ಮಹಿಳಾ ಸಾಹಿತಿಗಳಿಗೆ ವಿಷಯದ ಮಿತಿ ಹೇರಿಕೆ ಸಲ್ಲ- ಮಮತಾ ಸಾಗರ

KannadaprabhaNewsNetwork |  
Published : Jul 14, 2026, 02:30 AM IST
ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ನಲ್ಲಿ ಉತ್ತರ ಸಾಹಿತ್ಯ ವೇದಿಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಗಜಲ್-ಕಾವ್ಯ ಗೋಷ್ಠಿಯ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾದ ಹರೀಶ ಮಾಳಪ್ಪನವರ ಅವರನ್ನ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಬದುಕಿಗೂ ಬರವಣಿಗೆಗೂ ಯಾವುದೇ ವ್ಯತ್ಯಾಸವಿಲ್ಲ, ಅದು ಎರಡೂ ಒಂದೇ. ಮಹಿಳೆಯರು ಕೂಡ ಯುದ್ಧದ ಬಗ್ಗೆ, ರಾಜಕೀಯ, ಲೈಂಗಿಕತೆ, ಧರ್ಮ, ದೇಶ ಗಂಡಸರ ಬಗ್ಗೆಯೂ ಬರೆಯಬೇಕು. ಮಹಿಳಾವಾದವನ್ನು ಮಹಿಳೆಯರೆ ನೋಡಿಕೊಳ್ಳುತ್ತಾರೆ ಬಿಡಿ ಎಂಬ ಧೋರಣೆಯನ್ನು ಬಿಟ್ಟುಬಿಡಬೇಕು ಎಂದು ಹಿರಿಯ ಸಾಹಿತಿ ಮಮತಾ ಸಾಗರ ಅವರು ಅಭಿಪ್ರಾಯಪಟ್ಟರು.

ಶಿಗ್ಗಾಂವಿ: ಬದುಕಿಗೂ ಬರವಣಿಗೆಗೂ ಯಾವುದೇ ವ್ಯತ್ಯಾಸವಿಲ್ಲ, ಅದು ಎರಡೂ ಒಂದೇ. ಮಹಿಳೆಯರು ಕೂಡ ಯುದ್ಧದ ಬಗ್ಗೆ, ರಾಜಕೀಯ, ಲೈಂಗಿಕತೆ, ಧರ್ಮ, ದೇಶ ಗಂಡಸರ ಬಗ್ಗೆಯೂ ಬರೆಯಬೇಕು. ಮಹಿಳಾವಾದವನ್ನು ಮಹಿಳೆಯರೆ ನೋಡಿಕೊಳ್ಳುತ್ತಾರೆ ಬಿಡಿ ಎಂಬ ಧೋರಣೆಯನ್ನು ಬಿಟ್ಟುಬಿಡಬೇಕು ಎಂದು ಹಿರಿಯ ಸಾಹಿತಿ ಮಮತಾ ಸಾಗರ ಅವರು ಅಭಿಪ್ರಾಯಪಟ್ಟರು.

ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ನಲ್ಲಿ ಉತ್ತರ ಸಾಹಿತ್ಯ ವೇದಿಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಗಜಲ್-ಕಾವ್ಯ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತಮಾಡಿದ ಅವರು, ಕಾರಣ ಯಾವುದೇ ಇರಬಹುದು, ಜರೂರತ್ತು ಯಾವುದೇ ಇರಬಹುದು, ಮಹಿಳೆಯರು ಮಾತ್ರ ಕವಿತೆ ಬರೆಯುವುದನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ಅವರು ಕಿವಿಮಾತು ಹೇಳಿದರು.

ಮಹಿಳಾವಾದವನ್ನು ನಾವು ಹೇಳಿಕೊಡಬೇಕಾದದ್ದು ಹೆಣ್ಣುಮಕ್ಕಳಿಗೆ ಅಲ್ಲ, ಅದನ್ನು ಮಾಡಬೇಕಾದದ್ದು ಗಂಡುಮಕ್ಕಳಿಗೆ. ಅದು ಚಿಕ್ಕಂದಿನಿಂದಲೇ ಶುರುಹಚ್ಚಿಕೊಳ್ಳಬೇಕಾದ ಕೆಲಸ, ಹೆಣ್ಣಿನ ದೇಹದ ಬಗ್ಗೆ ಅವರಿಗೆ ತಿಳಿ ಹೇಳಬೇಕು, ಅದು ಈಗಾಗಲೇ ತಿಳಿಸಿಕೊಟ್ಟ ರೀತಿಯಲ್ಲಿ ಅಲ್ಲ. ಗಂಡು ಹೆಣ್ಣು ಇಬ್ಬರಿಗೂ ಸಮಾನವಾದ ತಾಕತ್ತಿದೆ ಎಂಬ ಅರಿವನ್ನು ಮೂಡಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ ಎಂದು ತಿಳಿಸಿದರು.

