ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಯಿಂದ ಬೆಳೆಹಾನಿ

KannadaprabhaNewsNetwork | Published : Nov 21, 2024 1:02 AM

ಸಾರಾಂಶ

ಅರಣ್ಯದಂಚಿನ ಗ್ರಾಮಗಳಲ್ಲಿ ರೈತರು ಕಾಡು ಪ್ರಾಣಿಗಳ ಹಾವಳಿಯಿಂದ ತತ್ತರಿಸಿದ್ದಾರೆ. ಜೊತೆಗೆ ಮೂಲಭೂತ ಸೌಲಭ್ಯಗಳು ಇಲ್ಲದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಅರಣ್ಯದಂಚಿನ ಗ್ರಾಮಗಳಲ್ಲಿ ರೈತರು ಕಾಡು ಪ್ರಾಣಿಗಳ ಹಾವಳಿಯಿಂದ ತತ್ತರಿಸಿದ್ದಾರೆ. ಜೊತೆಗೆ ಮೂಲಭೂತ ಸೌಲಭ್ಯಗಳು ಇಲ್ಲದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.ತಾಲೂಕಿನ ಬೈಲೂರು ಗ್ರಾಮದಲ್ಲಿ ನೂತನ ಗ್ರಾಮಗಳಾದ ಹುಣಸೆಪಾಳ್ಯ, ಕೆರೆದೊಡ್ಡಿ , ಅಟ್ಟು ಗೌಡನಪಾಳ್ಯ, ಮುನಿಗುಡಿ ದೊಡ್ಡಿ, ಹೊಸಪಾಳ್ಯ ,ಬೈಲೂರು ಗ್ರಾಮ ಘಟಕ ನಾಮಫಲಕ ಉದ್ಘಾಟಿಸಿ ಮಾತನಾಡಿದರು.

ಪಶ್ಚಿಮ ಘಟ್ಟಗಳನ್ನು ಹೊಂದಿರುವ ಸಮೃದ್ಧಿ ಅರಣ್ಯ ಪ್ರದೇಶ ಮಲೆ ಮಾದೇಶ್ವರ ವನ್ಯಧಾಮ ಹಾಗೂ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಎರಡು ವಲಯಗಳಲ್ಲೂ ಅರಣ್ಯದಂಚಿನಲ್ಲಿ ಬರುತ್ತದೆ. ರೈತರು ತಮ್ಮ ಜಮೀನಿನಲ್ಲಿ ಮಳೆಯಾಶ್ರೀತ ಹಾಗೂ ನೀರಾವರಿ ಫಸಲು ಬೆಳೆಯಲು ದಿನನಿತ್ಯ ಈ ಭಾಗದಲ್ಲಿ ಕಾಡುಪ್ರಾಣಿಗಳು ಜಮೀನಿಗೆ ನುಗ್ಗಿ ಫಸಲು ನಾಶ ಗೊಳಿಸುತ್ತಿದೆ ಎಂದರು.

