ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪಕ್ಷದ ಶಿಸ್ತು ಉಲ್ಲಂಘಿಸಿ ವಿಪ ಸದಸ್ಯ ಪಿ.ಎಚ್.ಪೂಜಾರ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ ಬಿಜೆಪಿ ಪಕ್ಷದ ಪದಾಧಿಕಾರಿಗಳನ್ನು, ಮುಖಂಡರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಡಾ.ಶೇಖರ ಮಾನೆ ಮಾತನಾಡಿ, ಬಾಗಲಕೋಟ ವಿಧಾನಸಭಾ ಮತಕ್ಷೇತ್ರದಲ್ಲಿ ಪಕ್ಷದ ಕೆಲವು ಪದಾಧಿಕಾರಿಗಳು ಮತ್ತು ಮುಖಂಡರು ವಿನಾಕಾರಣ ವಿಪ ಸದಸ್ಯ ಪಿ.ಎಚ್.ಪೂಜಾರ ವಿರುದ್ಧ ಹೇಳಿಕೆ ನೀಡಿದ್ದಾರೆ. ಇಂತಹ ನಡವಳಿಕೆ ಪಕ್ಷ ವಿರೋಧಿ ನಡೆಯಾಗಿದ್ದು , ಇವರೆಲ್ಲರ ಮೇಲೆ ಶಿಸ್ತು ಕ್ರಮ ತೆಗೆದುಕೊಂಡು ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದರು.
ರಾಜು ನಾಯಕರ ಇವರು ಏಕವಚನದಲ್ಲಿ ಹಾಲಿ ವಿ.ಪ ಸದಸ್ಯರ ವಿರುದ್ಧ ಹೇಳಿಕೆ ನೀಡಿರುವುದು ಪಕ್ಷದ ಸಂಸ್ಕೃತಿ ಅಲ್ಲ. ಇದರಿಂದ ಪಕ್ಷದ ಘನತೆಗೆ ಕೊಡಲಿ ಏಟು ಬಿದ್ದಂತಾಗಿದೆ. ಪಕ್ಷದ ಜವಾಬ್ದಾರಿಯ ಸ್ಥಾನದಲ್ಲಿ ಇದ್ದೇನೆ ಎಂದು ಹೇಳಿಕೊಳ್ಳುವವರು ಪಕ್ಷ ನಿಷ್ಠೆ ತೋರುವುದನ್ನು ಬಿಟ್ಟು ಏಕ ವ್ಯಕ್ತಿಯ ಪರವಾಗಿ ತಮ್ಮ ನಿಷ್ಠೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದು ಸಮಂಜಸವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಪದಾಕಾರಿಗಳಾದವರು ಪಕ್ಷದ ಚುನಾಯಿತ ಜನಪ್ರತಿನಿಧಿ ವಿರುದ್ಧ ಪತ್ರಿಕಾಗೋಷ್ಠಿ ನಡೆಸುವುದು ಪಕ್ಷದ ಶಿಸ್ತು ಮತ್ತು ಸಂವಿಧಾನದ ವಿರುದ್ಧವಾಗಿದೆ. ಪಕ್ಷದ ಹಿರಿಯ ನಿಷ್ಠಾವಂತ ಕಾರ್ಯಕರ್ತರು ಹಾಗೂ ಕ್ರಿಯಾಶೀಲ ಸದಸ್ಯರಾದ ನಾವು ಪಕ್ಷದ ಶಿಸ್ತನ್ನು ಉಲ್ಲಂಘಿಸಬಾರದು ಎನ್ನುವ ಕಾರಣಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ಕೂಡಲೇ ಪದಾಧಿಕಾರಿಗಳಾದ ಬಸವರಾಜ ಹುನಗುಂದ, ಸುರೇಶ ಕೊಣ್ಣೂರ, ರಾಜು ನಾಯ್ಕರ, ರಾಜು ರೇವಣಕರ, ಸತ್ಯನಾರಾಯಣ ಹೇಮಾದ್ರಿ, ಶಿವಾನಂದ ತವಳಿ, ಬಸವರಾಜ ಅವರಾದಿ, ಲಕ್ಷ್ಮೀನಾರಾಯಣ ಕಾಸಟ, ಪ್ರಭು ಹಡಗಲಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಶಂಭುಗೌಡ ಪಾಟೀಲ, ಡಾ..ಶೇಖರ ಮಾನೆ, ಚಂದ್ರಕಾಂತ ಕೇಸನೂರ, ಸಂಗನಗೌಡ ಪಾಟೀಲ, ಕುಮಾರ ಗಿರಿಜಾ, ರಾಜು ಚಿತ್ತವಾಡಗಿ, ಸಂಜೀವ ಡಿಗ್ಗಿ, ಕಳಕಪ್ಪ ಬಾದೋಡಗಿ ಇತರರು ಇದ್ದರು.