ತಮ್ಮ ಪಾಲಿಗೆ ಕವಿತೆ ವಿಭಿನ್ನ ಅಭಿವ್ಯಕ್ತಿಯ ಸಾಧನ, ಬಂದೂಕನ್ನು ಹೊರತುಪಡಿಸಿದರೆ ಇರುವ ಮತ್ತೊಂದು ಸಶಕ್ತ ಸಾಧನ ಕವಿತೆ ಎಂದು ಹೇಳಿದ ಮಮತಾ ಸಾಗರ ಪ್ರತಿಯೊಂದು ರೂಪಕ ಪ್ರತಿಮೆಗಳಲ್ಲೂ ಇರುವ ಶಕ್ತಿಯನ್ನು ಕವಿ ಕರಾರುವಕ್ಕಾಗಿ ಬಳಸಿದಾಗ ಮಾತ್ರ ಅದು ಸ್ಪಷ್ಪವಾದ ಚಿತ್ರವನ್ನು ಬಿಂಬಿಸಲು ಸಾಧ್ಯವಿದೆ. ಹಾಗೆ ಮಾಡಿದಾಗ ಕವಿತಾ ವಾಚನದ ವೇಳೆ ಓದುಗನ ಮುಂದೆ ಅದರ ಚಿತ್ರ ಕಣ್ಣಿಗೆ ಕಟ್ಟಿದಂತೆ ಮೂಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಗಜಲ್-ಕಾವ್ಯ ಗೋಷ್ಠಿಯಲ್ಲಿ ಇಪ್ಪತ್ತೈದಕ್ಕು ಹೆಚ್ಚು ಕವಿಗಳು ಗಜಲ್-ಕಾವ್ಯ ವಾಚನ ಮಾಡಿದರು.

ಚಿತ್ರಗೀತೆರಚನೆಕಾರರಾದ ಹೃದಯ ಶಿವ ಮತ್ತು ಬೀ ಪೀರಬಾಷಾ ಅವರು ವಾಚಿಸಿದ ಕವಿತೆಗಳನ್ನು ತುಲನಾತ್ಮಕವಾಗಿ ವಿಮರ್ಶಿಸಿ ಮಾತನಾಡಿದರು. ಗೋಷ್ಠಿಯಲ್ಲಿ ಗಜಲ್ಕಾರರಾದ ಅಬ್ದುಲ್ ಹೈ ತೋರಣಗಲ್ ಮತ್ತು ಡಾ. ಶ್ರೀಶೈಲ ಮಾದಣ್ಣನವರ, ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಹಿರಿಯ ಸಾಹಿತಿ ಪ್ರೊ ಐ.ಜಿ. ಸನದಿ,ಲೇಖಕ ಶ್ರೀಹರ್ಷಾ ಸಾಲಿಮಠ ಉಪಸ್ಥಿತರಿದ್ದರು.

ಉತ್ತರ ಸಂಭ್ರಮದ ಎರಡನೇ ದಿನವಾದ ಭಾನುವಾರ ಕೂಡ ಜಗಲ್ -ಕಾವ್ಯದ ಕುರಿತು ಗೋಷ್ಠಿ ಮುಂದುವರೆಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಜಯದೇವಿ ಗಾಯಕವಾಡ ಅಧ್ಯಕ್ಷತೆವಹಿಸಿದ್ದರು. ಜಾನಪದ ವಿ.ವಿ. ಡಾ.ಟಿ ಎಮ್. ಭಾಸ್ಕರ್, ಪತ್ರಕರ್ತ ಮಂಜುನಾಥ್ ಚಾಂದ್, ಗಜಲ್ಕಾರರಾದ ನೂರ ಅಹಮದ್ ನಾಗನೂರು, ಉಪನ್ಯಾಸಕ ಡಾ. ಇಮಾಮ ಹುಸೇನ್ ಹಡಗಲಿ, ಹಾವೇರಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಲಿಂಗಯ್ಯ ಬಿ. ಹಿರೇಮಠ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಉತ್ಸವ ರಾಕ್ ಗಾರ್ಡನ್ ವತಿಯಿಂದ ಧಾರವಾಡದ ಗ್ರಾಮಾಭಿವೃದ್ಧಿ ವಿಜ್ಞಾನಿ ಡಾ. ಪ್ರಕಾಶ ಭಟ್, ಪರಿಸರ ತಜ್ಞರಾದ ಉಮಾಪತಿ ಗಜಾನನ ಭಟ್, ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯರಾದ ಕರಿಯಪ್ಪ ಹಂಚಿನಮನಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾದ ಹರೀಶ ಮಾಳಪ್ಪನವರ ಅವರನ್ನ ಸನ್ಮಾನಿಸಲಾಯಿತು.

ಉತ್ಸವ ರಾಕ್ ಹಾರ್ಡನ್ ಕ್ಯುರೇಟರ್ ವೇದಾರಣಿ ದಾಸನೂರು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ದೀಪಾ ಗೋನಾಳ ಮತ್ತು ರಂಜಾನ ಹೆಬಸೂರು ಕಾರ್ಯಕ್ರಮ ಸಂಯೋಜನೆ ಮಾಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಟಲ್ ಸ್ಕಾಲರ್ಸ್ ಅಕಾಡೆಮಿ: ನೋಟ್ ಬುಕ್ ವಿತರಣೆ
ಸಾರ್ವಜನಿಕರ ಸಹಭಾಗಿತ್ವ ಇಲ್ಲದಿದ್ದರೇ ನಿರೀಕ್ಷಿತ ಗುರಿ ತಲುಪಲು ಸಾಧ್ಯವಿಲ್ಲ