ಮುಂಡಗೋಡದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ

KannadaprabhaNewsNetwork | Published : Dec 23, 2024 1:01 AM

ಸಾರಾಂಶ

ಬಾಲ್ಯವಿವಾಹವು ಒಂದು ಅಪರಾಧವಾಗಿದ್ದು, ವಿವಾಹಕ್ಕೆ ವಧುವಿಗೆ ೧೮ ಹಾಗೂ ವರನಿಗೆ ೨೧ ವಯಸ್ಸಿಗಿಂತ ಕಡಿಮೆ ಇರಬಾರದು.

ಮುಂಡಗೋಡ: ರಬ್ಬರ್, ಪೆನ್ಸಿಲ್‌ನಂತಹ ಸಣ್ಣಪುಟ್ಟ ಕಳ್ಳತನದಿಂದ ಪ್ರಾರಂಭವಾಗಿ ಬ್ಯಾಂಕ್ ದರೋಡೆಯಂಥ ದೊಡ್ಡ ದೊಡ್ಡ ಅಪರಾಧಗಳನ್ನು ಮಾಡುತ್ತಾರೆ. ಅದನ್ನು ಚಿಕ್ಕ ವಯಸ್ಸಿನಿಂದಲೇ ಸಣ್ಣಪುಟ್ಟ ಕಳ್ಳತನ ಹಂತದಲ್ಲಿಯೇ ಮೊಟಕುಗೊಳಿಸಬೇಕು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಗಂಗನಾಥ ನೀಲಮ್ಮನವರ ತಿಳಿಸಿದರು.ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಭಾಂಗಣದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ ಉದ್ಘಾಟನೆ ಹಾಗೂ ಕ್ರೈಸ್ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಕೊಡಲಾದ ಟ್ಯಾಬ್ ವಿತರಿಸಿ ಮಾತನಾಡಿದರು.

ಬಾಲ್ಯವಿವಾಹವು ಒಂದು ಅಪರಾಧವಾಗಿದ್ದು, ವಿವಾಹಕ್ಕೆ ವಧುವಿಗೆ ೧೮ ಹಾಗೂ ವರನಿಗೆ ೨೧ ವಯಸ್ಸಿಗಿಂತ ಕಡಿಮೆ ಇರಬಾರದು. ಈ ರೀತಿ ಪ್ರಕರಣಗಳು ಎಲ್ಲಾದರೂ ಕಂಡುಬಂದರೆ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ೧೮ ವರ್ಷದೊಳಗಿನವರು ಯಾವುದೇ ವಾಹನಗಳನ್ನು ಚಲಾಯಿಸುವುದು ಕೂಡ ಕಾನೂನು ಪ್ರಕಾರ ಅಪರಾಧವಾಗಿದೆ ಎಂದರು.

