ಹಗರಿಯಲ್ಲಿ ಬೆಳೆ ವಿಮೆ, ಬರ ನಿರ್ವಹಣೆ ಅರಿವು ಕಾರ್ಯಕ್ರಮ

KannadaprabhaNewsNetwork |  
Published : Jul 26, 2026, 02:15 AM IST
ಹಗರಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಿಎಂಎಫ್‌ಬಿವೈ ಬೆಳೆ ವಿಮೆ, ಪರ್ಯಾಯ ಬೆಳೆ ಪದ್ಧತಿಗಳು ಹಾಗೂ ಬರಗಾಲ ನಿರ್ವಹಣಾ ಕ್ರಮಗಳು ಕುರಿತು ಜರುಗಿದ ರೈತರಿಗೆ ಅರಿವು ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.  | Kannada Prabha

ಸಾರಾಂಶ

ಬ್ಯಾಂಕ್‌ಗಳಲ್ಲಿ ಸಾಲ ಪಡೆದವರಿಗೆ ವಿಮೆ ಕಡ್ಡಾಯವಾಗಿದೆ. ರೈತರು ಬಿತ್ತನೆಗೆ ಮುಂಚಿತವಾಗಿಯೇ ವಿಮೆ ಮಾಡಿಸುವುದು ಸೂಕ್ತ.

ಬಳ್ಳಾರಿ: ಪ್ರಸ್ತುತ ಬೆಳೆ ವಿಮೆಯನ್ನು ಗ್ರಾಪಂ ಮಟ್ಟದಲ್ಲೇ ಜಾರಿಗೊಳಿಸಲಾಗಿದೆ. ಪಹಣಿ ಹೊಂದಿರುವ ಪ್ರತಿ ರೈತ ಈ ಯೋಜನೆಗೆ ಅರ್ಹ ಎಂದು ಉಪ ಕೃಷಿ ನಿರ್ದೇಶಕ ಎಸ್.ಎನ್. ಮಂಜುನಾಥ್ ತಿಳಿಸಿದರು.

ತಾಲೂಕು ಆಡಳಿತ, ಕೃಷಿ ಇಲಾಖೆ, ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಹಗರಿಯ ಕೆವಿಕೆಯಲ್ಲಿ ಪಿಎಂಎಫ್‌ಬಿವೈ ಬೆಳೆ ವಿಮೆ, ಪರ್ಯಾಯ ಬೆಳೆ ಪದ್ಧತಿಗಳು ಹಾಗೂ ಬರಗಾಲ ನಿರ್ವಹಣಾ ಕ್ರಮಗಳು ಕುರಿತು ಆಯೋಜಿಸಿದ್ದ ರೈತರಿಗೆ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯಾಂಕ್‌ಗಳಲ್ಲಿ ಸಾಲ ಪಡೆದವರಿಗೆ ವಿಮೆ ಕಡ್ಡಾಯವಾಗಿದೆ. ರೈತರು ಬಿತ್ತನೆಗೆ ಮುಂಚಿತವಾಗಿಯೇ ವಿಮೆ ಮಾಡಿಸುವುದು ಸೂಕ್ತ. ಹತ್ತಿರದ ‘ಗ್ರಾಮ ಒನ್'''''''' ಅಥವಾ ‘ಗ್ರಾಹಕ ಸೇವಾ ಕೇಂದ್ರ''''''''ಗಳಿಗೆ ಭೇಟಿ ನೀಡಿ ಕಂತಿನ ಮೊತ್ತ ಪಾವತಿಸಬೇಕು ಎಂದು ತಿಳಿಸಿದರು.

ಬಳ್ಳಾರಿ ಭಾಗದ ರೈತರು ಹತ್ತಿ, ಮೆಕ್ಕೆಜೋಳ, ಸಜ್ಜೆ ಹಾಗೂ ಬರ ನಿರೋಧಕ ಬೆಳೆಯಾದ ನವಣೆ ಮತ್ತು ಸಾಮೆಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕೆಂದು ಕರೆ ನೀಡಿದರು.