ಇದಕ್ಕೆ ಎರಡು ವಲಯಗಳ ಅರಣ್ಯಾಧಿಕಾರಿಗಳು ರೈತರ ಬಗ್ಗೆ ಕಾಳಜಿ ಇಲ್ಲದೆ ಬೆಳೆ ಹಾನಿ ಪರಿಹಾರನೂ ಸಹ ನೀಡುತ್ತಿಲ್ಲ. ಜೊತೆಗೆ ರೈತರ ಜಮೀನಿಗೆ ಬರುತ್ತಿರುವ ಕಾಡು ಪ್ರಾಣಿಗಳನ್ನು ತಡೆಗಟ್ಟಲು ವೈಜ್ಞಾನಿಕವಾಗಿ ಕ್ರಮವಹಿಸಿಲ್ಲ. ಹೀಗಾಗಿ ಈ ಭಾಗದ ರೈತರು ರಾತ್ರಿ ಹಗಲು ಎನ್ನದೆ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಜನಪ್ರತಿನಿಧಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಭಾಗದಲ್ಲಿ ವಿದ್ಯುತ್ ಇಲಾಖೆ ಸಹ ರೈತರಿಗೆ ಅರಣ್ಯದಂಚಿನಲ್ಲಿ ಬರುವುದರಿಂದ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರೆ ವಿದ್ಯುತ್ ಇಲಾಖೆಗೆ ಅರಣ್ಯದಂಚಿನಲ್ಲಿ ಬರುವ ರೈತರಿಗೆ ಪಂಪ್‌ಸೆಟ್‌ಗಳಿಗೆ ಬೆಳಗ್ಗೆ 9:00 ರಿಂದ ಸಂಜೆ 4ರವರೆಗೆ ವಿದ್ಯುತ್ ನೀಡಬೇಕು ಎಂದು ತಿಳಿಸಿದ್ದರು. ಈ ಆದೇಶ ಪಾಲಿಸದೆ ಜೆಸ್ಕಾಂ ಇಲಾಖೆ ತಮಗೆ ನಿಯಮಾನುಸಾರವಿಲ್ಲದೆ ನಡುರಾತ್ರಿ ನಾಲ್ಕರಿಂದ ಬೆಳಗ್ಗೆ 11 ರವರೆಗೆ ವಿದ್ಯುತ್ ನೀಡುತ್ತಿದ್ದು ಅರಣ್ಯದಂಚಿನಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ಹಾನಿ ಜೊತೆಗೆ ಜೀವ ಹಾನಿ ಸಂಭವಿಸುತ್ತದೆ ಎಂಬ ಜೀವ ಭಯದಲ್ಲೇ ಬದುಕುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಮಳೆ ಬಂದರೆ ಈ ಭಾಗದಲ್ಲಿ ತಳಮಟ್ಟದ ಸೇತುವೆಗಳಿದ್ದು ಹೆಚ್ಚು ಅರಣ್ಯ ಪ್ರದೇಶ ಇರುವುದರಿಂದ ಅಪಾರ ಪ್ರಮಾಣವಾದ ನೀರು ಅರಿದು ಹೋಗುವುದರಿಂದ ರೈತರು ಹಾಗೂ ಜನಸಾಮಾನ್ಯರು ಗ್ರಾಮಗಳಿಗೆ ತೆರಳಲು ಪರದಾಡುವಂಥ ಸ್ಥಿತಿ ಉಂಟಾಗಿದೆ. ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಸಹ ಇಲ್ಲಿನ ಜನತೆ ಕಾಡು ಪ್ರಾಣಿಗಳಿಗಿಂತಲೂ ಕೀಳಾಗಿ ಬದುಕುತ್ತಿದ್ದಾರೆ. ರಸ್ತೆಗಳೆಲ್ಲ ಹಾಳಾಗಿ ದ್ವಿಚಕ್ರ ವಾಹನಗಳು ಸಹ ಸಂಚರಿಸಲಾಗುತ್ತಿಲ್ಲ. ನವೆಂಬರ್ 26ರಂದು ಬೈಲೂರು ಚೆಕ್ ಪೋಸ್ಟ್ ಬಳಿ ರೈತ ಸಂಘಟನೆ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಜಿಲ್ಲಾಮಟ್ಟದ ಅಧಿಕಾರಿಗಳೇ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಸಮಗ್ರ ಸಮಸ್ಯೆಗಳ ಬಗ್ಗೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು. ಭ್ರಷ್ಟ ಸರ್ಕಾರಿ, ಬ್ಯಾಂಕ್, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಭ್ರಷ್ಟ ರಾಜಕಾರಣಿಗಳು ವಿವಿಧ ಇಲಾಖೆಯ ಭ್ರಷ್ಟ ಅಧಿಕಾರಿಗಳು ಗ್ರಾಮಕ್ಕೆ ಬರುವುದು ನಿಷೇಧ. ದಕ್ಷ, ನಿಷ್ಠಾವಂತ ಅಧಿಕಾರಿಗಳಿಗೆ ಸ್ವಾಗತ ಎಂದು ನಾಮಫಲಕದಲ್ಲೇ ಅಳವಡಿಸಿ ವಿಶೇಷವಾಗಿ ಗಮನ ಸೆಳೆಯಲಾಯಿತು. ರಾಜು, ಅವತಾರ್ ಶಿವು, ಶಿವಮಾದಪ್ಪ, ರಾಜಪ್ಪ, ಮಹೇಶ್, ಪ್ರಸಾದ್, ಶಂಕರ್, ಪ್ರಭು ಉಪಸ್ಥಿತರಿದ್ದರು.

Share this article