ಬ್ಯಾಡಗಿ:ಕೃಷಿ ಚಟುವಟಿಕೆ ಮೇಲಿನ ವೆಚ್ಚ ಸರಿದೂಗಿಸಲು ರೈತರು ಉಪಕಸಬುಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆಗೆ ದೇಶದ ಕೃಷಿ ವ್ಯವಸ್ಥೆ ಬಂದು ತಲುಪಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.
ಕೃಷಿ ಮೇಲಿನ ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗಿದೆ. ಅಷ್ಟಕ್ಕೂ ಕೃಷಿ ಲಾಭದಾಯಕ ಎನಿಸದಿದ್ದರೇ ಇದಕ್ಕಾಗಿ ಹೈನುಗಾರಿಕೆ, ಕುರಿ, ಕೋಳಿ, ಎರೆಹುಳು, ದೇಶಿತಳಿ ಹಸುಗಳು ಸಾಕಾಣಿಕೆ ಸೇರಿದಂತೆ ಇನ್ನಿತರ ಉಪಕ್ರಮಗಳನ್ನು ಅನಿವಾರ್ಯವಾಗಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ದೇಶದ ಕೃಷಿ ವಿಭಿನ್ನ:ವಿಶ್ವದ ಇನ್ನಿತರ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ದೇಶದ ಕೃಷಿ ಪದ್ಧತಿ ವಿಭಿನ್ನವಾಗಿದೆ, ಇಲ್ಲಿ ಭೂಮಿಯನ್ನು ದೇವರು ಮತ್ತು ತಾಯಿಗೆ ಹೋಲಿಸಲಾಗುತ್ತಿದ್ದು ಕೃಷಿಭೂಮಿಗಳ ಜೊತೆ ರೈತರು ಭಾವನಾತ್ಮಕ ಸಂಬಂಧಗಳನ್ನು ಕಲ್ಪಿಸಲಾಗುತ್ತಿದೆ, ಇಂತಹ ವಾತಾವರಣದಲ್ಲಿ ನಾವು ಸಾಂಪ್ರದಾಯಿಕ ಕೃಷಿ ಪದ್ಧತಿಗಳಿಂದ ಕೃಷಿಯನ್ನು ಲಾಭದಾಯಕ ಮಾಡುವುದು ಕಷ್ಟಸಾಧ್ಯವಾಗಿದ್ದು, ಎಂದಿನಂತೆ ಕಡ್ಡಾಯವಾಗಿ ಗೋಮಾತೆಗಳನ್ನು ಸಾಕುವುದು ಅವುಗಳಿಂದ ಬರುವಂತಹ ಆದಾಯದಲ್ಲಿ ಕೃಷಿ ವೆಚ್ಚಕ್ಕೆ ಸರಿದೂಗಿಸಿಕೊಳ್ಳುವಂತೆ ಸಲಹೆ ನೀಡಿದರು.ಸ್ಪರ್ಧಾತ್ಮಕವಾಗುವ ಉದ್ದೇಶ: ರಾಣಿಬೆನ್ನೂರಿನ ಪಶುಪಾಲನ ನಿರ್ದೇಶಕ ಡಾ. ನೀಲಕಂಠ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಪರ್ಧೆಯಲ್ಲಿ ಎಲ್ಲರೂ ಪಾಲ್ಗೊಳ್ಳಲಿ ಹಾಗೂ ಆಕಳು ಎಮ್ಮೆಗಳನ್ನು ಯಾರೂ ಚೆನ್ನಾಗಿ ಸಾಕಿದ್ದಾರೆ. ಯಾವ ರೀತಿ ಸಾಕಾಣಿಕೆ ಮಾಡಿದ್ದಾರೆ ಉತ್ಪಾದನೆ ಜಾಸ್ತಿ ಆಗುವ ನಿಟ್ಟಿನಲ್ಲಿ ಅನುಸರಿಸುತ್ತಿರುವ ಕ್ರಮಗಳೇನು..? ಇನ್ನಿತರ ವಿಷಯಗಳು ಒಬ್ಬರಿಗೊಬ್ಬರು ಬಂದಾಗ ಚರ್ಚೆ ಮಾಡುವುದರ ಮೂಲಕ ರೈತರಿಗೆ ಉಚಿತವಾಗಿ ಉಪಯುಕ್ತ ಮಾಹಿತಿಯೊಂದು ಸಿಗಲಿದ್ದು ಹೀಗಾಗಿ ಜಿಲ್ಲಾ ಮಿಶ್ರತಳಿ ಹಸುಗಳ ಹಾಲು ಕರೆಯುವ ಸ್ಪರ್ಧೆಯನ್ನು ಆಯೋಜಿಸುವ ಹಿಂದಿನ ಉದ್ದೇಶವಾಗಿದೆ ಎಂದರು.
2 ವರ್ಷಕ್ಕೊಮ್ಮೆ ಗರ್ಭಧರಿಸುವಂತೆ ನೋಡಿಕೊಳ್ಳಿ:ಹಸುಗಳಿಗೆ ಒಣ ಮೇವಿಗಿಂತ ಹಸಿರು ಮೇವಿನ ಆಹಾರ ಉತ್ತಮ. ಅದರೊಟ್ಟಿಗೆ ಖನಿಜ ಮಿಶ್ರಿತ ಸಮತೋಲನ ಆಹಾರವನ್ನು ಕೊಡಬೇಕು, ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯುವುದರೊಂದಿಗೆ ಹಾಲು ಉತ್ಪಾದನೆ ಕೂಡ ಹೆಚ್ಚಿಗೆ ಆಗಬೇಕು, ಇದರಿಂದ ರೈತರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಸುಧಾರಿಸಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದಕ್ಕೂ ಮುನ್ನ ಗೋವುಗಳಿಗೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಬಸವರಾಜ ಶಿವಣ್ಣನವರ ಜಾನುವಾರು ಪ್ರದರ್ಶನಕ್ಕೆ ಚಾಲನೆ ನೀಡಿದರು. ಮಲ್ಲೂರ ಗ್ರಾಪಂ.ಉಪಾಧ್ಯಕ್ಷೆ ರೂಪ ಕಾಟೀನಹಳ್ಳಿ, ಸದಸ್ಯ ಎಂ.ಜಿ. ಪಾಟೀಲ, ಮುಖಂಡರಾದ ದಾನಪ್ಪ ಚೂರಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತಿ, ಗ್ಯಾರಂಟಿ ಯೋಜನೆಗಳ ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ಲಿಂಗರಾಜು ಕುಮ್ಮೂರ, ಕುಮಾರ ಪೂಜಾರ, ಎನ್.ಜಿ. ಪಾಟೀಲ, ನ್ಯಾಯವಾದಿ ಸುರೇಶ ಗುಂಡಪ್ಪನವರ, ಡಾ.ಎನ್.ಎಸ್. ಚೌಡಾಳ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ನಾಗರಾಜ ಬಣಕಾರ ಸ್ವಾಗತಿಸಿದರು. ಶಿಕ್ಷಕ ಎಂ.ಎಫ್. ಕರಿಯಣ್ಣನವರ ನಿರೂಪಿಸಿ ವಂದಿಸಿದರು.