ಕನ್ನಡಪ್ರಭ- ಚಿತ್ರಕಲಾ ಪರಿಷತ್ ನ ಆಶ್ರಯದಲ್ಲಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಉದ್ಘಾಟನೆ
ನಮ್ಮ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ದೈಹಿಕ ಬೆಳವಣಿಗೆ ಜತೆಗೆ ಸೃಜನಶೀಲತೆ ಹಾಗೂ ಭಾಷಾ ಬೆಳವಣಿಗೆಯೂ ಬಹಳ ಮುಖ್ಯವಾಗಿರುತ್ತದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ ತಿಳಿಸಿದರು.
ಗುರುವಾರ ಬಸ್ತಿಮಠದ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಭಗವಾನ್ ಶ್ರೀ 1008 ಚಂದ್ರಪ್ರಭ ಚಾರಿಟಬಲ್ ಟ್ರಸ್ಟ್, ಸಿಂಹನಗದ್ದೆ ಬಸ್ತಿಮಠದ ಸಹಕಾರದೊಂದಿಗೆ ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ಹಾಗೂ ಕಸಾಪ ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್ ಪ್ರಾಯೋಜಕತ್ವದಲ್ಲಿ ಕನ್ನಡಪ್ರಭ - ರಾಜ್ಯ ಚಿತ್ರಕಲಾ ಪರಿಷತ್ ತಾಲೂಕುಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.ಮಕ್ಕಳು ಸಮಕಾಲೀನ ವಿಚಾರ ತಿಳಿಯಲು, ಜ್ಞಾನಾರ್ಜನೆಗೆ ಪ್ರತಿ ದಿನ ಕನ್ನಡ ದಿನ ಪತ್ರಿಕೆ ಓದುವ ಅಭ್ಯಾಸ ಮಾಡಬೇಕು. ಬಹಳ ವರ್ಷಗಳಿಂದಲೂ ಕನ್ನಡಪ್ರಭ ದಿನಪತ್ರಿಕೆ ಅತ್ಯುತ್ತಮ ಸುದ್ದಿ ನೀಡುತ್ತಿದೆ. ಈ ವರ್ಷ ಮಕ್ಕಳಿಗಾಗಿ ಚಿತ್ರ ಕಲಾ ಸ್ಪರ್ಧೆ ಏರ್ಪಡಿಸಿದೆ. ಮನುಷ್ಯ ಹಾಗೂ ಪ್ರಾಣಿಗಳ ನಡುವೆ ಸಂಘರ್ಷ ಹೆಚ್ಚಾಗಿ ನಡೆಯುತ್ತಿದೆ. ಮಲೆನಾಡು ಭಾಗದಲ್ಲಿ ಪರಿಸರ ಉತ್ತಮವಾಗಿದೆ. ಆದರೆ, ಕಾಡಾನೆ, ಹುಲಿಗಳ ಕಾಟದಿಂದ ಜನರು ಭಯ ಭೀತರಾಗಿದ್ದಾರೆ. ಅರಣ್ಯದ ಬಗ್ಗೆ, ವನ್ಯ ಜೀವಿಗಳ ಬಗ್ಗೆ ಮಕ್ಕಳು ಉತ್ತಮ ಚಿತ್ರ ಬರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿದ್ದ ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ, ಈ ಹಿಂದೆ ಖಾದ್ರಿ ಶಾಮಣ್ಣ ಕನ್ನಡಪ್ರಭದ ಸಂಪಾದಕರಾಗಿದ್ದ ಕಾಲದಲ್ಲಿ ಸರ್ಕಾರದ ತಪ್ಪುಗಳನ್ನು ತಮ್ಮ ಸಂಪಾದಕೀಯದಲ್ಲಿ ಬರೆದು ಎಚ್ಚರಿಸುತ್ತಿದ್ದರು. ಮಕ್ಕಳಿಗೆ ಕಲೆ ಎಂಬುದು ದೈವದತ್ತವಾಗಿ ಬಂದಿದೆ. ಇದನ್ನು ಕನ್ನಡಪ್ರಭ- ಚಿತ್ರಕಲಾ ಪರಿಷತ್ ಗುರುತಿಸಿ ಸ್ಪರ್ಧೆ ಏರ್ಪಡಿಸಿ ಪ್ರೋತ್ಸಾಹ ನೀಡುತ್ತಿದೆ. ಇತ್ತೀಚಿನ ಸರ್ಕಾರ ಮನುಷ್ಯರಿಗಿಂತ ಕಾಡು ಪ್ರಾಣಿಗಳಿಗೆ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ವಿಷಾದಕರ. ಮಲೆನಾಡು ಭಾಗದಲ್ಲಿ ಕಾಡಾನೆ, ಕಾಡುಕೋಣದ ಕಾಟದಿಂದ ಬೆಳೆ ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಜೊತೆಗೆ ಅರಣ್ಯ ಇಲಾಖೆಯವರು ಸಹಜ ಕಾಡಿನಲ್ಲಿ ಅಕೇಶಿಯಾ ಪ್ಲಾಂಟೇಷನ್ ಜಾಸ್ತಿ ಮಾಡಿದ್ದರಿಂದ ಸಹಜ ಅರಣ್ಯ ಕಡಿಮೆ ಯಾಗಿದೆ. ಪಶ್ಛಿಮ ಘಟ್ಟದಲ್ಲಿ ಕಾಳಿಂಗ ಸರ್ಪದ ಸಂತತಿ ಜಾಸ್ತಿಯಾಗಲು ಕೆಲವರು ಕೃತಕವಾಗಿ ಕಾಳಿಂಗ ಸರ್ಪದ ಮೊಟ್ಟೆಯನ್ನು ಪೋಷಣೆ ಮಾಡಿದ್ದಾರೆ. ಇದರಿಂದ ಕಾಳಿಂಗ ಸರ್ಪ ಜಾಸ್ತಿಯಾಗಿ ಮನೆ, ಮನೆಗಳಿಗೆ ಕಾಳಿಂಗ ಹಾವು ನುಗ್ಗಲು ಕಾರಣವಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಕಡಿವಾಣ ಹಾಕಿದೆ ಎಂದರು.