ಬಳ್ಳಾರಿ ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ ಮಾತನಾಡಿ, ಮಳೆಯಾಶ್ರಿತ ಮತ್ತು ನೀರಾವರಿ ವ್ಯಾಪ್ತಿಯ ಸೂರ್ಯಕಾಂತಿ, ಹತ್ತಿ, ಮುಸುಕಿನ ಜೋಳ ಹಾಗೂ ಜೋಳದ ಬೆಳೆಗೆ ವಿಮೆ ಮಾಡಿಸಬೇಕು. ಇನ್ನೂ ಬಿತ್ತನೆಯಾಗದ ಪ್ರದೇಶಗಳಲ್ಲಿ ‘ವಿಬಿಜಿ-ರಾಮ್-ಜಿ'''''''' ಮತ್ತು ‘ಕೃಷಿ ಭಾಗ್ಯ'''''''' ಯೋಜನೆಯಡಿ ಕಂದಕ ಬದು ಹಾಗೂ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಬೇಕು. ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿರುವುದರಿಂದ ಪರ್ಯಾಯ ಬೆಳೆ ಬೆಳೆದು ರೈತರು ಲಾಭ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ, ಮಣ್ಣು ವಿಜ್ಞಾನಿ ಡಾ. ರವಿ ಎಸ್. ಮಾತನಾಡಿ, ರೈತರು ಜಮೀನನ್ನು ಸಮತಟ್ಟು ಮಾಡದೆ ಉಳುಮೆ ಮಾಡಿ ಹಾಗೆಯೇ ಬಿಡುವುದರಿಂದ ಮಳೆಯಾದಾಗ ನೀರು ಮಣ್ಣಿನಲ್ಲಿ ಇಂಗಲು ನೆರವಾಗುತ್ತದೆ. ಆಗಸ್ಟ್ ಕೊನೆಯಲ್ಲಿ ಮಳೆಯಾದರೂ ಗೋಧಿ, ನವಣೆ, ರಾಗಿಯನ್ನು ಬೆಳೆಯಬಹುದು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರೆಲೆ ಗೊಬ್ಬರಗಳನ್ನು ಬೆಳೆಸಬೇಕು ಎಂದು ಮಾಹಿತಿ ನೀಡಿದರು.

ಹವಮಾನ ಮುನ್ಸೂಚನೆ ಕುರಿತು ಮಾತನಾಡಿದ ಬೇಸಾಯ ತಜ್ಞ ಡಾ.ಕೃಷ್ಣಮೂರ್ತಿ, ಈ ಬಾರಿ ದೇಶದ ಶೇ.70ರಷ್ಟು ಪ್ರದೇಶದಲ್ಲಿ ಮಳೆ ಅಭಾವವಾಗುವ ಸಾಧ್ಯತೆಯಿದೆ. ಕಡಿಮೆ ನೀರು ಬೇಡುವ ಕುಸುಬೆ, ಸಜ್ಜೆ, ಹುರುಳಿ, ಹಲಸಂದಿ ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದು ರೈತರಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ತಾಲೂಕಿನ ವಿವಿಧ ಗ್ರಾಮಗಳಿಂದ ರೈತರು ಆಗಮಿಸಿದ್ದರು. ಕೆವಿಕೆ ವಿಜ್ಞಾನಿ ಡಾ.ಪಾಲಯ್ಯ, ಡಾ. ನವೀನ್, ಸಹಾಯಕ ತೋಟಗಾರಿಕೆ ಅಧಿಕಾರಿ ಸುನಿಲ್, ತಾಲೂಕು ಕೃಷಿಕ ಸಮಾಜದ ಸದಸ್ಯರಾದ ಗೋಪಾಲರೆಡ್ಡಿ, ರಾಮಣ್ಣ, ದೊಡ್ಡಬಸವರಾಜ, ಹೋಬಳಿ ಕೃಷಿ ಅಧಿಕಾರಿಗಳು, ‘ಆತ್ಮ'''''''' ಯೋಜನೆಯ ಉಪಯೋಜನಾ ನಿರ್ದೇಶಕಿ ಕವಿತಾ ಕುಮಾರಿ ಹಾಗೂ ‘ಕೃಷಿ ಸಂಜೀವಿನಿ'''''''' ಸಿಬ್ಬಂದಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಶ್ನೆಪತ್ರಿಕೆ ಸೋರಿಕೆ ಮರುಕಳಿಸದಂತೆ ಕಠಿಣ ಕ್ರಮ: ಜೋಶಿ
ಬರಗಾಲದ ಬೇಗೆಯಲ್ಲಿ ತೋಟಗಾರಿಕೆ ಬೆಳೆಗಾರರು ಕಂಗಾಲು