ಗದಗ: 2025- 26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತದ ಮಲತಾಯಿ ಧೋರಣೆಯನ್ನು ಖಂಡಿಸಿ, ಮಂಗಳವಾರ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಮುಂದೆ ರೈತರು ಭಜನೆ ಮಾಡುವ ಮೂಲಕ ವಿಶಿಷ್ಟ ಹಾಗೂ ಆಕ್ರೋಶಭರಿತ ಪ್ರತಿಭಟನೆ ನಡೆಸಿದರು.
ನಿಜವಾದ ರೈತರಿಗೆ ಶೂನ್ಯ: ಬೆಳೆವಿಮೆ ವಿತರಣೆಯಲ್ಲಿ ನಡೆದಿರುವ ತಾಂತ್ರಿಕ ಎಡವಟ್ಟು ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜೀವಂತ ಸಾಕ್ಷಿಯೊಂದು ಸಿಕ್ಕಿದೆ. ಸರ್ವೇ ನಂಬರ್ 198/2ಅ ನಲ್ಲಿ ರೈತರೊಬ್ಬರು ತಮ್ಮ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದಾಗಿ ವಿಮೆ ಪ್ರೀಮಿಯಂ ತುಂಬಿದ್ದರು. ಆದರೆ, ಕೃಷಿ ಇಲಾಖೆಯು ಜಿಪಿಎಸ್ ಸಮೀಕ್ಷೆ ಮಾಡುವ ವೇಳೆಯಲ್ಲಿ ಅಲ್ಲಿ ಗೋವಿನಜೋಳ ಬೆಳೆಯಲಾಗಿದೆ ಎಂದು ದಾಖಲಿಸಿದೆ. ಆಶ್ಚರ್ಯದ ಸಂಗತಿಯೆಂದರೆ, ಈ ರೀತಿ ಬೆಳೆ ಮತ್ತು ವಿಮೆ ದಾಖಲೆಗಳು ಸಂಪೂರ್ಣ ಮಿಸ್ ಮ್ಯಾಚ್(ವ್ಯತ್ಯಾಸ) ಆಗಿದ್ದರೂ ಅವರಿಗೆ ಮೆಣಸಿನಕಾಯಿ ಹೆಸರಿನಲ್ಲೇ ವಿಮೆ ಹಣ ಜಮೆಯಾಗಿದೆ ಎನ್ನುವುದು ರೈತರ ಅಳಲಾಗಿದೆ. ಪ್ರತಿಭಟನೆಯಲ್ಲಿ ನೂರಾರು ರೈತರು ಪಾಲ್ಗೊಂಡಿದ್ದರು.
ಮಧ್ಯಂತರ ಪರಿಹಾರವೂ ಸಿಕ್ಕಿಲ್ಲ: ಅಕ್ಕಪಕ್ಕದ ಧಾರವಾಡ, ಬಾಗಲಕೋಟೆ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗಳ ರೈತರ ಖಾತೆಗಳಿಗೆ ಬೆಳೆವಿಮೆ ಪರಿಹಾರ ಹಣ ಬಂದು ಈಗಾಗಲೇ ಎರಡು ತಿಂಗಳುಗಳೇ ಕಳೆದಿದೆ. ಆದರೆ ಗದಗ ಜಿಲ್ಲೆಯ ರೈತರಿಗೆ ಇದುವರೆಗೂ ಕನಿಷ್ಠ ಪಕ್ಷ ಮಧ್ಯಂತರ ಪರಿಹಾರವೂ ಸಿಕ್ಕಿಲ್ಲ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತಕ್ಕೆ, ಕೃಷಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ ಎಂದು ರೈತ ಮುಖಂಡ ಪರಮೇಶ್ವರಪ್ಪ ಜಂತ್ಲಿ ತಿಳಿಸಿದರು.ಅಹೋರಾತ್ರಿ ಧರಣಿ: ಎಚ್ಚರಿಕೆ