ಬಳ್ಳಾರಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಚಾಲ್ತಿಯಲ್ಲಿದ್ದು, ಖಾಸಗಿ ನಿವಾಸಿಗಳು ಮತ್ತು ಮೇಲ್ವಿಚಾರಕರು ರೈತರ ಜಮೀನು ಬೆಳೆಗಳ ಮಾಹಿತಿಯನ್ನು ನಿಖರವಾಗಿ ನಮೂದಿಸಬೇಕು. ಇದಕ್ಕೆ ಆಯಾ ತಾಲೂಕು ತಹಸೀಲ್ದಾರರು ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.
ತಾಲೂಕು ಮಟ್ಟದ ಸಮಿತಿಯ ಮೂಲಕ ಬೆಳೆ ಸಮೀಕ್ಷೆ ಚಟುವಟಿಕೆ ನಡೆಸಲು ಗ್ರಾಮವಾರು ಖಾಸಗಿ ನಿವಾಸಿಗಳು ಮತ್ತು ಮೇಲ್ವಿಚಾರಕರನ್ನು ನೇಮಿಸಬೇಕು. ಅವರಿಗೆ ಅಗತ್ಯ ತರಬೇತಿ ನೀಡಬೇಕು ಎಂದು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದು, ಎಲ್ಲ ವಿಧದ ಬೆಳೆಗಳು ಮತ್ತು ಮಿಶ್ರ ಬೆಳೆಗಳ ಮಾಹಿತಿ ನಮೂದಿಸಬೇಕು. ಇದಕ್ಕೆ ರೈತರ ಸಹಕಾರ ಪಡೆಯಬೇಕು ಎಂದು ತಿಳಿಸಿದರು.ಬೆಳೆ ಸಮೀಕ್ಷೆಯ ಕಾರ್ಯ ಸೆ. 31ರ ವರೆಗೆ ನಡೆಯಲಿದ್ದು, ಗ್ರಾಮವಾರು ಪಟ್ಟಿ ಮಾಡಿಕೊಂಡು ಗುರಿ ನಿಗದಿಪಡಿಸಿ ಪೂರ್ಣಗೊಳಿಸಬೇಕು. ಆಯಾ ತಹಸೀಲ್ದಾರರು ವಾರಕ್ಕೊಮ್ಮೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಬೆಳೆ ನಷ್ಟ ಪರಿಹಾರ, ಕನಿಷ್ಠ ಬೆಂಬಲ ಬೆಲೆ ಯೋಜನೆ, ಪಹಣಿಯಲ್ಲಿ ಬೆಳೆ ನಮೂದು ಮಾಡಲು, ಬೆಳೆ ವಿಮಾ ಯೋಜನೆ, ಬೆಳೆ ಸಾಲ ಇತ್ಯಾದಿ ಸೌಲಭ್ಯ ಒದಗಿಸಲು ಬಳಸಲಾಗುವುದು.
ರೈತರು ತಮ್ಮ ಬೆಳೆಗಳ ಮಾಹಿತಿ ನಮೂದು ಮಾಡಬಹುದು. ಒಂದು ವೇಳೆ ಸ್ವತಃ ರೈತರೆ ತಮ್ಮ ಬೆಳೆ ದಾಖಲು ಮಾಡಲು ಗೊಂದಲವಿದ್ದಲ್ಲಿ ಗ್ರಾಮಕ್ಕೆ ನಿಯೋಜಿಸಿರುವ ಖಾಸಗಿ ನಿವಾಸಿ (ಪಿ.ಆರ್.)ಗಳನ್ನು ಸಂಪರ್ಕಿಸಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಪಿ.ಆರ್. ಆ್ಯಪ್ ಮೂಲಕ ದಾಖಲಿಸಬಹುದು ಎಂದರು.ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಎಎಸ್ಪಿ ನವೀನ್ ಕುಮಾರ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.