ಅತಿಥಿಯಾಗಿದ್ದ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಮಕ್ಕಳಲ್ಲಿ ಯಾವ ಪ್ರತಿಭೆ ಇದೆ ಎಂಬುದನ್ನು ಪೋಷಕರು, ಶಿಕ್ಷಕರು ಗುರುತಿಸಿ ಪ್ರೋತ್ಸಾಹ ನೀಡಬೇಕು.ಚಿತ್ರಕಲೆಯಲ್ಲಿ ಪರಿಣಿತಿ ಪಡೆದ ಅನೇಕ ವಿದ್ಯಾರ್ಥಿ ಗಳಿದ್ದು ಅವರನ್ನು ಪ್ರೋತ್ಸಾಹಿಸಬೇಕಾಗಿದೆ. ರಾಜ್ಯ ಚಿತ್ರಕಲಾ ಪರಿಷತ್ ಗೆ ಚಿಕ್ಕಮಗಳೂರಿನ ಜಿಲ್ಲೆಯವರಾದ ಬಿ.ಎಲ್.ಶಂಕರ್ ಅಧ್ಯಕ್ಷರಾಗಿದ್ದಾರೆ. ಚಿತ್ರಕಲೆಯಲ್ಲಿ ಆಸಕ್ತಿ ಇರುವ ಮಕ್ಕಳು ಚಿತ್ರಕಲೆ ಬಗ್ಗೆ ಸೂಕ್ತ ತರಬೇತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ ಸಹ ಶಿಕ್ಷಕ ಗುಣಪಾಲ್ ಜೈನ್ ಮಾತನಾಡಿ, ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಿ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು.ಆಗಿನ ಕಾಲದ ಮಕ್ಕಳಿಗೂ ಈಗಿನ ಕಾಲದ ಮಕ್ಕಳಿಗೂ ಕಲಿಕೆಯಲ್ಲಿ ವ್ಯತ್ಯಾಸ ಕಾಣುತ್ತಿದೆ. ಸುಂದರವಾಗಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕನ್ನಡ ಭಾಷೆ ಯನ್ನು ಪ್ರೀತಿಸಿ, ಆಸ್ವಾಧಿಸಬೇಕು. ಕನ್ನಡ ಭಾಷೆಯಲ್ಲಿ ಮಾತನಾಡುವಾಗ ಸಿಗುವ ಸುಖ ಬೇರೆ ಭಾಷೆಯಲ್ಲಿ ಸಿಗುವುದಿಲ್ಲ ಎಂದರು.ಕನ್ನಡಪ್ರಭ ಪತ್ರಿಕೆ ತಾಲೂಕು ವರದಿಗಾರ ಯಡಗೆರೆ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡಪ್ರಭ- ಚಿತ್ರಕಲಾ ಪರಿಷತ್ ಅರಣ್ಯ ಇಲಾಖೆ ಸಹಕಾರದೊಂದಿಗೆ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಚಿತ್ರಕಲಾ ಸ್ಪರ್ಧೆಯಲ್ಲಿ ಇಂದು 8 ಪ್ರೌಢ ಶಾಲೆಗಳ 39 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಇಲ್ಲಿ ಗೆದ್ದವರನ್ನು ಜಿಲ್ಲಾ ಮಟ್ಟ ಸ್ಪರ್ಧೆಗೆ ಕಳಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಗೆದ್ದವರನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳಿಸಲಾಗುವುದು ಎಂದರು.
ಜಯಂತಿ ಪ್ರಾರ್ಥಿಸಿದರು. ಶೆಟ್ಟಿಕೊಪ್ಪ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.ನಂದಿನಿ ಆಲಂದೂರು ವಂದಿಸಿದರು.-- ಬಾಕ್ಸ್ --
ಕನ್ನಡಪ್ರಭ- ಚಿತ್ರಕಲಾ ಪರಿಷತ್ ಅರಣ್ಯ ಇಲಾಖೆ ಸಹಕಾರದೊಂದಿಗೆ ಪ್ರೌಢಶಾಲಾ ಮಕ್ಕಳಿಗಾಗಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ 39 ಮಕ್ಕಳು ಭಾಗವಹಿಸಿದ್ದು ಮೊರಾರ್ಜಿದೇಸಾಯಿ ವಸತಿ ಶಾಲೆ ಕೆ.ವರುಣ್ ಪ್ರಥಮ ಸ್ಥಾನ, ಮೌಲಾನ ಆಜಾದ್ ಮಾಡೆಲ್ ಶಾಲೆ ಸ್ನೇಹ ದ್ವಿತೀಯ, ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ ಕೆ.ಜಿ.ರಶ್ಮಿ ತೃತೀಯ ಸ್ಥಾನ ಪಡೆದರು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಟಿ.ವಿ.ಶ್ರೇಯಾ ಹಾಗೂ ಜೀವನ್ ಜ್ಯೋತಿ ಪ್ರೌಢ ಶಾಲೆ ಜೋಹಾ ಸಮಾಧಾನಕರ ಬಹುಮಾನ ಪಡೆದರು. ತೀರ್ಪುಗಾರರಾಗಿ ಬಿ.ಆರ್. ಜಯಂತಿ, ಅರವಿಂದ್ ಹಾಗೂ ಬಿ.ಜಯಂತಿ ಕಾರ್ಯನಿರ್ವಹಿಸಿದರು.