ಶಾಸಕರಾಗಲು ತಿಣುಕಾಡಿದ ರಾಜಣ್ಣರಿಂದ ಟೀಕೆ ಸಲ್ಲದು :ಶಾಸಕ ಕೆ.ರಾಜು

KannadaprabhaNewsNetwork |  
Published : Feb 20, 2025, 12:46 AM IST
19ಕೆಆರ್ ಎಂಎನ್ 4.ಜೆಪಿಜಿರಾಮನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಡಿ.ಕೆ.ಶಿವಕುಮಾರ್ ಅವರಿಗೆ 10 ಮಂದಿ ಅಲ್ಲ, 50 ಜನರನ್ನು ಗೆಲ್ಲಿಸಿ ಶಾಸಕರನ್ನಾಗಿಸುವ ಶಕ್ತಿ ಇದೆ. ಅಂತಹ ನಾಯಕನನ್ನು ಟೀಕೆ ಮಾಡುವುದು ಸರಿಯಲ್ಲ. ರಾಜಣ್ಣನವರು ತಾವೇ ಶಾಸಕರಾಗಲು ತಿಣುಕಾಡಿದ್ದನ್ನು ಬಹುಶಃ ಮರೆತಿರಬೇಕು ಎಂದು ಲೇವಡಿ ಮಾಡಿದರು.

ಕನ್ನಡಪ್ರಭ ವಾರ್ತೆ ರಾಮನಗರ

ವಿಧಾನಸಭಾ ಚುನಾವಣೆಯಲ್ಲಿ ಬೇರೆಯವರನ್ನು ಗೆಲ್ಲಿಸುವುದಿರಲಿ, ತಾವೇ ಖುದ್ಧಾಗಿ ಗೆದ್ದು ಶಾಸಕರಾಗಲು ತಿಣುಕಾಡಿದವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರನ್ನು ಟೀಕೆ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ರಾಜಣ್ಣ ವಿರುದ್ಧ ಮಾಜಿ ಶಾಸಕ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ 10 ಮಂದಿ ಅಲ್ಲ, 50 ಜನರನ್ನು ಗೆಲ್ಲಿಸಿ ಶಾಸಕರನ್ನಾಗಿಸುವ ಶಕ್ತಿ ಇದೆ. ಅಂತಹ ನಾಯಕನನ್ನು ಟೀಕೆ ಮಾಡುವುದು ಸರಿಯಲ್ಲ. ರಾಜಣ್ಣನವರು ತಾವೇ ಶಾಸಕರಾಗಲು ತಿಣುಕಾಡಿದ್ದನ್ನು ಬಹುಶಃ ಮರೆತಿರಬೇಕು ಎಂದು ಲೇವಡಿ ಮಾಡಿದರು.

ಡಿ.ಕೆ.ಶಿವಕುಮಾರ್ ಸಂಘಟನಾ ಚತುರ ಎಂಬುದರಲ್ಲಿ ಎರಡು ಮಾತಿಲ್ಲ. 8ನೇ ಬಾರಿ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಅಂತಹ ನಾಯಕನನ್ನು ಟೀಕೆ ಮಾಡುತ್ತಿರುವುದು ಸರಿಯಲ್ಲ. ಇದೆಲ್ಲವನ್ನು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳುತ್ತಾರೆಂಬ ನಂಬಿಕೆ ಇದೆ ಎಂದರು.

ಕಾಂಗ್ರೆಸ್ ಪಕ್ಷವನ್ನು ಡಿ.ಕೆ.ಶಿವಕುಮಾರ್ ರವರು ಜನರ ಹತ್ತಿರ ತೆಗೆದುಕೊಂಡು ಹೋಗಿದ್ದಾರೆ. ಬೇರೆ ನಾಯಕರಂತೆ ಬನ್ನಿ ಬ್ರದರ್ ಅಂತ ಬೂಟಾಟಿಕೆ ಮಾತುಗಳನ್ನಾಡದೆ ಸಾಮಾಜಿಕ ಕಳಕಳಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.

ಡಿ.ಕೆ.ಶಿವಕುಮಾರ್ ಅವರಿಗೆ ಯಾವ ಕಾರಣಕ್ಕೂ ಅನ್ಯಾಯ ಆಗುವುದಿಲ್ಲ ಎಂದು ನಂಬಿದ್ದೇನೆ. ಹಾಗೊಂದು ವೇಳೆ ಅನ್ಯಾಯವಾದರೆ ಪಕ್ಷಕ್ಕೆ ಒಳ್ಳೆಯದಾಗುವುದಿಲ್ಲ. ಕೆಲವರು ಸ್ವಾರ್ಥಕ್ಕಾಗಿ ಆಲೋಚನೆ ಮಾಡುತ್ತಾರೆ. ಡಿ.ಕೆ.ಶಿವಕುಮಾರ್ ಪರಿಶ್ರಮವನ್ನು ವರಿಷ್ಠರು ನೋಡಿದ್ದಾರೆ. ಆದ್ದರಿಂದ ವರಿಷ್ಠರು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಕೆ.ರಾಜು ಹೇಳಿದರು.

ಬಿಜೆಪಿ ನಾಯಕರಿಂದ ಅಪಪ್ರಚಾರ:

ಕೇಂದ್ರ ಸಚಿವರು ಹಾಗೂ ಬಿಜಿಪಿ ರಾಜ್ಯ ನಾಯಕರು ಸಾಮಾನ್ಯ ತಿಳಿವಳಿಕೆ ಇಲ್ಲದಂತೆ ಗ್ಯಾರಂಟಿ ಯೋಜನೆಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಡೆತ್ ಸರ್ಟಿಫಿಕೇಟ್ 5 ರು. ಇತ್ತು, ಈಗ 50 ರುಪಾಯಿ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ 5 ರು. ಇದ್ದ ರಸೀದಿ ಮೊತ್ತವನ್ನು 20 ರುಪಾಯಿ ಮಾಡಿದ್ದಾರೆಂದು ಸುಳ್ಳು ಆರೋಪ ಮಾಡಿ ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.

ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ. ಆದರೆ ಅವರದೇ ಪಕ್ಷ ಆಡಳಿತದಲ್ಲಿರುವ ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ ರಾಜ್ಯಗಳಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿ ಅನುಷ್ಠಾನಕ್ಕೆ ತಂದಿದೆ. ಇನ್ನಾದರೂ ರಾಜಕೀಯ ಕಾರಣಗಳಿಗಾಗಿ ಟೀಕೆ ಮಾಡುವುದನ್ನು ಬಿಟ್ಟು ವಾಸ್ತವತೆ ಅರಿತು ಮಾತನಾಡಬೇಕು ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಸರ್ಕಾರ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ 10 ಕೋಟಿ ರುಪಾಯಿ ನೀಡಿದೆ. ರಸ್ತೆ, ಕುಡಿಯುವ ನೀರು ಸೇರಿದಂತೆ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಎಲ್ಲದಕ್ಕೂ ಅನುದಾನ ಬಿಡುಗಡೆ ಮಾಡುತ್ತಿದೆ. ಸರ್ಕಾರ ದಿವಾಳಿಯಾಗಿದ್ದರೆ ಅನುದಾನ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶಿವಪ್ರಸಾದ್, ತಾಲೂಕು ಅಧ್ಯಕ್ಷರಾದ ವಿ.ಎಚ್.ರಾಜು, ಸ್ವಾಮಿ, ಜಯಣ್ಣ, ರಂಗನಾಥ್ ಇದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