ ಅಣಜಿಮಠ, ಡಾ.ವೀಣಾ ಪಿ., ರತ್ನವ್ವ ಸಾಲಿಮಠ, ಎ.ಬಿ.ಮಂಜಮ್ಮ, ವಿವೇಕಾನಂದಸ್ವಾಮಿ, ಬಿ.ಮಗ್ದುಂ, ಅಶ್ಫಾಖ್ ಅಹ್ಮದ್, ವಿ.ಬಿ.ಕೊಟ್ರೇಶ್, ಗಂಗಾಧರ ಬಿ.ಎಲ್.ನಿಟ್ಟೂರು, ಎ.ಸಿ.ಮಂಜಪ್ಪ, ಪ್ರವೀಣ ಎಂ.ಬಿ.ಕವನ ವಾಚನ ಮಾಡಿದರು.