ನೂತನ ತಂತ್ರಜ್ಞಾನ ಬಳಸಿ, ಕಾಡು ಪ್ರಾಣಿಗಳ ಹಾವಳಿ ತಪ್ಪಿಸಿ

KannadaprabhaNewsNetwork |  
Published : Oct 24, 2025, 01:00 AM IST
21 | Kannada Prabha

ಸಾರಾಂಶ

ತುಂಬುಸೋಗೆ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷಗೊಂಡು ಆತಂಕ ಮೂಡಿಸಿರುವ ಹಿನ್ನಲೆ

ಕನ್ನಡಪ್ರಭ ವಾರ್ತೆ ಮೈಸೂರುನೂತನ ತಂತ್ರಜ್ಞಾನ ಬಳಸಿ, ಮಾನವ- ಪ್ರಾಣಿಗಳ ಸಂಘರ್ಷ ತಪ್ಪಿಸಿ, ಅಲ್ಲದೇ ಕಾಡಂಚಿನ ಪ್ರದೇಶದಲ್ಲಿ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಅನ್ನದಾತರಿಗೆ ಕಾಡುಪ್ರಾಣಿಗಳ ಹಾವಳಿಯಿಂದ ಶಾಶ್ವತವಾಗಿ ಮುಕ್ತಿ ಕೊಡಿಸಿ, ಜನ- ಜಾನುವಾರುಗಳ ಪ್ರಾಣ ಕಾಪಾಡುವಲ್ಲಿ ದಯಮಾಡಿ ಶ್ರಮಿಸಿ ಎಂದು ರಾಜ್ಯ ಸರ್ಕಾರಕ್ಕೆ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಸಿ. ಚಂದನ್ ಗೌಡ ಮನವಿ ಮಾಡಿದ್ದಾರೆ.ನಾಗರಹೊಳೆ ವ್ಯಾಪ್ತಿಯ ವೀರನಹೊಸಳ್ಳಿ, ಸಿದ್ದಾಪುರದಲ್ಲಿನ ಬೆಳೆ ಹಾನಿ ಪ್ರದೇಶಕ್ಕೆ ಮತ್ತು ಎಚ್.ಡಿ. ಕೋಟೆ ತಾಲೂಕು ವ್ಯಾಪ್ತಿಯ ತುಂಬುಸೋಗೆ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷಗೊಂಡು ಆತಂಕ ಮೂಡಿಸಿರುವ ಹಿನ್ನಲೆಯಲ್ಲಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ ಚಂದನ್ ಗೌಡ ಅವರು, ಕಾಡುಪ್ರಾಣಿಗಳ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.ಹೊರ ರಾಷ್ಟ್ರಗಳಲ್ಲಿನ ತಂತ್ರಜ್ಞಾನವನ್ನು ನಮ್ಮ ದೇಶದಲ್ಲೂ ಅನುಸರಿಸುವ ಮೂಲಕ ಉನ್ನತ ತಜ್ಞರ ಸಮಿತಿ ರಚಿಸಿ, ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವಲ್ಲಿ ಸರ್ಕಾರ ಆಸಕ್ತಿ ತೋರಬೇಕಿದೆ ಎಂದ ಅವರು, ದಿನಂಪ್ರತಿ ಒಂದಿಲ್ಲೊಂದು ಗ್ರಾಮದಲ್ಲಿ ಅದರಲ್ಲೂ ಕಾಡಂಚಿನ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ದಾಳಿಯಿಂದಾಗಿ ಜನ-ಜಾನುವಾರುಗಳು ಬಲಿಯಾಗುತ್ತಿರುವುದು ಆತಂಕದ ವಿಚಾರವಾಗಿದ್ದು, ಭಯದಲ್ಲೇ ಕಾಲ ದೂಡುವ ಸ್ಥಿತಿ ಬಂದೊದಗಿದೆ. ಇದಕ್ಕೆ ಉದಾಹರಣೆ ಇತ್ತೀಚೆಗೆ ರೈತನೋರ್ವನ ಮೇಲೆ ಹುಲಿಯೊಂದು ಭೀಕರ ದಾಳಿ ನಡೆಸಿರುವುದು ಎಂದಿದ್ದಾರೆ,ಹುಲಿ, ಆನೆ ಸೇರಿದಂತೆ ಇತರೆ ಪ್ರಾಣಿಗಳು ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟು ಅನ್ನದಾತರ ಬೆಳೆಯನ್ನೂ ನಾಶಪಡಿಸುತ್ತಿವೆ.ಅಲ್ಲದೇ ಜೀವಕ್ಕೂ ಕುತ್ತು ತಂದಿವೆ. ಮಕ್ಕಳು ಶಾಲೆಗೆ ತೆರಳಲು, ರೈತರು ಜಮೀನಿಗೆ ತೆರಳಲು ಭೀತಿಯಿಂದ ಹಿಂದೇಟು ಹಾಕುತ್ತಿದ್ದಾರೆ. ಈ ಎಲ್ಲಾ ಸ್ಥಿತಿ- ಗತಿಯನ್ನು ಮನದಟ್ಟು ಮಾಡಿಕೊಂಡು ವಿಶೇಷ ಆಸಕ್ತಿ ತೋರುವ ಮುಖೇನ ನೂತನ ತಂತ್ರಜ್ಞಾನ ಬಳಸಿ ಮಾನವ- ಪ್ರಾಣಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಬಳಿಕ ಮಳೆಯಿಂದ ನಾಶವಾಗಿರುವ ಬೆಳೆ ನಷ್ಟ ಪರಿಹಾರಕ್ಕೆ ಹೊಸ ಕಾನೂನು ರೂಪಿಸಬೇಕು. ತುಂಬುಸೋಗೆ ಸೇರಿದಂತೆ ಇನ್ನಿತರೆ ಪ್ರದೇಶದಲ್ಲಿ ಕಾಣಿಸಿಕೊಂಡು ಭೀತಿಯನ್ನುಂಟು ಮಾಡಿರುವ ವ್ಯಾಘ್ರನ ಸೆರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