ಅಪರಾಧವನ್ನು ಬೆನ್ನಟ್ಟದೆ ಮುಂದಿನ ಉಜ್ವಲ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿದ್ಯಾಭ್ಯಾಸ ಮಾಡುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ಸೋಶಿಯಲ್ ಮೀಡಿಯಾ ಹಾವಳಿ ಹೆಚ್ಚಾಗಿದ್ದರಿಂದ ಯುವಜನತೆ ದಾರಿ ತಪ್ಪುತ್ತಿರುವ ಹಾಗೂ ಅದಕ್ಕೆ ಕಾನೂನಿನ ಸಹಾಯ ಹೇಗೆ ಪಡೆಯಬೇಕು ಹಾಗೂ ಸೈಬರ್ ಕ್ರೈಂ ಮತ್ತು ಡಿಜಿಟಲ್ ಅರೆಸ್ಟ್ ಇದಕ್ಕೆ ಯಾವ ರೀತಿ ಕಾನೂನು ಸಹಾಯ ಮಾಡುತ್ತದೆ ಎಂದರು.ಮೊರಾರ್ಜಿ ದೇಸಾಯಿ ವಸತಿಶಾಲೆ ಪ್ರಾಂಶುಪಾಲ ಮಂಜುನಾಥ ಮರಿತಮ್ಮಣ್ಣನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಮುಂದಿನ ಭವಿಷ್ಯ ರೂಪಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿರುತ್ತದೆ. ಹಾಗಾಗಿ ವಿದ್ಯಾರ್ಥಿಜೀವನದಲ್ಲಿ ಯಾವುದೇ ಆಕರ್ಷಣೆ ಅಹವಾಲುಗಳಿಗೆ ಒಳಗಾಗದೆ ಅಪರಾಧ ಕೃತ್ಯದಿಂದ ದೂರವಿರಬೇಕು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಭಾವನೆ ಬೆಳೆಸಿಕೊಳ್ಳಬೇಕು. ಇದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು. ೧೦ನೇ ತರಗತಿ ವಿದ್ಯಾರ್ಥಿನಿಯರು ಸ್ವಾಗತ ಗೀತೆ ಹೇಳಿದರು. ವೀರಣ್ಣ ಹೈಗರ್ ನಿರೂಪಿಸಿದರು. ಅರುಣಕುಮಾರ ಶಹಮಾನೆ ವಂದಿಸಿದರು.

ಸ್ಕೂಟರ್ ಕಳ್ಳತನ: ಯುವಕ ಬಂಧನ

ಶಿರಸಿ: ಹಳೆ ಬಸ್ ನಿಲ್ದಾಣ ಸಮೀಪದಲ್ಲಿರುವ ನಗರಸಭೆ ಕಾಂಪ್ಲೆಕ್ಸ್ ಎದುರಿನಲ್ಲಿ ನಿಲ್ಲಿಸಿಟ್ಟ ಸ್ಕೂಟರ್ ಕಳ್ಳತನ ಮಾಡಿದ ಯುವಕನನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹುಬ್ಬಳ್ಳಿಯ ಪಿ.ಬಿ. ರೋಡ್‌ನ ಗಾರ್ಡನ್ ಪೇಟೆಯ ಪ್ರಜ್ವಲ್ ಕಿರಣ ಮಂಡಲಕರ(೨೩) ಬಂಧಿತ ಯುವಕ. ಸೆ. ೧೮ರಂದು ಹಳೆ ಬಸ್ ನಿಲ್ದಾಣ ಸಮೀಪದಲ್ಲಿರುವ ನಗರ ಸಭೆ ಕಾಂಪ್ಲೆಕ್ಸ್ ಎದುರಿನ ಕಾರಂಜಿ ಇರುವ ಸ್ಥಳದಲ್ಲಿ ನಿಲ್ಲಿಸಿಟ್ಟ ಸ್ಕೂಟರ್‌ ಕಳ್ಳತನವಾಗಿದೆ ಎಂದು ನಗರದ ರಾಮನಬೈಲ್‌ನ ನಿವಾಸಿ ಬಸಪ್ಪ ಶಿವಪ್ಪ ದೇವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಸ್ಕೂಟರ್ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿ, ಸ್ಕೂಟರ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಎಎಸ್ಐ ನಾರಾಯಣ ರಾಠೋಡ್ ಸಿಬ್ಬಂದಿ ವಿಶ್ವನಾಥ ಭಂಡಾರಿ, ಮಧುಕರ ಗಾಂವಕರ, ನಾಗಪ್ಪ ಲಮಾಣಿ, ಸದ್ದಾಂ ಹುಸೇನ್, ಮಲ್ಲಿಕಾರ್ಜುನ ಕುದರಿ, ಮಂಜುನಾಥ ಕಾಶಿಕೋವಿ, ನಜೀರ್ ಪಿಂಜಾರ್, ಉಮೇಶ ಪೂಜಾರಿ ಸಿಡಿಆರ್ ವಿಭಾಗದ ಉದಯ ಗುನಗಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Share this article